ADVERTISEMENT

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರ: ಯಾರ ‘ಬಲ’ ವೃದ್ಧಿಗೆ ಜನರ ‘ಕೈ’?

ಸಿಎಂ ಸಿದ್ದರಾಮಯ್ಯ– ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಚುನಾವಣೆ

ಎಂ.ಮಹೇಶ
Published 26 ಏಪ್ರಿಲ್ 2024, 8:18 IST
Last Updated 26 ಏಪ್ರಿಲ್ 2024, 8:18 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ರಾಜಪರಿವಾರದ ಪ್ರತಿನಿಧಿ ಹಾಗೂ ಸಾಮಾನ್ಯ ಕಾರ್ಯಕರ್ತನ ನಡುವಿನ ಹಣಾಹಣಿಯಿಂದಾಗಿ ದೇಶದ ಗಮನಸೆಳೆದಿರುವ ‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರ’ದ ಚುನಾವಣೆಯಲ್ಲಿ ಮತದಾರರು ಯಾರ ‘ಕೈ’ ಬಲಪಡಿಸಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯ ಪಾಲಾಗಿದ್ದ ಈ ಕ್ಷೇತ್ರಕ್ಕೆ ಏ.26ರಂದು ನಡೆಯುತ್ತಿರುವ ಚುನಾವಣೆಯಲ್ಲಿ ಆ ಪಕ್ಷದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಎನ್‌ಡಿಎ ಮೈತ್ರಿಕೂಟದ ಭಾಗವಾದ ಜೆಡಿಎಸ್‌ ಕೂಡ ಕೈಜೋಡಿಸಿದೆ. ಅವರ ವಿರುದ್ಧ ಕಾಂಗ್ರೆಸ್‌ನ ಎಂ.ಲಕ್ಷ್ಮಣ ತೊಡೆ ತಟ್ಟಿದ್ದಾರೆ. ಕ್ಷೇತ್ರದ ಚುನಾವಣೆಯಲ್ಲಿ ಇವರಿಬ್ಬರೂ ಹೊಸ ಮುಖಗಳು.

ಇಲ್ಲಿನ ಈ ಬಾರಿಯ ಚುನಾವಣೆಯು ಅಭ್ಯರ್ಥಿಗಳಿಗಿಂತಲೂ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ– ಪ್ರಧಾನಿ ನರೇಂದ್ರ ಮೋದಿ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿದೆ. ಇಬ್ಬರೂ ತಮಗೆ ಶಕ್ತಿ ತುಂಬುವಂತೆ ಜನರಲ್ಲಿ ಕೋರಿಕೊಂಡಿರುವುದು ಇದಕ್ಕೆ ಕಾರಣ. ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’– ಮೋದಿ ಗ್ಯಾರಂಟಿ ಹಣಾಹಣಿಯಲ್ಲಿ ಯಾರ ಕೈಮೇಲಾಗಲಿದೆ ಎಂಬುದು ತೀರ್ಮಾನವಾಗಲು ಕ್ಷಣಗಣನೆ ಆರಂಭವಾಗಿದೆ.

ADVERTISEMENT

ರಾಜಕೀಯ ಭವಿಷ್ಯದ ಮೇಲೆ: ಇಲ್ಲಿ 18 ಮಂದಿ ಕಣದಲ್ಲಿದ್ದಾರಾದರೂ ನೇರ ಹಣಾಹಣಿ ಕಂಡುಬಂದಿರುವುದು ಕಾಂಗ್ರೆಸ್‌ ಮತ್ತು ಎನ್‌ಡಿಎ ಮೈತ್ರಿಕೂಟದ ನಡುವೆಯೇ. ಈ ಚುನಾವಣೆಯು ಅಭ್ಯರ್ಥಿಗಳ ರಾಜಕೀಯ ಭವಿಷ್ಯದೊಂದಿಗೆ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರ ರಾಜಕೀಯ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದಲೇ ಕಾಂಗ್ರೆಸ್‌–ಎನ್‌ಡಿಎ ಮೈತ್ರಿಕೂಟ ತೀವ್ರ ಪೈಪೋಟಿಗಿಳಿದಿವೆ.

ಹೋದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್– ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆಗ ಬಿಜೆಪಿಯ ಅಭ್ಯರ್ಥಿ ಪ್ರತಾಪ ಸಿಂಹ ಗೆದ್ದಿದ್ದರು. ಈ ಬಾರಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಇದಕ್ಕೆ ಮತದಾರರ ಪ್ರತಿಕ್ರಿಯೆ ಹೇಗಿರಲಿದೆ, ಫಲಿತಾಂಶ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 

‘ಅಭ್ಯರ್ಥಿ ಬದಲಿಸಿದ’ ಬಿಜೆಪಿಯ ವರಿಷ್ಠರ ಲೆಕ್ಕಾಚಾರಕ್ಕೆ ಮತದಾರರ ಸ್ಪಂದನೆ ಏನು, ಯಾರ ವರ್ಚಸ್ಸು ಹೆಚ್ಚಿಸಲು ‘ಹಕ್ಕುದಾರರು’ ತಮ್ಮ ‘ಕೈ’ ಜೋಡಿಸಿದ್ದಾರೆ ಎನ್ನುವುದು ಶುಕ್ರವಾರ ವಿದ್ಯುನ್ಮಾನ ಮತಯಂತ್ರಗಳ ‘ಒಡಲು’ ಸೇರಲಿದೆ.

ನರೇಂದ್ರ ಮೋದಿ
ಅಭ್ಯರ್ಥಿಗಳಿಗಿಂತಲೂ ನಾಯಕರಿಗೆ ಪ್ರತಿಷ್ಠೆ ಫಲಿಸುವುದೇ ಬಿಜೆಪಿ–ಜೆಡಿಎಸ್ ಮೈತ್ರಿ? ಯಾರ ವರ್ಚಸ್ಸಿಗೆ ಮತದಾರರ ಜೈಕಾರ?
ಬಿಜೆಪಿಯ ವಿಶ್ವಾಸ
ಬಿಜೆಪಿಯು ಮೈಸೂರು ರಾಜವಂಶಕ್ಕೆ ಸೇರಿದ ಅಭ್ಯರ್ಥಿ ಕಣಕ್ಕಿಳಿಸಿ ಜನರಲ್ಲಿರುವ ‘ಗೌರವದ ಭಾವನೆ’ಯ ಲಾಭ ಪಡೆದುಕೊಳ್ಳಲು ಮುಂದಾಗಿದೆ ಹಾಗೂ ಮೋದಿ ಗ್ಯಾರಂಟಿಯನ್ನೂ ಮುಂದು ಮಾಡಿದೆ. ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್‌ ನಂಬಿಕೊಂಡಿದೆ ಹಾಗೂ ಮೈತ್ರಿಯ ಕಾರಣದಿಂದ ಜೆಡಿಎಸ್‌ ಅನುಯಾಯಿಗಳು ಬೆಂಬಲಿಗರು ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದೆ. 8ರಲ್ಲಿ 3 ವಿಧಾನಸಭಾ ಕ್ಷೇತ್ರಗಳಲ್ಲಿ ‘ಮೈತ್ರಿಕೂಟ’ದ ಶಾಸಕರಿದ್ದಾರೆ. ಖುದ್ದು ಪ್ರಧಾನಿಯೇ ಇಲ್ಲಿಗೆ ಬಂದು ಮತ ಯಾಚಿಸಿದ್ದಾರೆ. ಜೆಡಿಎಸ್‌ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಜಿ.ಡಿ.ಹರೀಶ್‌ಗೌಡ ಕೂಡ ತಮ್ಮ ಕ್ಷೇತ್ರದಲ್ಲಿ ಯದುವೀರ್ ಜತೆ ಪ್ರಚಾರ ಮಾಡಿದ್ದಾರೆ.
ಕಾಂಗ್ರೆಸ್‌ ಭರವಸೆ ‘ಗ್ಯಾರಂಟಿ’
ಕಾಂಗ್ರೆಸ್ 47 ವರ್ಷಗಳ ಬಳಿಕ ಒಕ್ಕಲಿಗ ಸಮಾಜಕ್ಕೆ ಸೇರಿದ ಕಾರ್ಯಕರ್ತನಿಗೆ ಟಿಕೆಟ್ ನೀಡಿ ‘ಒಕ್ಕಲಿಗಾಸ್ತ್ರ’ದೊಂದಿಗೆ ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು ಹಾಗೂ ದಲಿತರ ಮತಗಳನ್ನು ನೆಚ್ಚಿಕೊಂಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಭಾವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್‌ ಶಾಸಕರ ಬಲ ಇರುವುದರಿಂದ ‘ಗೆಲುವಿನ ದಡ’ ಸೇರಬಹುದು ಎಂಬ ವಿಶ್ವಾಸದಲ್ಲಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದಲೇ ಸಿದ್ದರಾಮಯ್ಯ ಅವರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರ ನಡೆಸಿದ್ದಾರೆ; ಪಕ್ಷದ ಶಾಸಕರು ಮಾಜಿ ಶಾಸಕರು ಮುಖಂಡರು ಮತ್ತು ಪದಾಧಿಕಾರಿಗಳಿಗೆ ‘ಮತ ಟಾರ್ಗೆಟ್’ ಕೊಟ್ಟಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.