ADVERTISEMENT

‘ತಂತ್ರಜ್ಞಾನದಿಂದ ಬದುಕು ಸರಳ’

ವಿದ್ಯಾವರ್ಧಕ ಕಾಲೇಜಿನಲ್ಲಿ ‘ವಿದ್ಯುತ್ 2024’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 13:58 IST
Last Updated 3 ಮೇ 2024, 13:58 IST
ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ವಿದ್ಯುತ್ 2024’ ಕಾರ್ಯಕ್ರಮವನ್ನು ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು
ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ವಿದ್ಯುತ್ 2024’ ಕಾರ್ಯಕ್ರಮವನ್ನು ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು   

ಮೈಸೂರು: ‘ತಂತ್ರಜ್ಞಾನ ನಮ್ಮ ಬದುಕನ್ನು ಸರಳೀಕರಿಸಿದೆ. ಇದರಿಂದಾಗಿ ನಾವು ಬಾಹ್ಯಾಕಾಶದ ಅನ್ವೇಷಣೆ ನಡೆಸುವಷ್ಟು, ಚಂದ್ರನನ್ನೇ ತಲುಪುವಷ್ಟು ಸದೃಢರಾಗಿದ್ದೇವೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.

ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರದಿಂದ ಆಯೋಜಿಸಿರುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ವಿದ್ಯುತ್ 2024’ ಉದ್ಘಾಟಿಸಿ ಮಾತನಾಡಿ, ‘ತಂತ್ರಜ್ಞಾನ ಹೊಸ ಆವಿಷ್ಕಾರಗಳಿಗೆ ಮುನ್ನುಡಿ ಬರೆಯುತ್ತಿದ್ದು, ಆಕಾಶ ಮುಟ್ಟುವುದು ಸುಲಭ ಎಂಬಂತಾಗಿದೆ’ ಎಂದರು.

‘ಆವಿಷ್ಕಾರವು ಮಾನವ ಚತುರತೆಯ ಮಾಪಕವಾಗಿದೆ. ನಮ್ಮಿಂದ ಸ್ಫೂರ್ತಿ ಪಡೆದ ಅನೇಕ ದೇಶಗಳು ಇಂದು ಚಂದ್ರಯಾನ ಮಿಷನ್ ಕೈಗೊಳ್ಳುತ್ತಿವೆ. ನಮ್ಮ ನೆರೆಹೊರೆ ದೇಶಗಳ ನಡುವೆ ಇಂದು ಸ್ಪರ್ಧಾತ್ಮಕ ಮನೋಭಾವ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಕಾರ್ಯಕ್ರಮ ನೂರಾರು ಹೊಸ ಆವಿಷ್ಕಾರಕ್ಕೆ ದಾರಿಯಾಗಲಿದೆ’ ಎಂದು ಆಶಿಸಿದರು.

ADVERTISEMENT

‘ಜೀವನದಲ್ಲಿ ಸಂತೋಷವನ್ನು ಮನಃಪೂರ್ವಕವಾಗಿ ಆಸ್ವಾದಿಸಿ, ತಪ್ಪುದಾರಿಯಲ್ಲಿ ಪಯಣಿಸಬೇಡಿ. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಒಳ್ಳೆಯ ನಾಗರಿಕರಾಗಿ ಬಾಳ್ವೆ ನಡೆಸಿ. ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ನಿಮ್ಮ ಸ್ಥಾನಮಾನದ ಘನತೆ ಮತ್ತು ಗೌರವವನ್ನು ಸದಾ ಪ್ರಜ್ವಲಿಸುವಂತೆ ಮಾಡಿ’ ಎಂದು ಸಲಹೆ ನೀಡಿದರು.

ವಿದ್ಯುತ್ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಬಿ.ಜಗದೀಶ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮ್ಮಣ್ಣನವರ್, ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.