ADVERTISEMENT

ಜಿಲ್ಲೆಯಾದ್ಯಂತ ಶಿವನಾಮ ಸ್ಮರಣೆ, ಜಾಗರಣೆ

ಮಹಾಶಿವರಾತ್ರಿ: ದೇಗುಲಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 5:30 IST
Last Updated 9 ಮಾರ್ಚ್ 2024, 5:30 IST
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಗುರುಕುಲದ 101 ಶಿವಲಿಂಗಗಳ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು –ಪ್ರಜಾವಾಣಿ ಚಿತ್ರ
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಗುರುಕುಲದ 101 ಶಿವಲಿಂಗಗಳ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು –ಪ್ರಜಾವಾಣಿ ಚಿತ್ರ   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಜನರು ಸಂಭ್ರಮ–ಸಡಗರ, ಭಕ್ತಿಭಾವದಿಂದ ಶುಕ್ರವಾರ ಆಚರಿಸಿದರು. ಶಿವನ ದೇಗುಲಗಳಲ್ಲಿ ಶಿವನಾಮ ಸ್ಮರಣೆ, ಜಾಗರಣೆ ನಡೆಯಿತು.

ಶಿವಾಲಯಗಳಲ್ಲಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಆವರಣವನ್ನು ವಿವಿಧ ಹೂವುಗಳು, ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿತು. ಭಕ್ತರು ಕುಟುಂಬ ಸಮೇತ ಬಂದು ದೇವರ ದರ್ಶನ ಪಡೆದು ಪುನೀತ ಭಾವ ತಳೆದರು. ಹಲವರು ಉಪವಾಸ ವ್ರತ ಆಚರಿಸಿ ಇಷ್ಟಾರ್ಥ ಸಿದ್ಧಿಗೆ ದೇವರನ್ನು ಪ್ರಾರ್ಥಿಸಿದರು. ದೇವರಿಗೆ ವಿವಿಧ ಅಭಿಷೇಕ, ಅರ್ಚನೆ, ಅಲಂಕಾರಗಳು ನೆರವೇರಿದವು. ಬಿಲ್ವಪತ್ರೆ, ಪುಷ್ಪ, ಹಾಲು ತಂದಿದ್ದ ಭಕ್ತರು ಮೂರ್ತಿಗೆ ಅಭಿಷೇಕ ಮಾಡಿಸಿ ಒಳಿತಿಗೆ ಪ್ರಾರ್ಥಿಸಿದರು.

ದೇಗುಲಗಳಲ್ಲಿ ರಾತ್ರಿ ನಡೆದ ಜಾಗರಣೆಯಲ್ಲಿ ಈಶ್ವರನ ನಾಮಸ್ಮರಣೆ ಅನುರಣಿಸಿತು. ಇದರಿಂದಾಗಿ ದೇಗುಲಗಳು ಭಕ್ತರಿಂದ ತುಂಬಿ ಹೋಗಿದ್ದವು.

ADVERTISEMENT

ಚಿನ್ನದ ಕೊಳಗ ಆಕರ್ಷಣೆ: ಅರಮನೆ ಮುಜರಾಯಿ ದೇವಾಲಯಗಳಲ್ಲಿ ಒಂದಾದ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಶಿವಲಿಂಗಕ್ಕೆ ಚಿನ್ನದ ಕೊಳಗ (ಮುಖವಾಡ) ಧಾರಣೆ ಮಾಡಲಾಗಿತ್ತು. ಇದನ್ನು ವೀಕ್ಷಿಸಲು ಮತ್ತು ಪೂಜೆ ಸಲ್ಲಿಸಲು ಬೆಳಿಗ್ಗೆಯಿಂದಲೇ ಭಕ್ತರ ಸರದಿ ಸಾಲು ಕಂಡುಬಂತು. ಶುಕ್ರವಾರ ಬೆಳಿಗ್ಗೆ ದೇಗುಲದಲ್ಲಿ ಅರ್ಚನೆ, ಅಭಿಷೇಕ ನಡೆಯಿತು. ಕೊಳಗ ಧಾರಣೆ ನಂತರ ಭಕ್ತರಿಗೆ ರಾತ್ರಿಯವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವರಾಹ ದ್ವಾರದಿಂದ ಪ್ರವೇಶ ನೀಡಲಾಗಿತ್ತು. ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಕುಟುಂಬ ಸಮೇತ ಬಂದು ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿತರಣೆಯಲ್ಲೂ ಭಾಗಿಯಾದರು.

