ಮೈಸೂರು: ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನ ಹಳೇ ಕಟ್ಟಡ ಕುಸಿದು ಎರಡು ವರ್ಷ ಕಳೆದಿದ್ದು, ಹೊಸ ಕಟ್ಟಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಸ್ಥಳಾವಕಾಶದ ಕೊರತೆಯಿಂದಾಗಿ ಪಾಳಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.
1917ರಲ್ಲಿ ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರಿಂದ ಸ್ಥಾಪಿತಗೊಂಡ ಕಾಲೇಜಿಗೆ ರಾಜರ ಕಾಲದಲ್ಲೇ ಭವ್ಯ ಕಟ್ಟಡವೂ ನಿರ್ಮಾಣ ಆಗಿದ್ದು, ಶತಮಾನಕ್ಕೂ ಅಧಿಕ ಕಾಲ ಬಾಳಿದ್ದ ಕಟ್ಟಡದ ಒಂದು ಭಾಗ ಎರಡು ವರ್ಷದ ಹಿಂದಷ್ಟೇ ಕುಸಿದಿತ್ತು. ಅಂದಿನಿಂದ ಆ ಕಟ್ಟಡ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಪಕ್ಕದಲ್ಲಿನ ಮತ್ತೊಂದು ಕಟ್ಟಡಕ್ಕೆ ಕಾಲೇಜನ್ನು ಸ್ಥಳಾಂತರಿಸಲಾಗಿದೆ. ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ₹54 ಕೋಟಿ ಮೀಸಲಿಟ್ಟಿದ್ದು, ಕಳೆದ ಮಾರ್ಚ್‌ನಲ್ಲಿ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. ಆದಾಗ್ಯೂ ಇನ್ನೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
3500 ವಿದ್ಯಾರ್ಥಿನಿಯರು: ಗ್ರಾಮೀಣ ಯುವತಿಯರ ಉನ್ನತ ಶಿಕ್ಷಣದ ಕನಸು ನನಸಾಗಿದ ಶಿಕ್ಷಣ ಸಂಸ್ಥೆಗಳಲ್ಲಿ ಮಹಾರಾಣಿ ವಿಜ್ಞಾನ ಕಾಲೇಜಿಗೆ ವಿಶಿಷ್ಟ ಸ್ಥಾನವಿದೆ. ಪ್ರಸ್ತುತ ಇಲ್ಲಿ ಪದವಿ ವಿಭಾಗದಲ್ಲಿ 3 ಸಾವಿರ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ 500 ಸೇರಿದಂತೆ ಒಟ್ಟು 3500 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಪದವಿ ವಿಭಾಗದಲ್ಲಿ ಬಿ.ಎಸ್ಸಿ ಹಾಗೂ ಬಿಸಿಎ ವಿಷಯದಲ್ಲಿ 18 ಕೋರ್ಸುಗಳಲ್ಲಿ ಕಲಿಕೆಯ ಅವಕಾಶ ಒದಗಿಸಲಾಗಿದೆ. ಇಲ್ಲಿಗೆ ಬರುವ ವಿದ್ಯಾರ್ಥಿನಿಯರಲ್ಲಿ ಶೇ 80–90ರಷ್ಟು ಮಂದಿ ಗ್ರಾಮೀಣರೇ ಆಗಿದ್ದಾರೆ.
ಸದ್ಯ ಹಳೇ ಕಟ್ಟಡಕ್ಕೆ ಹೊಂದಿಕೊಡಂತೆ ಇರುವ ಒಂದೇ ಕಟ್ಟಡದಲ್ಲಿ ಅಷ್ಟೂ ತರಗತಿಗಳು ನಡೆದಿವೆ. 15 ಕೊಠಡಿಗಳನ್ನೂ ಕಲಿಕೆಗೆ ಬಳಸಿಕೊಳ್ಳಲಾಗಿದೆ. ಅದು ಸಾಲದ ಕಾರಣ ಬೆಳಿಗ್ಗೆ ಕೆಲವು ತರಗತಿಗಳು ಹಾಗೂ ಮಧ್ಯಾಹ್ನ ಕೆಲವು ವಿಭಾಗದ ತರಗತಿಗಳು ನಡೆಯುತ್ತಿವೆ. ಮೂರು ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳಿದ್ದು, ಅದಕ್ಕೂ ಜಾಗ ಸಾಲದಾಗಿದೆ. ಕಾಲೇಜಿನಲ್ಲಿ ಇನ್ನಷ್ಟು ಸೌಕರ್ಯ ಕಲ್ಪಿಸಲು ಸ್ಥಳಾವಕಾಶದ ಕೊರತೆ ಕಾಡುತ್ತಿದೆ.
