ADVERTISEMENT

ಅವರು ಇಷ್ಟವಾದರು, ಗೆಳತಿಯಾಗುವೆ: 73ರ ಮಹಿಳೆ, 69ರ ಪುರುಷ ನಡುವೆ ವಿವಾಹ ಚರ್ಚೆ

ಕೆ.ಓಂಕಾರ ಮೂರ್ತಿ
Published 8 ಏಪ್ರಿಲ್ 2021, 8:35 IST
Last Updated 8 ಏಪ್ರಿಲ್ 2021, 8:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೈಸೂರು: ಜೀವನದ ಸಂಧ್ಯಾ ಕಾಲದಲ್ಲಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು, ಕಷ್ಟ ಹೇಳಿಕೊಳ್ಳಲು ಸಂಗಾತಿ ಹುಡುಕಾಟದಲ್ಲಿ ತೊಡಗಿದ್ದ ನಗರದ 73 ವರ್ಷದ ಮಹಿಳೆ ಯೊಬ್ಬರಿಗೆ ಸಾಂಗತ್ಯ ನೀಡಲು ಮೈಸೂರಿ ನವರೇ ಆದ ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ.

ಮಹಿಳೆ ನೀಡಿದ್ದ ಜಾಹೀರಾತಿಗೆ ಸ್ಪಂದಿಸಿ, 69 ವರ್ಷದ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ. ಪರಸ್ಪರರು ಮನೆಗೆ ಭೇಟಿ ನೀಡಿ ಮದುವೆ ವಿಚಾರವಾಗಿ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಮದುವೆ ಮಾಡಿಕೊಳ್ಳಲು ಅಥವಾ ಸ್ನೇಹಿತೆಯಾಗಿ ಜೊತೆಗಿರಲು ಮಹಿಳೆ ಒಪ್ಪಿಗೆ ಸೂಚಿಸಿದ್ದಾರೆ.

‘ನಿವೃತ್ತ ಎಂಜಿನಿಯರ್‌ ಒಬ್ಬರನ್ನು ಒಪ್ಪಿಕೊಂಡಿದ್ದೇನೆ. ಮನೆಗೆ ಹೋದಾಗ ಚೆನ್ನಾಗಿ ಉಪಚರಿಸಿದರು. ಅವರೇ ಚಿತ್ರಾನ್ನ ಮಾಡಿ ತಂದುಕೊಟ್ಟರು‌. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣವಿದೆ. ಅವರ ಪುತ್ರ ವಿದೇಶದಲ್ಲಿ ನೆಲೆಸಿದ್ದು, ಇದೇ 17ಕ್ಕೆ ಊರಿಗೆ ಬರುತ್ತಿದ್ದಾರೆ. ಅವರೊಂದಿಗೂ ಚರ್ಚಿಸಿ, ಮುಂದುವರಿಯುತ್ತೇವೆ’ ಎಂದು ಆ ಮಹಿಳೆ ‘ಪ್ರಜಾವಾಣಿ’ಗೆ
ತಿಳಿಸಿದರು.

ADVERTISEMENT

ಆ ವ್ಯಕ್ತಿಯು ಶ್ರೀರಾಂಪುರದಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದಾರೆ. ಏಳು ವರ್ಷಗಳ ಹಿಂದೆ ಪತ್ನಿ ತೀರಿ ಕೊಂಡಿದ್ದಾರೆ. ಅವರ ಪುತ್ರನ ಒತ್ತಾಯದ ಮೇರೆಗೆ ಅವರು ಕೂಡ ಸಂಗಾತಿಗಾಗಿ ಹುಡು ಕಾಟ ನಡೆಸಲು ಮುಂದಾಗಿದ್ದರು. ಈ ಹಂತದಲ್ಲಿ ಸ್ನೇಹಿತರ ಮೂಲಕ ಜಾಹೀರಾತು ಗಮನಿಸಿ ಮಾತುಕತೆ ನಡೆಸಿದ್ದಾರೆ.