ರಾಮಾನುಜ ರಸ್ತೆಯ ಗುರುಕುಲದ ನೂರೊಂದು ಶಿವಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೈಮುಲ್‌ ಡೇರಿ ಸಮೀಪದಲ್ಲಿರುವ ಮಲೆಮಹದೇಶ್ವರ ದೇವಸ್ಥಾನ, ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇಗುಲ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲ ಮೊದಲಾದ ಕಡೆಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯ ಚಂದ್ರಕಲಾ ಆಸ್ಪತ್ರೆ ಸಮೀಪ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯವು ಶಿವರಾತ್ರಿ ಪ್ರಯುಕ್ತ 21 ಅಡಿ ಎತ್ತರ ಶಿವಲಿಂಗ ಸ್ಥಾಪಿಸಿದ್ದು, ಅದನ್ನು ವೀಕ್ಷಿಸಲು ಭಕ್ತರು ಬಂದಿದ್ದರು.

ಚಾಮರಾಜಪುರಂನ ಗೀತಾ ರಸ್ತೆಯಲ್ಲಿನ ಪ್ರಸನ್ನ ವಿಶ್ವೇಶ್ವರ ಸ್ವಾಮಿ, ಖಿಲ್ಲೆ ಮೊಹಲ್ಲಾದ ಭೈರವೇಶ್ವರಸ್ವಾಮಿ, ಅಶೋಕ ರಸ್ತೆಯ ಮುಕ್ಕಣ್ಣೇಶ್ವರ ಸ್ವಾಮಿ, ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನ, ಬೋಗಾದಿಯ ನಾಗೇಶ್ವರ ಭೋಗೇಶ್ವರಸ್ವಾಮಿ, ಕುಂಬಾರಕೊಪ್ಪಲು, ಸಿದ್ದಪ್ಪ ಚೌಕ, ಹೊಸಕೇರಿ, ಬನ್ನೂರು ರಸ್ತೆ ಮೊದಲಾದ ಕಡೆಗಳಲ್ಲಿರುವ ಮಹದೇಶ್ವರ ದೇವಾಲಯ, ಸುತ್ತೂರು ಮಠದಲ್ಲೂ  ವಿಶೇಷ ಆಚರಣೆ ನಡೆದವು.

ವಿಶೇಷ ಅಲಂಕಾರ: ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಸನ್ನ ಶಿವಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು.

ಕಾಮೇಶ್ವರ ಕಾಮೇಶ್ವರಿ ದೇವಸ್ಥಾನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೈಂಕರ್ಯ ಸಭಾದಿಂದ ನಗರದ ರಾಮಾನುಜ ರಸ್ತೆಯ ಕಾಮೇಶ್ವರ ಕಾಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಏಕದಶವಾರ ರುದ್ರಾಭಿಷೇಕ, ಅಷ್ಠವದಾನ ಸೇವೆ ಮೊದಲಾದ ಪೂಜೆ ಸಲ್ಲಿಸಲಾಯಿತು. ಅಮ್ಮನವರ ಸಹಿತ ವಿಜಯ ವಿಶ್ವೇಶ್ವರಸ್ವಾಮಿ ಪ್ರಾಕಾರೋತ್ಸವವೂ ಜರುಗಿತು. ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇವರನಾಮ, ಭಜನೆ, ಭಕ್ತಿಗೀತೆಗಳು, ವಾದ್ಯಸಂಗೀತ ಹಾಗೂ ಸುಗಮ ಸಂಗೀತವನ್ನು ಕಲಾವಿದರು ಪ್ರಸ್ತುತಪಡಿಸಿದ್ದು ಭಕ್ತರಲ್ಲಿ ಭಕ್ತಿಭಾವ ಹೆಚ್ಚಿಸಿತು.

