ADVERTISEMENT

ಪ್ರಧಾನಿ ಮೋದಿ ಭೇಟಿ: ಟಿಕೆಟ್ ಆಕಾಂಕ್ಷೆ ಇಟ್ಟುಕೊಂಡಿಲ್ಲ ಎಂದ ತೇಜಸ್ವಿನಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 14:26 IST
Last Updated 23 ಜುಲೈ 2023, 14:26 IST
ತೇಜಸ್ವಿನಿ ಅನಂತಕುಮಾರ್
ತೇಜಸ್ವಿನಿ ಅನಂತಕುಮಾರ್   

ಮೈಸೂರು: ‘ನಾನು ಪಕ್ಷದಿಂದ ಟಿಕೆಟ್‌ ಸೇರಿದಂತೆ ಏನನ್ನೂ ಕೇಳಿಲ್ಲ. ಪತಿ ದಿವಂಗತ ಅನಂತ್‌ಕುಮಾರ್ ಹಾದಿಯಲ್ಲಿ ಹಾಗೂ ಯಾವುದೇ ಆಕಾಂಕ್ಷೆ ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂಬ ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್‌ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೆಯೂ ನಾನು ಯಾವುದೇ ಅವಕಾಶ ಕೇಳಿಲ್ಲ; ಈಗಲೂ ಕೇಳುವುದಿಲ್ಲ. ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಕೊಟ್ಟರೆ ನೋಡೋಣ. ಎಲ್ಲದಕ್ಕೂ ಸಮಯವೇ ಉತ್ತರ ಕೊಡಲಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಚೆಗೆ ಭೇಟಿಯಾಗಿದ್ದೆ. ದೆಹಲಿಗೆ ಬಂದು ಕಾಣುವಂತೆ ಚುನಾವಣಾ ಪ್ರಚಾರದ ವೇಳೆ ಆಹ್ವಾನ ನೀಡಿದ್ದರು. ಬಹಳ ದಿನಗಳ ನಂತರ ಭೇಟಿಯಾಗಿದ್ದೆ. ರಾಜಕಾರಣದ ಬಗ್ಗೆ ಚರ್ಚೆ ನಡೆದಿದೆ’ ಎಂದರು.

ADVERTISEMENT

‘ನಾನು ಬಿಜೆಪಿಯಲ್ಲಿದ್ದೇನೆ. ಪತಿ ಕಟ್ಟಿ ಬೆಳೆಸಿದ ಪಕ್ಷವಿದು. ನಾನು ಬಿಜೆಪಿ ಸಿದ್ಧಾಂತದ ಜೊತೆ ಬದ್ಧವಾಗಿದ್ದೇನೆ. ಪಕ್ಷವೂ ನನ್ನ ಜೊತೆಗಿದೆ’ ಎಂದು ಕಾಂಗ್ರೆಸ್ ಸೇರ್ಪಡೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದರು.

‘ಸೂಕ್ತವಾದ ವಿರೋಧ ಪಕ್ಷದ ನಾಯಕ ಆಯ್ಕೆಯಾಗುತ್ತಾರೆ, ಕಾದು ನೋಡಿ’ ಎಂದು ಪ್ರತಿಕ್ರಿಯಿಸಿದರು.

‘ಸೋಲು– ಗೆಲುವು ಇದ್ದೇ ಇರುತ್ತದೆ. ಸೋಲಿನಿಂದ ಪಾಠ ಕಲಿಯುವುದು ಮುಖ್ಯ. ಖಂಡಿತವಾಗಿಯೂ ಬದಲಾವಣೆ ಮಾಡಿಕೊಂಡು ಮುಂದೆ ಗೆಲುವಿನ ಕಡೆಗೆ ಹೋಗುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.