ಮೈಸೂರು: ಇಲ್ಲಿನ ಉದಯಗಿರಿಯ ಮಹದೇವಪುರ ಮುಖ್ಯರಸ್ತೆಯಲ್ಲಿರುವ ‘ಮಾತಾ ಆಸ್ಪತ್ರೆ’ ಹೆಣ್ಣುಭ್ರೂಣ ಹತ್ಯೆ ಜಾಲದ ಕೇಂದ್ರವಾಗಿದ್ದು, ‘ಅಕ್ರಮಗಳು ನಡೆದಿದ್ದರೂ ಆಸ್ಪತ್ರೆಯು ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ಣಿಗೇಕೆ ಕಂಡಿರಲಿಲ್ಲ’ ಎಂಬ ಪ್ರಶ್ನೆ ಈಗ ಚರ್ಚೆಯಲ್ಲಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಅಲ್ಲಿ ಆಸ್ಪತ್ರೆ ಇತ್ತೆಂದು ಗೊತ್ತಾಗದ ರೀತಿಯಲ್ಲಿ ಎಲ್ಲ ಫಲಕಗಳನ್ನು ತೆಗೆಯಲಾಗಿದೆ. ಕಟ್ಟಡದ ಎರಡು ಅಂತಸ್ತಿನಲ್ಲಿ ಆಸ್ಪತ್ರೆ ನಡೆಯುತ್ತಿದ್ದು, ಸದ್ಯ ಮುಖ್ಯದ್ವಾರಕ್ಕೆ ಬೀಗ ಜಡಿಯಲಾಗಿದೆ.
‘ಮಾತಾ ಆಸ್ಪತ್ರೆ ನೋಂದಣಿಯೇ ಆಗಿಲ್ಲ. ಒಮ್ಮೆ ಭೇಟಿ ಕೊಟ್ಟಾಗ ಬಾಗಿಲು ಹಾಕಿತ್ತು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ‘ಹಲವು ವರ್ಷಗಳಿಂದ ಆಸ್ಪತ್ರೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ಹೆಚ್ಚು ಪರಿಚಿತವೂ ಆಗಿದೆ’ ಎಂಬುದು ಸ್ಥಳೀಯರ ನುಡಿ.
‘ಆರಂಭದಲ್ಲಿ ಲತಾ ಕ್ಲಿನಿಕ್ ಆಗಿದ್ದ ಆಸ್ಪತ್ರೆಯನ್ನು ಪ್ರಕರಣದ ಆರೋಪಿ ತುಳಸಿರಾಮ್ ಮತ್ತೊಬ್ಬ ಆರೋಪಿ ಚಂದನ್ ಬಲ್ಲಾಳ್‌ಗೆ ಮಾರಿದ್ದ. ಚಂದನ್ ಅದರ ಹೆಸರನ್ನು ‘ಮಾತಾ ಆಸ್ಪತ್ರೆ’ ಎಂದು ಬದಲಿಸಿದ್ದ. ‘ಸ್ಪೆಷಾಲಿಟಿ ಪಾಲಿ ಕ್ಲಿನಿಕ್’ ಎಂಬ ಹೆಸರಿನ ಫಲಕವಿದ್ದ ಆಸ್ಪತ್ರೆಗೆ ಆಗಾಗ್ಗೆ ರೋಗಿಗಳು ಬರುತ್ತಿದ್ದರು’ ಎಂದು ಕೆಲವು ಸ್ಥಳೀಯರು ಸ್ಥಳಕ್ಕೆ ಬುಧವಾರ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಕರಣದ ಪ್ರಮುಖ ಆರೋಪಿ ಚಂದನ್ ಬಲ್ಲಾಳ್ ವೃತ್ತಿಯಲ್ಲಿ ಆಯುರ್ವೇದ ವೈದ್ಯನಾಗಿದ್ದ. ನಗರದ ರಾಜಕುಮಾರ್ ರಸ್ತೆಯಲ್ಲಿ ಪೈಲ್ಸ್ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದ. ಅಲ್ಲಿ ರೋಗಿಗಳ ಚಿಕಿತ್ಸೆ ನೆಪದಲ್ಲಿ ಸಂದರ್ಶನ ನಡೆಸಿ, ಭ್ರೂಣ ಹತ್ಯೆಗೆ ಬೇಡಿಕೆ ಇಟ್ಟವರನ್ನು ಮಾತಾ ಕ್ಲಿನಿಕ್‌ಗೆ ಕರೆತರಲಾಗುತ್ತಿತ್ತು. ಹೆಚ್ಚಾಗಿ ಹೊರ ಜಿಲ್ಲೆಗಳ ಜನರೇ ಬರುತ್ತಿದ್ದು, ಅವರನ್ನು ಕೆಲವು ದಿನಗಳ ಕಾಲ ದಾಖಲಿಸಿಕೊಂಡು ಗರ್ಭಪಾತ ಮಾಡಿಸಲಾಗುತ್ತಿತ್ತು. ಅಂತಹವರನ್ನು ಗುರುತಿಸಿ ಕರೆತರುವುದು ಮಧ್ಯವರ್ತಿಗಳ ಕೆಲಸವಾಗಿತ್ತು’ ಎಂದು ಹೇಳಲಾಗುತ್ತಿದೆ.