ಲಷ್ಕರ್‌ ಮೊಹಲ್ಲಾದ ಗರಡಿಕೇರಿಯ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹದೇಶ್ವರ ಸ್ವಾಮಿ ಪ್ರಾಣಲಿಂಗಕ್ಕೆ ಮಹಾರುದ್ರಾಭಿಷೇಕ, ಹಾಲಭಿಷೇಕ, ಬಿಲ್ವಾರ್ಚನೆ, ನಿವೇದನೆ, ದೂಪದಾರತಿ, ತುಪ್ಪದಾರತಿ, ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿತು. ಸಂಜೆ ವಿಶೇಷ ಮಹಾರುದ್ರಾಭಿಷೇಕ ಹಾಗೂ ಉತ್ಸವ ಮೂರ್ತಿ ಮತ್ತು ಸುವರ್ಣ ಕೊಳಗದ ಮೆರವಣಿಗೆ ನಡೆಯಿತು.

ವಿ.ವಿ. ಮೊಹಲ್ಲಾದ ದೇವಸ್ಥಾನ ರಸ್ತೆಯ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಮುಂಜಾಗ್ರತಾ ಕ್ರಮವಾಗಿ ದೇಗುಲಗಳ ಬಳಿ ಹಾಗೂ ನಗರದಾದ್ಯಂತ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿಗಳು, ಹಣ್ಣುಗಳು ಮೊದಲಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಕಂಡುಬಂತು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಗುರುಕುಲದ 101 ಶಿವಲಿಂಗಗಳ ದೇವಾಲಯದಲ್ಲಿ ಲೋಹ ಶೋಧಕ ಅಳವಡಿಸಲಾಗಿತ್ತು
ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಗುರುಕುಲದ 101 ಶಿವಲಿಂಗಗಳ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪೂಜೆ ಸಲ್ಲಿಸಲು ನೂರಾರು ಭಕ್ತರು ಸರದಿ ಸಾಲಿನಲ್ಲಿ ಬಂದರು
ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಸನ್ನ ಶಿವಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿದರು
ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲು ಭಕ್ತರು ಸರದಿ ಸಾಲಿನಲ್ಲಿ ಬಂದರು –ಪ್ರಜಾವಾಣಿ ಚಿತ್ರ
ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಶಿವಲಿಂಗಕ್ಕೆ ಮಹಾಶಿವರಾತ್ರಿ ಅಂಗವಾಗಿ ಚಿನ್ನದ ಕೊಳಗ (ಮುಖವಾಡ)ವನ್ನು ಶುಕ್ರವಾರ ಧರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು –ಪ್ರಜಾವಾಣಿ ಚಿತ್ರ
ಮೈಸೂರಿನ ಕೆ.ಜಿ. ಕೊಪ್ಪಲಿನ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರ
ಮೈಸೂರು ಅರಮನೆ ಆವರಣದ ತ್ರಿನೇಶ್ವರ ಸ್ವಾಮಿ ದೇವಾಲಯದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ದಂಪತಿ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಪ್ರಸಾದ ಬಡಿಸಿದರು

ಹೆಮ್ಮನಹಳ್ಳಿಯಲ್ಲಿ ಜಾತ್ರೆ

ತಾಲ್ಲೂಕಿನ ಬೋಗಾದಿ ರಸ್ತೆಯ ಕೆ. ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 30ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ನೆರವೇರಿತು. ಬೆಳಿಗ್ಗೆಯಿಂದ ಪ್ರತಿ ಆರು ತಾಸಿಗೊಮ್ಮೆ ರುದ್ರಾಭಿಷೇಕ ಅಲಂಕಾರ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಗ್ರಾಮದ ಮಕ್ಕಳು ಮತ್ತು ಹಿರಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ರಾತ್ರಿ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು ‘ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನ ನೀಡಿದರು. ‘ದಕ್ಷಿಣ ಕಾಶಿ’ ಎಂದೇ ಖ್ಯಾತಿ ಗಳಿಸಿರುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.