ಮೈಸೂರು: ದೇಶದಲ್ಲೇ 3ನೇ ಅತಿದೊಡ್ಡ ನಂದಿ ವಿಗ್ರಹ ಎಂದು ಗುರುತಿಸಿಕೊಂಡಿರುವ ಇಲ್ಲಿನ ಚಾಮುಂಡಿ ಬೆಟ್ಟದ ನಂದಿಗೆ ಇಂದು ಮಹಾಭಿಷೇಕ ಸಂಭ್ರಮ.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್‌ನಿಂದ 19ನೇ ವರ್ಷದ ಮಹಾಭಿಷೇಕ ನಡೆಯುತ್ತಿದ್ದು, 34 ಬಗೆ ದ್ರವ್ಯಗಳೂ ಸೇರಿದಂತೆ 38 ವಿಧಗಳಲ್ಲಿ ಅಭಿಷೇಕಕ್ಕೆ ಸಿದ್ಧತೆ ಮಾಡಲಾಗಿದೆ.
1659ರಿಂದ 1673ರವರೆಗೆ ಮೈಸೂರನ್ನು ಆಳಿದ ದೊಡ್ಡ ದೇವರಾಜ ಒಡೆಯರ್ ಕಾಲದಲ್ಲಿ ನಂದಿಯ ನಿರ್ಮಾಣವಾಗಿದ್ದು, 350ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ದೇವಾಲಯದ ನಂದಿ ಹಾಗೂ ಆಂಧ್ರಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಸ್ಥಾನದ ನಂದಿಯನ್ನು ಹೊರತುಪಡಿಸಿದರೆ ಇದೇ ಬೃಹದಾಕಾರದ ನಂದಿ.
ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟ ಹತ್ತುವ ಹಾದಿಯಲ್ಲಿ 700ನೇ ಮೆಟ್ಟಿಲಿನ ಬಳಿ ಈ ಏಕಶಿಲಾ ಮೂರ್ತಿಯನ್ನು ನಿರ್ಮಿಸಲಾಗಿದ್ದು, 16 ಅಡಿ ಎತ್ತರ ಹಾಗೂ 25 ಅಡಿ ಉದ್ದವಿದೆ. ತನ್ನ ಸೂಕ್ಷ್ಮವಾದ ಕೆತ್ತನೆ ಹಾಗೂ ಅಲಂಕಾರಿಕ ಲಕ್ಷಣಗಳ ಮೂಲಕ ಉಳಿದ ನಂದಿಗಳಿಗಿಂತ ಅತ್ಯಂತ ಸುಂದರವಾಗಿದ್ದು, ಶಿಲ್ಪಕಲೆ ಚಾತುರ್ಯಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ.
ಅಭಿಷೇಕ ಇತಿಹಾಸಕ್ಕೆ ದಾಖಲೆಯ ಕೊರತೆ: ‘ದೊಡ್ಡ ದೇವರಾಜ ಒಡೆಯರ್ ಕಾಲದಲ್ಲಿ ಚಾಮುಂಡಿ ಬೆಟ್ಟವು ಮಹಾಬಲ ಬೆಟ್ಟವೆಂದು ಪ್ರಸಿದ್ಧವಾಗಿತ್ತು. ಹಾಗಾಗಿ ಮಹಾಬಲನ ವಾಹನವಾದ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಆತನ ಕಾಲದಲ್ಲಿ ಅಭಿಷೇಕ ನಡೆದಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನೂರಾರು ವರ್ಷಗಳ ನಂತರ ಅರಮನೆಯಲ್ಲಿ ಲಿಂಗಾಯತ ಅಧಿಕಾರಿಗಳು ಪ್ರಬಲವಾಗಿದ್ದಾಗ ಅಭಿಷೇಕ ನಡೆದಿರಬಹುದು ಆದರೆ, ಅದನ್ನು ಸಮರ್ಥಿಸುವುದಕ್ಕೂ ಅರಮನೆಯಲ್ಲಿ ಯಾವುದೇ ದಾಖಲೆಗಳಿಲ್ಲ’ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸುತ್ತೂರು ಅಥವಾ ಹೊಸಮಠದ ಸ್ವಾಮೀಜಿ ಬೆಂಬಲದಲ್ಲಿ ಶ್ರೀಮಂತ ಲಿಂಗಾಯತ ವರ್ತಕರು ಕೆಲ ವರ್ಷ ಅಭಿಷೇಕ ಮಾಡಿರಬಹುದು. ಅದೂ ನಿರಂತರವಾಗಿ ನಡೆದಿಲ್ಲ. ಹಾಗಾಗಿ ಯಾವುದೇ ಉಲ್ಲೇಖವಿಲ್ಲ’ ಎಂದರು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಖಜಾಂಚಿ ವಿ.ಎನ್.