ಏಕಾಏಕಿ ‘ಹಳೇ’ ನೋಟಿಸ್ ಜಾರಿ
ಭ್ರೂಣ ಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿ ದ್ದಂತೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತಿದ್ದು, ಮಂಗಳವಾರ ರಾತ್ರಿ ಮಾತಾ ಆಸ್ಪತ್ರೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಮೂರು ತಿಂಗಳಲ್ಲಿ ಆಸ್ಪತ್ರೆಯಲ್ಲಿ ನಡೆದ ಭ್ರೂಣ ಪರೀಕ್ಷೆಗಳ ವಿವರ ನೀಡುವಂತೆ ಸೂಚಿಸಿದ್ದಾರೆ. ಆದರೆ ನೋಟಿಸ್‌ನಲ್ಲಿ ನವೆಂಬರ್ ಬದಲಿಗೆ ‘ಜೂನ್ 22’ ಎಂದು ನಮೂದಿಸಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
‘ನೋಟಿಸ್ ಅಂಟಿಸಿರುವುದು, ಅದರಲ್ಲಿ ಹಳೇ ದಿನಾಂಕ ನಮೂದಿಸಿರುವುದು ಗಮನಕ್ಕೆ ಬಂದಿಲ್ಲ. ತಾಲ್ಲೂಕು ವೈದ್ಯಾಧಿಕಾರಿಗಳಿಂದ ವಿವರಣೆ ಕೇಳಿದ್ದೇನೆ’ ಎಂದು ಮೈಸೂರು ಡಿಎಚ್‌ಒ ಡಾ. ಕುಮಾರಸ್ವಾಮಿ ತಿಳಿಸಿದರು.
ಅಧಿಕಾರಿಗಳು ದೌಡು
ಮೈಸೂರು/ಮಂಡ್ಯ: ಭ್ರೂಣ ಹತ್ಯೆ ಜಾಲ ಪತ್ತೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಲೇ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಂಡ್ಯ, ಮೈಸೂರಿಗೆ ಬುಧವಾರ ದೌಡಾಯಿಸಿ, ಅಕ್ರಮ ನಡೆದಿರುವ ಸ್ಥಳಗಳ ಪರಿಶೀಲನೆ ನಡೆಸಿದರು.
ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಯೋಜನಾ ನಿರ್ದೇಶಕ ಶ್ರೀನಿವಾಸ ನೇತೃತ್ವದ ತಂಡವು ಮೊದಲಿಗೆ ಮಂಡ್ಯದ ಹುಳ್ಳೇನಹಳ್ಳಿ ಮತ್ತು ಹಾಡ್ಯ ನಡುವಿನ ಆಲೆಮನೆಗೆ ಭೇಟಿ ನೀಡಿ ಪರಿಶೀಲಿಸಿತು. ನಂತರ ಅಧಿಕಾರಿಗಳ ಸಭೆ ನಡೆಸಿತು.
ನಂತರ, ಪ್ರಮುಖ ಆರೋಪಿ ಚಂದನ್ ಬಲ್ಲಾಳ್ ನಡೆಸುತ್ತಿದ್ದ ಮೈಸೂರಿನ ಮಾತಾ ಆಸ್ಪತ್ರೆ, ಡಾ. ರಾಜಕುಮಾರ್ ರಸ್ತೆಯಲ್ಲಿರುವ ಪೈಲ್ಸ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು
ಸಮಗ್ರ ತನಿಖೆಗೆ ಸೂಚನೆ
ಮಂಡ್ಯ: ‘ತಾಲ್ಲೂಕಿನ ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣಲಿಂಗ ಪತ್ತೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಬುಧವಾರ ಜೂಮ್ ಮೀಟಿಂಗ್ ನಡೆಸಿದ ಸಚಿವರು, ‘ಸ್ಥಳೀಯ ಪಿಡಿಒ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯ ಗಮನಕ್ಕೂ ಇಲ್ಲದೇ ಈ ಅಕ್ರಮ ನಡೆಯುತ್ತಿತ್ತೇ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಬಗ್ಗೆ ಹಳ್ಳಿಗಳಲ್ಲಿ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.