‘ದೇವರು ನಮ್ಮ ಹಣೆಯಲ್ಲಿ ಏನು ಬರೆದಿದ್ದಾನೋ ಗೊತ್ತಿಲ್ಲ. ಬದುಕು ಬಹಳ ದೊಡ್ಡದು. ಮಹಿಳೆಗೆ ಆಸರೆಯಾಗಿ ನಿಲ್ಲಲು ಸಂಗಾತಿ ಬೇಕಿದೆ. ನನಗೂ ಅದರ ಅವಶ್ಯವಿದೆ. ಪುತ್ರನ ಒಪ್ಪಿಗೆ ಪ‍ಡೆದು ಮುಂದಿನ ಹೆಜ್ಜೆ ಇಡುತ್ತೇನೆ’ ಎನ್ನುತ್ತಾರೆ ಆ ವ್ಯಕ್ತಿ.

ನಿವೃತ್ತ ಶಿಕ್ಷಕಿ: 1972ರಲ್ಲೇ ಮೈಸೂರಿಗೆ ಬಂದಿದ್ದ ಮಹಿಳೆಯು, 1992ರಿಂದ ಮೈಸೂರಿನ ಹೆಬ್ಬಾಳದಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದಾರೆ.

ನಿವೃತ್ತ ಶಿಕ್ಷಕಿಯಾಗಿರುವ ಇವರು ವಿವಾಹವಾಗಿದ್ದು ತಮ್ಮ 42ನೇ ವಯಸ್ಸಿನಲ್ಲಿ. ಎರಡು ವರ್ಷಗಳಲ್ಲೇ ಆ ವಿವಾಹವು ವಿಚ್ಛೇದನದಲ್ಲಿ ಅಂತ್ಯ ಗೊಂಡಿತು. ಮಹಿಳೆಯ ನಾಲ್ವರು ತಮ್ಮಂದಿರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದಾರೆ.

‘ಊರಿಗೆ ಹೋಗೋಣವೆಂದರೆ ಅಲ್ಲಿಯ ವಾತಾವರಣ ಹಿಡಿಸುವುದಿಲ್ಲ. ವಯಸ್ಸಾದ ಕಾಲದಲ್ಲಿ ಆಸರೆ ಬೇಕಿರುತ್ತದೆ. ಹೀಗಾಗಿ, ಜೀವನ ಸಂಗಾತಿ ಕೋರಿ ಜಾಹೀರಾತು ನೀಡಿದೆ’ ಎಂದು ಮಹಿಳೆ ಹೇಳಿಕೊಂಡರು.

‘ನಿವೃತ್ತಿಯಾದ ಬಳಿಕವೂ ಒಂದಿಷ್ಟು ವರ್ಷ ಟ್ಯೂಷನ್‌ ಮಾಡಿದೆ. ಶಾಲೆಗಳಲ್ಲಿ ಪಾಠ ಮಾಡಿದೆ. ಈಗ ಏನೂ ಮಾಡಲು ಆಗಲ್ಲ. ಒಂಟಿಯಾಗಿ ಜೀವನ ಕಳೆಯಲೂ ಬೇಸರ. ಹುಷಾರಿ ಲ್ಲವೆಂದರೆ ಕೈ ಹಿಡಿದು ಸಮಾಧಾನ ಪಡಿಸುವವರೂ ಇಲ್ಲ’ ಎಂದು, ಸಂಗಾತಿ ಹುಡುಕಾಟಕ್ಕೆ ಮುಂದಾಗ ಬೇಕಾದ ಕಾರಣವನ್ನು ಅವರು ಮುಂದಿಟ್ಟರು.

***

ಸಂಗಾತಿಯಾಗಿರಲು ಸಾಕಷ್ಟು ಕರೆಗಳು ಬಂದವು. ಅದರಲ್ಲಿ ಒಬ್ಬರನ್ನು ನಾನು ಒಪ್ಪಿಕೊಂಡಿದ್ದೇನೆ. ಸ್ನೇಹಿತೆಯಾಗಿ ಜೊತೆಗಿರಲು ಬಯಸಿದ್ದೇನೆ

-73 ವರ್ಷದ ಮಹಿಳೆ, ಹೆಬ್ಬಾಳ

***

ಒಂದು ಸುತ್ತಿನ ಮಾತುಕತೆ ನಡೆದಿದೆ. ಪರಸ್ಪರ ತಿಳಿದು ಕೊಳ್ಳಬೇಕಿದ್ದು, ಸಂಗಾತಿ ಅಥವಾ ಸ್ನೇಹಿತೆಯಾಗಿ ಸ್ವೀಕರಿಸಲು ಯೋಚಿಸುತ್ತಿದ್ದೇನೆ

-69 ವರ್ಷದ ಪುರುಷ, ಶ್ರೀರಾಂಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.