ಎಚ್.ಡಿ.ಕೋಟೆ: ಭರಣಿ ಮಳೆ ಸಕಾಲಕ್ಕೆ ಸುರಿಯದಿದ್ದರಿಂದ ಭೂಮಿಗೆ ಹತ್ತಿ ಬೀಜ ಹಾಕದ ತಾಲ್ಲೂಕಿನ ರೈತರು; ಹೆಚ್ಚಿನ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತಿದ್ದಾರೆ.
ಏಪ್ರಿಲ್ ಅಂತ್ಯದಲ್ಲಿ ಮಳೆಯಾಗಿದ್ದರೆ 30 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಹತ್ತಿ ಬೆಳೆಯುತ್ತಿದ್ದರು. ಇದೀಗ 22,841 ಹೆಕ್ಟೇರ್‌ನಲ್ಲಿ ಮಾತ್ರ ಹತ್ತಿ ಬಿತ್ತಿದ್ದಾರೆ. ತಡವಾಗಿ ಬಿತ್ತಿದರೆ ಇಳುವರಿ ಸಿಗಲ್ಲ ಎಂಬ ಕಾರಣಕ್ಕೆ ಬಹುತೇಕರು ಮುಸುಕಿನ ಜೋಳ ಬೆಳೆದಿದ್ದಾರೆ. 8,300 ಹೆಕ್ಟೇರ್ ಗುರಿಯಿದ್ದ ಮುಸುಕಿನ ಜೋಳ, 15,480 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
‘ಈ ಬಾರಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ, ಖರೀದಿಸದಿದ್ದರೆ ತಾಲ್ಲೂಕಿನ ರೈತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ’ ಎನ್ನುತ್ತಾರೆ ರೈತ ಚೆನ್ನಬಸವಾಚಾರಿ.
‘ಎಚ್.ಡಿ.ಕೋಟೆ, ಸರಗೂರು ರಾಜ್ಯದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ತಾಲ್ಲೂಕು ಎಂದೇ ಖ್ಯಾತಿ ಪಡೆದಿವೆ. ಈ ಬಾರಿ ಮಳೆ ಕೊರೆತೆಯಿಂದ ಹತ್ತಿ ಬಿತ್ತಲಾಗಲಿಲ್ಲ. ಹತ್ತಿ ಬೆಳೆಯಲ್ಲಿ ನಾವು ಗಳಿಸುವಷ್ಟು ಆದಾಯವನ್ನು ಮುಸುಕಿನ ಜೋಳದಲ್ಲಿ ಗಳಿಸುವುದು ಅಸಾಧ್ಯ’ ಎಂದು ರೈತ ವಿಜಯ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ವಾಡಿಕೆಯಂತೆ 50.78 ಸೆಂ.ಮೀ. ವರ್ಷಧಾರೆಯಾಗಬೇಕು. ಈ ವರ್ಷ 44.77 ಸೆಂ.ಮೀ. ಮಾತ್ರ ಮಳೆ ಆಗಿದೆ. ಶೇ 12ರಷ್ಟು ಕೊರತೆಯಾಗಿದೆ.
ಸರಗೂರು ತಾಲ್ಲೂಕಿನಲ್ಲಿ ವಾಡಿಕೆಯಂತೆ 55.65 ಸೆಂ.ಮೀ. ಮಳೆ ಸುರಿಯಬೇಕು. ಈ ವರ್ಷ 33.96 ಸೆಂ.ಮೀ. ಮಾತ್ರ ಮಳೆ ಸುರಿದಿದ್ದು, ಶೇ 29ರಷ್ಟು ಕೊರತೆ ಉಂಟಾಗಿದೆ.
ಕಬಿನಿ, ತಾರಕ ಜಲಾಶಯಗಳ ನೀರಿನಿಂದ ಬೆಳೆಯುವ 8,500 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿ ಚುರುಕುಗೊಂಡಿದೆ.
ತಾಲ್ಲೂಕಿನಲ್ಲಿ ನಿಗದಿತ ಗುರಿ 1,500 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಿದೆ. ಇದೀಗ ಕೊಯ್ಲು ಆರಂಭವಾಗಿದ್ದು, ಬ್ಯಾರನ್‌ಗಳಲ್ಲಿ ಹದಗೊಳಿಸುವ ಪ್ರಕ್ರಿಯೆ ನಡೆದಿದೆ.
‘ಅರೆ ಮಲೆನಾಡು ಎಂದೇ ಹೆಸರುವಾಸಿಯಾಗಿರುವ ತಾಲ್ಲೂಕಿನಲ್ಲಿ ನೀರಾವರಿಗಿಂತ ಮಳೆಯಾಧಾರಿತ ಕೃಷಿಯೇ ಹೆಚ್ಚಿದೆ. ಕಬಿನಿ, ತಾರಕ, ನುಗು ಜಲಾಶಯಗಳಿದ್ದರೂ ಎಚ್.ಡಿ.ಕೋಟೆ, ಸರಗೂರು ತಾಲ್ಲೂಕಿಗೆ ಹೆಚ್ಚಿನ ಪ್ರಯೋಜನವಿಲ್ಲ. ಈ ಜಲಾಶಯಗಳು ನಂಜನಗೂಡು, ತಿ.ನರಸೀಪುರ, ಕೊಳ್ಳೇ ಗಾಲ ಸೇರಿದಂತೆ ತಮಿಳುನಾಡಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ’ ಎಂದು ಬೀರಂಬಳ್ಳಿ ಪ್ರಭಾಕರ್ ಹೇಳಿದರು.
‘ಐಆರ್ 64, ಜಯ, ಜ್ಯೋತಿ, ಆರ್‌ಎನ್ಆರ್, ತನು, ಎಂಟಿಯು-1001 ಸೇರಿದಂತೆ ಇತರೆ ತಳಿಯ ಭತ್ತದ ತಳಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿವೆ. 1,500 ಕ್ವಿಂಟಾಲ್ ಬಿತ್ತನೆ ಭತ್ತದಲ್ಲಿ ಈಗಾಗಲೇ 770 ಕ್ವಿಂಟಲ್ ವಿತರಣೆ ಆಗಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಕೆ.ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.