ಮೈಸೂರು: ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಸಾಂಪ್ರದಾಯಿಕ ಹಾಗೂ ವಿಷಯಾಧಾರಿತ ಮತಗಟ್ಟೆಗಳು ರೂಪುಗೊಳ್ಳುತ್ತಿವೆ. ಐದು ಕಡೆಗಳಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳು ಮತದಾರರನ್ನು ಸ್ವಾಗತಿಸಲಿವೆ.
ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್, ಹುಣಸೂರು ತಾಲ್ಲೂಕಿನ ನಾಗಾಪುರದ ಆಶ್ರಮ ಶಾಲೆ, ಎಚ್.ಡಿ.ಕೋಟೆ ತಾಲ್ಲೂಕಿನ ಬಿ.ಮಟಕೆರೆ, ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ, ವರುಣ ಕ್ಷೇತ್ರದ ತಾಂಡವಪುರ ಮತಗಟ್ಟೆಗಳನ್ನು ಸಾಂಪ್ರದಾಯಿಕವಾಗಿ ಸಿಂಗರಿಸಲು ಸ್ವೀಪ್ ಸಮಿತಿ ನಿರ್ಧರಿಸಿದೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ಮದುವೆ ಚಪ್ಪರ, ಹಳ್ಳಿ ಮನೆಯಂತೆ ನಿರ್ಮಿಸಲಾಗಿತ್ತು. ತೆಂಗಿನ ಗರಿ, ಬಿದಿರು, ಬಾಳೆಗಿಡಗಳಿಂದ ಸಿಂಗರಿಸಲಾಗಿತ್ತು. ಲೋಕಸಭಾ ಚುನಾವಣೆಗೆ ಅವು ಹೇಗೆ ಭಿನ್ನವಾಗಿ ನಿರ್ಮಾಣವಾಗಲಿವೆ ಎಂಬ ಕುತೂಹಲ ಜನರಲ್ಲಿದೆ.
ಜಿಲ್ಲೆಯ 11 ಮತಗಟ್ಟೆಗಳನ್ನು ವಿಷಯಾಧಾರಿತವಾಗಿ ಸಿಂಗರಿಸಲು ‘ಸ್ವೀಪ್’ ಸೂಚಿಸಿದೆ. ಜನರಿಗೆ ಪರಿಸರ, ಕ್ರೀಡೆ, ನೀರಿನ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ 11 ಮತಗಟ್ಟೆ ರೂಪಿಸಲಾಗುತ್ತಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಮಕ್ಕಳ ಸುರಕ್ಷತೆ, ಕೆ.ಆರ್.ನಗರ ತಾಲ್ಲೂಕಿನ ಅರಕೆರೆಕೊಪ್ಪಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾಗತಿಕ ತಾಪಮಾನ ಹೆಚ್ಚಳದ ಕುರಿತು ಮಾಹಿತಿ ನೀಡುವ ಮತಗಟ್ಟೆ ನಿರ್ಮಾಣವಾಗಲಿದೆ.
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯಲ್ಲಿ ಜಲ ಸಂರಕ್ಷಣೆ, ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಗ್ರಾಮದ ಅರಣ್ಯ ಇಲಾಖೆ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣೆ, ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲದ ಬಂಕಹಳ್ಳಿಯಲ್ಲಿ ಕೃಷಿ ಅಭಿವೃದ್ಧಿ ಕುರಿತು, ಚಾಮುಂಡೇಶ್ವರಿ ಕ್ಷೇತ್ರದ ಯಾದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮೈಸೂರಿನ ಪಾರಂಪರಿಕ ಕಲೆಗಳ ಬಗ್ಗೆ ಪ್ರದರ್ಶನವಿರಲಿದೆ.
ಕೃಷ್ಣರಾಜ ಕ್ಷೇತ್ರದ ಕುರುಬರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಕಾಪಾಡುವ ಕುರಿತು, ಚಾಮರಾಜ ಕ್ಷೇತ್ರದ ಭಾರತೀಯ ಭವನದಲ್ಲಿ ಜಾನಪದ ಕಲೆ ಮತ್ತು ಗ್ರಾಮೀಣ ಕ್ರೀಡೆ, ನರಸಿಂಹರಾಜ ಕ್ಷೇತ್ರದ ಮತಗಟ್ಟೆಯಲ್ಲಿ ಮಹಿಳಾ ಸಬಲೀಕರಣ ದೇಶದ ಪ್ರಗತಿಗೆ ಕಾರಣ ವಿಷಯದಲ್ಲಿ ಮತಗಟ್ಟೆ ಸಿಂಗಾರವಾಗಲಿದೆ.
ವರುಣ ಕ್ಷೇತ್ರದ ಮಲ್ಲೂಪುರದಲ್ಲಿ ವರ್ಲಿ ಕಲೆ ಹಾಗೂ ತಿ.ನರಸೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ‘ಹಸಿರೇ ಉಸಿರು’ ಹೆಸರಿನಲ್ಲಿ ಮತಗಟ್ಟೆಯನ್ನು ಸಿಂಗಾರ ಮಾಡಲಾಗುತ್ತದೆ ಎಂದು ಸ್ವೀಪ್ ಸಮಿತಿ ತಿಳಿಸಿದೆ.
11 ಮತಗಟ್ಟೆಗಳನ್ನು ವಿವಿಧ ವಿಷಯಾಧಾರಿತವಾಗಿ ಸಿಂಗರಿಸಲಿದ್ದೇವೆ. ಮತದಾರರಿಗೆ ಜಾಗೃತಿ ಮೂಡಿಸುವ ಮಾಧ್ಯಮವಾಗಿಯೂ ಮತಗಟ್ಟೆ ಬಳಕೆಯಾಗಲಿದೆ.ಕೆ.ಎಂ.ಗಾಯಿತ್ರಿ ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.