ADVERTISEMENT

ಆಷಾಢ ಮಾಸದ ನಾಲ್ಕನೇ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 12:42 IST
Last Updated 22 ಜುಲೈ 2022, 12:42 IST
   

ಮೈಸೂರು: ಆಷಾಢ ಮಾಸದ ನಾಲ್ಕನೇ ಶುಕ್ರವಾರದ ಪ್ರಯುಕ್ತ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದರು. ದೇವಿಗೆ ‘ಸಿಂಹವಾಹಿನಿ’ ಅಲಂಕಾರ ಮಾಡಲಾಗಿತ್ತು.

ಮುಂಜಾನೆಯಿಂದಲೇ ಚಳಿ, ತುಂತುರು ಮಳೆಯಲ್ಲೇ ಕೊಡೆ ಹಿಡಿದ ಭಕ್ತರು ಮೆಟ್ಟಿಲು ಹತ್ತಿದರು. ದಾರಿಯುದ್ದಕ್ಕೂ ಜಯಘೋಷ ಮೊಳಗಿಸಿದರು. ಅರಿಶಿಣ –ಕುಂಕುಮವನ್ನು 1,101 ಮೆಟ್ಟಿಲುಗಳಿಗೆ ಹಚ್ಚಿ ಹರಕೆ ತೀರಿಸಿದರು. ಕಳೆದ ಮೂರು ಆಷಾಢ ಶುಕ್ರವಾರಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು.

ತಮಿಳುನಾಡಿನಿಂದ ಭಕ್ತರ ಆಗಮನ: ನಾಲ್ಕನೇ ಆಷಾಢ ಶುಕ್ರವಾರ ತಮಿಳುನಾಡಿನ ಭಕ್ತರಿಗೆ ‘ಆದಿ ಶುಕ್ರವಾರ’ವಾದ್ದರಿಂದ ಈರೋಡ್‌, ಸೇಲಂ, ಸತ್ಯಮಂಗಲ, ಚೆನ್ನೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ವಿಶೇಷ ಪೂಜೆಯನ್ನು ಸಲ್ಲಿಸಿದರು.

ADVERTISEMENT

ಬೆಳಿಗ್ಗೆಯಿಂದಲೇ ಪೂಜೆ: ಮುಂಜಾನೆ 3.30ರಿಂದ ದೇಗುಲದಲ್ಲಿ ಪೂಜೆ ಆರಂಭವಾಯಿತು. ದೇವಿಯ ಮೂರ್ತಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಮಾಭಿಷೇಕ, ಸಹಸ್ರ ನಾಮಾರ್ಚನೆ ಸಲ್ಲಿಸಲಾಯಿತು. ಬೆಳಿಗ್ಗೆ 5.30ಕ್ಕೆ ದೇವಿಗೆ ಸಿಂಹವಾಹಿನಿ ಅಲಂಕಾರ ಪೂರ್ಣಗೊಳಿಸಲಾಯಿತು. ನಂತರ ಬೆಳಿಗ್ಗೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶ ನೀಡಲಾಯಿತು.

ದೇಗುಲವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರಸಾದ ವಿನಿಯೋಗ ನಡೆಯಿತು. ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಎಂದಿನಂತೆ ಜನರು ವಾಹನಗಳನ್ನು ಲಲಿತಮಹಲ್‌ ಅರಮನೆ ಸಮೀಪದ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್‌ಗಳಲ್ಲಿ ಬೆಟ್ಟಕ್ಕೆ ಉಚಿತವಾಗಿ ಪ್ರಯಾಣಿಸಿದರು.

ಭಕ್ತರೊಂದಿಗೆ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಚಲನಚಿತ್ರ ನಟ ದರ್ಶನ್‌ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು, ಭಕ್ತರು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಭಕ್ತರತ್ತ ಕೈಬೀಸಿದ ಅವರು ಪೊಲೀಸರ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದರು. ಈಶ್ವರಪ್ಪ, ನಾಗೇಂದ್ರ ಕುಟುಂಬ ಸಮೇತರಾಗಿ ಆಗಮಿಸಿದ್ದರು.

ಸಚಿವ ಈಶ್ವರಪ್ಪ ಮಾತನಾಡಿ, ‘ಪ್ರತಿವರ್ಷವೂ ಆಷಾಢ ಶುಕ್ರವಾರದಂದು ನಾಡನ್ನು ಕಾಯುವ ನಾಡದೇವಿ ಚಾಮುಂಡೇಶ್ವರಿಯ ದರ್ಶನ ಮಾಡಿ ಆಶೀರ್ವಾದ ಪಡೆಯುವುದು ವಾಡಿಕೆ. ಹಾಗಾಗಿ ಈ ಬಾರಿಯೂ ಕುಟುಂಬ ಸಮೇತ ಬಂದಿದ್ದೇನೆ. ನನಗೂ, ಕುಟುಂಬಕ್ಕೂ, ನಾಡಿಗೂ ಒಳ್ಳೆಯದಾಗಲಿಯೆಂದು ಪ್ರಾರ್ಥಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.