ಸುಂದರ್ ಮಾತನಾಡಿ, ‘ನಮಗೆ ತಿಳಿದಂತೆ ಹೊಸಮಠದಿಂದ ಅಭಿಷೇಕ ನಡೆಯುತ್ತಿತ್ತು. 2006ರಿಂದ ನಮ್ಮ ಸಮಿತಿಯು ನಂದಿ ಅಭಿಷೇಕದ ಕಾರ್ಯ ಮಾಡುತ್ತಿದೆ. 2016ರಿಂದ ಟ್ರಸ್ಟ್ ಸ್ಥಾಪಿಸಿ ಅಧಿಕೃತವಾಗಿ ಪುರಾತತ್ವ ಇಲಾಖೆ ಅನುಮತಿಯೊಂದಿಗೆ ಅಭಿಷೇಕ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಅಭಿಷೇಕಕ್ಕೆ ಬಿರುಸಿನ ತಯಾರಿ
ಬೆಟ್ಟದ ನಂದಿ ವಿಗ್ರಹದ ಬಳಿ ಟ್ರಸ್ಟ್ ಸಿಬ್ಬಂದಿ ನೇತೃತ್ವದಲ್ಲಿ ಮಜ್ಜನಕ್ಕೆ ಶನಿವಾರ ತಯಾರಿ ನಡೆಯಿತು. ‘ಅಟ್ಟಣಿಗೆ ರಚಿಸುವ ಕೆಲಸ ಪೂರ್ಣಗೊಂಡಿದ್ದು ಹೂವಿನ ಅಲಂಕಾರವೂ ಸಂಪೂರ್ಣಗೊಂಡಿದೆ. ಭಾನುವಾರ ಮುಂಜಾನೆ ಮಜ್ಜನಕ್ಕೆ ಅಗತ್ಯವಾದ ದ್ರವ್ಯಗಳ ತಯಾರಿ ಮಾಡಲಾಗುತ್ತದೆ. ಬೆಳಿಗ್ಗೆ 8ಕ್ಕೆ ಅಭಿಷೇಕ ಆರಂಭವಾಗುತ್ತದೆ’ ಎಂದು ಟ್ರಸ್ಟ್ ಅಧ್ಯಕ್ಷ ಎಸ್.ಪ್ರಕಾಶನ್ ‘ಪ್ರಜಾವಾಣಿ’ಗೆ ತಿಳಿಸಿದರು. ವಿವಿಧ ವರ್ಣದಲ್ಲಿ ಕಂಗೊಳಿಸಲಿದೆ ನಂದಿ: ಹಾಲು ಮೊಸರು ಸಕ್ಕರೆ ಹಾಗೂ ಭಸ್ಮಗಳ ಮಜ್ಜನದಿಂದ ಶ್ವೇತವರ್ಣದಲ್ಲಿ ಅರಿಸಿನ ಚಂದನದ ಅಭಿಷೇಕದೊಂದಿಗೆ ಹಳದಿ ಬಣ್ಣ ಕುಂಕುಮ ಸಿಂಧೂರ ರಕ್ತ ಚಂದನದಲ್ಲಿ ಮಿಂದು ಕೆಂಪು ರಂಗಿನಲ್ಲಿ ವಿಗ್ರಹವೂ ಕಂಗೊಳಿಸಲಿದೆ. ತುಪ್ಪ ಜೇನುತುಪ್ಪ ಎಳನೀರು ಕಬ್ಬಿನ ಹಾಲು ನಿಂಬೆ ತೈಲ ಬಾಳೆಹಣ್ಣು ದ್ರಾಕ್ಷಿ ಬೇಲ ಖರ್ಜೂರ ಸೌತೆಕಾಯಿ ಗೋಧಿ ಹಿಟ್ಟು ಅಕ್ಕಿಹಿಟ್ಟು ಹೆಸರು ಹಿಟ್ಟು ದರ್ಬೆ ಪತ್ರೆ ಹಾಗೂ ಪುಷ್ಪಾಭಿಷೇಕ ಕನಕಾಭಿಷೇಕದಲ್ಲಿ ನಂದಿ ಮಿಂದೇಳಲಿದೆ. ಪಂಚಾಮೃತ ಶಾಲ್ಯಾನ್ನ ರುದ್ರಾಭಿಷೇಕ ಹಾಗೂ ಸುಗಂಧ ದ್ರವ್ಯ ಅಭಿಷೇಕ ಮತ್ತು ಪಂಚಕಲಶ ವಿಸರ್ಜನೆ ನಡೆಯಲಿದೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ ಟ್ರಸ್ಟ್ ಸಿದ್ಧತೆ ಮಾಡಿದೆ.
‘ವಿಗ್ರಹದ ಸುರಕ್ಷೆ ಸ್ವಚ್ಛತೆಗೆ ಆದ್ಯತೆ ನೀಡಿ’
‘ನಂದಿ ವಿಗ್ರಹಕ್ಕೆ ಅಭಿಷೇಕ ಮಾಡುವ ಕ್ರಮ ಉತ್ತಮವಾಗಿದ್ದು ಅಭಿಷೇಕದಲ್ಲಿ ಬಳಸುವ ಅನೇಕ ವಸ್ತುಗಳು ಮೂರ್ತಿಯನ್ನು ವಾತಾವರಣದಿಂದ ರಕ್ಷಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಅಭಿಷೇಕಕ್ಕೆಂದು ಅಟ್ಟಣಿಗೆ ರಚಿಸುವಾಗ ವಿಗ್ರಹದಿಂದ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಹಾನಿಯಾಗದಂತೆ ರಚಿಸಬೇಕು. ಅಭಿಷೇಕದ ಬಳಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಸದಸ್ಯ ಎನ್.ಎಸ್.ರಂಗರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.