ADVERTISEMENT

ಮಲೇರಿಯಾ ಮುಕ್ತ ಜಿಲ್ಲೆಗೆ ಪಣ

‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಕಾರ್ಯಕ್ರಮ ಆರಂಭ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:29 IST
Last Updated 29 ಜೂನ್ 2019, 19:29 IST
ಮೈಸೂರಿನ ಅಶೋಕಪುರಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ವತಿಯಿಂದ ಶನಿವಾರ ನಡೆದ ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎಂಬ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಹಸಿರು ನಿಶಾನೆ ತೋರಿದರು
ಮೈಸೂರಿನ ಅಶೋಕಪುರಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ವತಿಯಿಂದ ಶನಿವಾರ ನಡೆದ ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎಂಬ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಹಸಿರು ನಿಶಾನೆ ತೋರಿದರು   

ಮೈಸೂರು: ಮೈಸೂರು ಮಲೇರಿಯಾ ಮುಕ್ತ ಜಿಲ್ಲೆ ಆಗುವತ್ತ ದಾಪುಗಾಲಿಡುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದರು.

ಅವರು ಇಲ್ಲಿನ ಅಶೋಕಪುರಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ವತಿಯಿಂದ ಶನಿವಾರ ನಡೆದ ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

2017ರಿಂದ ಇಲ್ಲಿಯವರೆಗೆ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಹೀಗಾಗಿ, ಮಲೇರಿಯಾ ಮುಕ್ತ ಜಿಲ್ಲೆ ಎಂದು ಘೋಷಣೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

ADVERTISEMENT

‘ಮಲೇರಿಯಾ ಕೊನೆಗಾಣಿಸಲು ಸಿದ್ಧರಾಗಿ’, ‘ಕೀಟ ಚಿಕ್ಕದು ಕಾಟ ದೊಡ್ಡದು’ ಇವೇ ಮೊದಲಾದ ನಾಮಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.

ಇದಕ್ಕೂ ಮುನ್ನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿದ ಅವರು, ಮಲೇರಿಯಾವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರೂ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯೆ ಬೇಗಂ (ಪಲ್ಲವಿ) ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೆ ನಗರಕ್ಕೆ ಮತ್ತೊಮ್ಮೆ ಸ್ವಚ್ಛನಗರಿಯ ಗರಿಮೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಅಶೋಕಪುರಂನ 6ನೇ ತಿರುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹೊರಟ ಮೆರವಣಿಗೆಯೂ ರಾಮಾಯ್ಯರ್ ರಸ್ತೆ ಮೂಲಕ ಆಶೋಕಪುರಂನ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಮರಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಅಂತ್ಯಗೊಂಡಿತು.

ಪಾಲಿಕೆ ಸದಸ್ಯರಾದ ಭುವನೇಶ್ವರಿ, ಕಾರ್ಯಕ್ರಮ ಅಧಿಕಾರಿಗಳಾದ ಡಾ.ಉಮೇಶ್, ಡಾ. ಕುಸುಮಾ, ಡಾ.ದೇವಿ, ಸಿರಾಜ್‌ ಅಹಮ್ಮದ್, ರವಿ, ಮಂಜು ಪ್ರಸಾದ್, ಆನಂದ್ ಹಾಗೂ ಆಶಾ ಕಾರ್ಯಕರ್ತರೆಯರು ಜಾಥಾದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.