ಮೈಸೂರು: ಕೋವಿಡ್ ಸಾಂಕ್ರಾಮಿಕ ಸೋಂಕಿನ ತೀವ್ರತೆ ಕ್ಷೀಣಿಸಿದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಸ್ವಾಗತಾರ್ಹ. ಆದರೆ ಎಲ್ಲರನ್ನೂ ಉತ್ತೀರ್ಣಗೊಳಿಸುವುದು, ಎ, ಬಿ, ಸಿ ಗ್ರೇಡಿಂಗ್ ಕೊಡುವುದು ಅವೈಜ್ಞಾನಿಕ. ಶಿಕ್ಷಣ ಇಲಾಖೆ ತನ್ನ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.
ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರು, ಶಿಕ್ಷಣ ತಜ್ಞರು, ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವರಿಗೆ ಮೂರು ಪತ್ರ ಬರೆದಿದ್ದರೂ; ಅದನ್ನು ಪರಿಗಣಿಸದೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸುವ ಮಾನದಂಡವೂ ಅವೈಜ್ಞಾನಿಕವಾಗಿದೆ. ಇದು ಮುಂದಿನ ದಿನಗಳಲ್ಲಿ ಉದ್ಯೋಗದ ಭವಿಷ್ಯಕ್ಕೆ ಕಂಟಕವಾಗಲಿದೆ. ಇದೊಂದು ಕಾನೂನು ಬಾಹಿರ ಕ್ರಮವಾಗಲಿದೆ ಎಂದಿದ್ದಾರೆ ಮರಿತಿಬ್ಬೇಗೌಡ.
ಅನುದಾನರಹಿತ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸದಿರುವುದು ರಾಜ್ಯ ಸರ್ಕಾರದ ತಾರತಮ್ಯ ನೀತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಿಬ್ಬಂದಿಗೆ ನೀಡಿದಂತೆ ಎಲ್ಲರಿಗೂ ತಲಾ ₹ 5 ಸಾವಿರ ರೂಪಾಯಿಯ ಆರ್ಥಿಕ ನೆರವು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.