ಮಣ್ಣು ಪರೀಕ್ಷೆ ಪೂರ್ಣ: ಈಗ ಇರುವ ಹಳೇ ಕಟ್ಟಡವನ್ನು ಕೆಡವಿ ಅಲ್ಲಿಯೇ ಮೂರು ಅಂತಸ್ತಿನ ಕಟ್ಟಡಕ್ಕೆ ಸರ್ಕಾರ ಯೋಜಿಸಿದೆ. ಒಟ್ಟು 6554 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಕಟ್ಟಡ ನಿರ್ಮಾಣ ಆಗಲಿದೆ. ಇದಕ್ಕೆ ಉನ್ನತ ಶಿಕ್ಷಣ ಇಲಾಖೆಯು ಅನುಮೋದನೆ ನೀಡಿದ್ದು, ಸಂಬಂಧಿಸಿದ ಏಜೆನ್ಸಿಗಳು ಈಗಾಗಲೇ ಮಣ್ಣು ಪರೀಕ್ಷೆ ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಿವೆ. ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಶಂಕುಸ್ಥಾಪನೆಗೆ ನೆರವೇರಿಸುವುದು ಬಾಕಿ ಇದೆ.
ಕಾಲೇಜು ಹಾಗೂ ವಿದ್ಯಾರ್ಥಿನಿಲಯದ ಕಟ್ಟಡಗಳ ನಿರ್ಮಾಣಕ್ಕೆ ಉನ್ನತ ಶಿಕ್ಷಣ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ಸಿಗಲಿದೆ.ಅಬ್ದುಲ್ ರಹಿಮಾನ್, ಪ್ರಾಚಾರ್ಯ ಮಹಾರಾಣಿ ವಿಜ್ಞಾನ ಕಾಲೇಜು
ಕೊಠಡಿ ಕೊರತೆಯ ಕಾರಣಕ್ಕೆ ಬೆಳಿಗ್ಗೆ 8ಕ್ಕೆ ತರಗತಿ ಆರಂಭ ಆಗುತ್ತಿದ್ದು ಗ್ರಾಮೀಣ ವಿದ್ಯಾರ್ಥಿನಿಯರು ಅಷ್ಟು ಬೇಗ ಬರುವುದು ಕಷ್ಟ. ಆದಷ್ಟು ಶೀಘ್ರ ಹೊಸ ಕಟ್ಟಡ ನಿರ್ಮಾಣ ಮಾಡಬೇಕುಶಮಿತಾ, ವಿದ್ಯಾರ್ಥಿನಿ
ಹೊಸ ವಿದ್ಯಾರ್ಥಿನಿಲಯಗಳ ನಿರ್ಮಾಣ
ಮಹಾರಾಣಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದ ಜೊತೆಗೇ ಎರಡು ಹೊಸ ವಿದ್ಯಾರ್ಥಿನಿಲಯಗಳೂ ತಲೆ ಎತ್ತಲಿವೆ. ಕಾಲೇಜಿನ ಎದುರು ಈಗ ಇರುವ ವಿದ್ಯಾರ್ಥಿನಿಲಯಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಯೋಜಿಸಿದ್ದು ಅದಕ್ಕಾಗಿ ₹116 ಕೋಟಿ ಅನುದಾನ ನೀಡಿದೆ.
9248 ಚದರ ಮೀಟರ್ ವಿಸ್ತೀರ್ಣದಲ್ಲಿ ಒಟ್ಟು ಆರು ಅಂತಸ್ತಿನ ಕಟ್ಟಡ ತಲೆ ಎತ್ತಲಿದೆ. ಕಾಮಗಾರಿ ಆರಂಭಗೊಂಡ ಬಳಿಕ ವಿದ್ಯಾರ್ಥಿನಿಲಯದಲ್ಲಿನ ವಿದ್ಯಾರ್ಥಿನಿಯರನ್ನು ಇನ್ನೊಂದು ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಯೋಜನೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.