ಮೈಸೂರು: ‘ನಾಟಕಗಳ ಪ್ರದರ್ಶನಕ್ಕೆ ಹಣ ಹೊಂದಿಸುವುದು ಮತ್ತು ರಂಗಮಂದಿರಗಳನ್ನು ಹುಡುಕುವುದೇ ಸವಾಲಿನ ಕೆಲಸವಾಗಿದೆ’ ಎಂದು ರಂಗಕರ್ಮಿ ರಾಮೇಶ್ವರಿ ವರ್ಮಾ ಬೇಸರ ವ್ಯಕ್ತಪಡಿಸಿದರು.
ರಂಗವಲ್ಲಿ ತಂಡದಿಂದ ನಗರದ ಕಿರುರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ 3 ದಿನಗಳ ‘ರಂಗವಲ್ಲಿ ರಂಗಸಂಭ್ರಮ ನಾಟಕೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದು ಸಣ್ಣ ನಾಟಕ ಪ್ರದರ್ಶನಕ್ಕೂ ₹50 ಸಾವಿರ ವೆಚ್ಚವಾಗುತ್ತದೆ. ಸರ್ಕಾರಿ ರಂಗಮಂದಿರಗಳಂತೂ ಕೆಲವೇ ತಂಡಗಳಿಗೆ ಸೀಮಿತವಾಗಿದೆಯೇ ಎಂಬ ಅನುಮಾನ ಮೂಡುತ್ತದೆ’ ಎಂದರು.
‘ಊರಿಗೊಂದೇ ರಂಗಮಂದಿರ ಎಂಬಂತೆ ಕಿರುರಂಗಮಂದಿರದ ಕಥೆಯಾಗಿದೆ. ಎಲ್ಲ ತಂಡಗಳಿಗೂ ರಂಗಮಂದಿರ ಲಭ್ಯವಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಯಾರೋ ಒಬ್ಬರು ಬ್ಲಾಕ್ ಮಾಡಿಕೊಂಡು, ಕಾಳಸಂತೆಯಲ್ಲಿ ಪಡೆದುಕೊಳ್ಳುವಂತೆ ಆಗಬಾರದು’ ಎಂದು ಕೋರಿದರು.
ಚಲನಚಿತ್ರ ನಿರ್ದೇಶಕ ಎನ್.ಎಸ್.ಇಸ್ಲಾಹುದ್ದೀನ್ ಮಾತನಾಡಿ, ‘ರಂಗವಲ್ಲಿ ಶಿಸ್ತುಬದ್ಧ ಸಂಸ್ಥೆಯಂತೆ ಕೆಲಸ ಮಾಡಿದೆ. ನಾಟಕಗಳು ಅನೇಕ ಪ್ರದರ್ಶನಗಳನ್ನು ಕಾಣುವಂತೆ ಮಾಡುವ ಮೂಲಕ ಬಂಡವಾಳವನ್ನು ಸೃಷ್ಟಿಸಿದೆ. ಹೊಸ ಯೋಜನೆಗಳನ್ನು ಕೈಗೊಂಡಿದೆ. ಈ ಮಾದರಿ ನಿಜಕ್ಕೂ ಶ್ಲಾಘನೀಯ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ‘ರಂಗಸಂಸ್ಥೆಗಳು ನಾಟಕಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಹೊಸ ನಾಟಕ ಸೃಷ್ಟಿಸುವ ಸಂತಸ ಹೆಚ್ಚು ಮಹತ್ವದ್ದಾಗಿರುತ್ತದೆ’ ಎಂದು ಹೇಳಿದರು.
ವೈ.ಎಂ.ಪುಟ್ಟಣ್ಣಯ್ಯ ಮತ್ತು ತಂಡದಿಂದ ರಂಗಸಂಗೀತಾಂಜಲಿ ನಡೆಯಿತು.
ರಂಗವಲ್ಲಿ ಸ್ಥಾಪಕ ಸದಸ್ಯ ಎಚ್.ಆರ್.ರವಿಪ್ರಸಾದ್, ನಾಟಕೋತ್ಸವ ಸಮಿತಿ ಸಂಚಾಲಕ ಮಂಜುನಾಥ ಶಾಸ್ತ್ರಿ ಇದ್ದರು.
ಪರಸ್ಪರ ದಮನಕಾರಿ ವ್ಯವಸ್ಥೆ ಸೃಷ್ಟಿಯಾಗಿರುವ ಈ ಕಾಲಘಟ್ಟದಲ್ಲಿ ರಂಗಭೂಮಿಯು ಸಹೃದಯ ಸಂವಾದದ ಮೂಲಕ ಜಗತ್ತನ್ನು ಎದುರಿಸಬೇಕು-ಸತೀಶ್ ತಿಪಟೂರು ನಿರ್ದೇಶಕ ರಂಗಾಯಣ
ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ರಂಗಭೂಮಿಗೆ ಯುವಜನರನ್ನು ಸೆಳೆಯುವ ಅಗತ್ಯವಿದೆ. ಹೊಸತನವನ್ನು ಅಪ್ಪಿಕೊಳ್ಳುವಲ್ಲಿ ಇನ್ನಷ್ಟು ಕೆಲಸವಾಗಬೇಕು-ಎನ್.ಎಸ್.ಇಸ್ಲಾಹುದ್ದೀನ್ ಚಲನಚಿತ್ರ ನಿರ್ದೇಶಕ
‘ಸಮಸ್ಯೆ ಇರಬಹುದು ಸೂಕ್ತ ನಿರ್ಧಾರ ತೆಗೆದುಕೊಳ್ಳೋಣ’
‘ರಂಗಮಂದಿರಗಳನ್ನು ಆನ್‌ಲೈನ್ ಮೂಲಕ ಬುಕ್ ಮಾಡಲಾಗುತ್ತದೆ. ಪರಿಶೀಲನೆಯ ನಡುವೆಯೂ ಒಂದೇ ಸಂಸ್ಥೆಗೆ ಬುಕಿಂಗ್ ಮಾಡಿರುವ ಬುಕ್ ಮಾಡಿದ ಕೆಲವರು ಇತರರಿಗೆ ಸ್ಥಳ ನೀಡಿರುವ ಘಟನೆಗಳು ನಡೆದಿರಬಹುದು. ಜಿಲ್ಲೆಯ ಎಲ್ಲ ರಂಗ ತಂಡಗಳು ಸಂಸ್ಥೆಗಳ ಒಂದು ಗುಂಪನ್ನು ಮಾಡಿ ಶೀಘ್ರದಲ್ಲೇ ಈ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ. ಎಲ್ಲರಿಗೂ ಸೂಕ್ತ ಅವಕಾಶ ಸಿಗುವಂತೆ ನಿರ್ಧರಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.