‘ಆರೋಪಿಗಳು ವೈದ್ಯರಲ್ಲ’
ಮಂಡ್ಯ: ‘ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳು ವೈದ್ಯರಲ್ಲ. ಯಾವುದೇ ತರಬೇತಿ ಪಡೆದಿರುವ ಮಾಹಿತಿಯೂ ಇಲ್ಲ’ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಯೋಜನಾ ನಿರ್ದೇಶಕ ಶ್ರೀನಿವಾಸ ಸ್ಪಷ್ಟಪಡಿಸಿದರು.
‘ಆರೋಪಿಗಳು ಮಂಡ್ಯದಲ್ಲಿ ಗರ್ಭಪಾತ ಮಾಡುತ್ತಿರ ಲಿಲ್ಲ. ಹೊರ ಜಿಲ್ಲೆಗಳಿಂದ ಮಹಿಳೆಯರನ್ನು ಕರೆತರುತ್ತಿದ್ದರೆಂಬ ಅನುಮಾನದ ಮೇಲೆ ಪ್ರಕರಣ ದಾಖಲಾಗಿದೆ. ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬರಲಿದೆ. ಆರೋಪಿಗಳು ಮೊಬೈಲ್ ಸ್ಕ್ಯಾನಿಂಗ್ ಯಂತ್ರ ಬಳಸುತ್ತಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಪೊಲೀಸರು ವಶಕ್ಕೆ ಪಡೆದಿರುವ ಕಾರಿನ ಬಗ್ಗೆ ಐದು ತಿಂಗಳ ಹಿಂದೆಯೇ ನಾವು ನೀಡಿದ್ದ ಮಾಹಿತಿ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ’ ಎಂದರು.
‘ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ತಂಡ ರಚಿಸುವ ಸಂಬಂಧ ಎರಡು ದಿನಗಳಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ’ ಎಂದರು.
ಚೀನಾದಿಂದ ಸ್ಕ್ಯಾನರ್: ‘ಚೀನಾದಿಂದ ತರಿಸಿದ, ಬ್ಯಾಗ್‌ನಲ್ಲಿ ಸಾಗಿಸಬಹುದಾದ ಮೊಬೈಲ್ ಸ್ಕ್ಯಾನಿಂಗ್ ಯಂತ್ರವನ್ನು ಆರೋಪಿಗಳು ಬಳಸುತ್ತಿದ್ದರು. ಸ್ಕ್ಯಾನಿಂಗ್ ಯಂತ್ರದ ವಯರ್ ಅನ್ನು ಮಾನಿಟರ್‌ಗೆ ಅಳವಡಿಸಿ, ಉಪಕರಣವನ್ನು ಗರ್ಭಿಣಿಯ ಹೊಟ್ಟೆಯ ಮೇಲೆ ಇಟ್ಟು ಲಿಂಗಪತ್ತೆ ಮಾಡುತ್ತಿದ್ದರು. ಅದರಲ್ಲಿ ಯಾವುದೇ ಮಾಹಿತಿ ದಾಖಲಾಗುತ್ತಿರಲಿಲ್ಲ. ಆದರೆ, ದೇಶದಲ್ಲಿ ನೋಂದಾಯಿತ ಸ್ಕ್ಯಾನಿಂಗ್ ಯಂತ್ರದಲ್ಲಿ, ಸ್ಕ್ಯಾನಿಂಗ್ ಆದ ಪ್ರಕರಣಗಳ ಮಾಹಿತಿ ದಾಖಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
‘ಚೀನಾದಿಂದ ತರಿಸಿದ, ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಿಸಬಹುದಾದ ಮೊಬೈಲ್ ಸ್ಕ್ಯಾನಿಂಗ್ ಯಂತ್ರವನ್ನು ಆರೋಪಿಗಳು ಬಳಸುತ್ತಿದ್ದರು. ಆಲೆಮನೆಯಲ್ಲಿದ್ದ 4 ಕೊಠಡಿಯಲ್ಲಿ ಮಹಿಳೆಯರನ್ನು ಕೂರಿಸುತ್ತಿದ್ದರು. ಮತ್ತೊಂದು ಕೊಠಡಿಯಲ್ಲಿ ಒಬ್ಬೊಬ್ಬರನ್ನೇ ಸ್ಕ್ಯಾನಿಂಗ್ ಮಾಡುತ್ತಿದ್ದರು. ಮಾತ್ರೆಯಲ್ಲೇ ಭ್ರೂಣ ಕರಗಿಸಬಹುದಾಗಿದ್ದರೆ ಗರ್ಭಿಣಿಯರಿಗೆ ಮಾತ್ರೆ ಕೊಟ್ಟು ಕಳುಹಿಸುತ್ತಿದ್ದರು. ಕ್ಲಿಷ್ಟವೆನಿಸುವ ಪ್ರಕರಣಗಳನ್ನು ಚೀಟಿಯಲ್ಲಿ ಬರೆದುಕೊಟ್ಟು ಮೈಸೂರಿನ ಆಸ್ಪತ್ರೆಯೊಂದಕ್ಕೆ ಕಳುಹಿಸುತ್ತಿದ್ದರು’ ಎಂದು ಬಿಹಾರ ಮೂಲದ ಕಾರ್ಮಿಕರು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಗೆ ಬೆದರಿಕೆ
ಹುಲ್ಲೇನಹಳ್ಳಿಯ ಆಲೆಮನೆಗೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದ ಸಂದರ್ಭದಲ್ಲಿ, ಆರೋಪಿ ನವೀನ್ ಅಕ್ಕನ ಮಗ ಪ್ರಶಾಂತ್ ಎಂಬಾತ ಆಶಾ ಕಾರ್ಯಕರ್ತೆಗೆ ಬೆದರಿಕೆ ಹಾಕಿದನೆನ್ನಲಾಗಿದೆ.
ಅಧಿಕಾರಿಯ ಸೂಚನೆ ಮೇರೆಗೆ ಕಾರ್ಯಕರ್ತೆಯು ಆಲೆಮನೆ ಮಾಲೀಕನಿಗೆ ಕರೆ ಮಾಡಿದಾಗ ಮಾತನಾಡಿದ ಪ್ರಶಾಂತ್, ‘ನೀವು ಯಾರು? ಯಾರ ಅನುಮತಿ ಮೇರೆಗೆ ಆಲೆಮನೆಗೆ ಬಂದಿದ್ದೀರಾ? ಅಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಬೆಲೆ ಬಾಳುವ ವಸ್ತುಗಳಿದ್ದು, ಕಳುವಾದರೆ ಅಥವಾ ಹಾನಿಯಾದರೆ ಮುಂದೆ ನೀವು ಅನುಭವಿಸುತ್ತೀರಾ’ ಎಂದು ಬೆದರಿಕೆ ಹಾಕಿದ ಎನ್ನಲಾಗಿದೆ.
‘ನಾವು ಇಲ್ಲದ ಸಮಯದಲ್ಲಿ ಆಲೆಮನೆಗೆ ನೀವು ಹೇಗೆ ಬಂದಿದ್ದೀರಾ? ಏನಾದರೂ ವ್ಯತ್ಯಾಸಗಳಾದಲ್ಲಿ ನೀವೇ ಜವಾಬ್ದಾರರು. ಮುಂದೇನು ಮಾಡಬೇಕೆಂದು ಗೊತ್ತಿದೆ. ನಿಮ್ಮ ವಿರುದ್ಧ ಪೊಲೀಸರಿಗೆ ದೂರು ಕೊಡುವೆ’ ಎಂದು ಬೆದರಿಸಿದ ಎನ್ನಲಾಗಿದೆ.
ವರದಿ ಕೇಳಿದ ಮಕ್ಕಳ ಹಕ್ಕುಗಳ ಆಯೋಗ
ಬೆಂಗಳೂರು: ಭ್ರೂಣ ಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಕುರಿತು ತಕ್ಷಣವೇ ವರದಿಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ ಆಗಿರುವುದು ಮಾಧ್ಯಮಗಳ ಮೂಲಕ ಆಯೋಗದ ಗಮನಕ್ಕೆ ಬಂದಿದೆ. ಜೀವ ಉಳಿಸಬೇಕಾದ ವೈದ್ಯರೇ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಇಡೀ ಮನುಕುಲವೇ ತಲೆ ತಗ್ಗಿಸುವಂತಾಗಿದೆ. ಇದರಿಂದ ರಾಜ್ಯವೇ ಆತಂಕಕ್ಕೆ ಒಳಗಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಭ್ರೂಣ ಹತ್ಯೆಗಳ ಪ್ರಕರಣಗಳನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದಲ್ಲಿ ಕಾನೂನು ರೀತಿಯಲ್ಲಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯಿಂದ ಸೂಕ್ತ ಮಾರ್ಗಸೂಚಿ ಮತ್ತು ಸುತ್ತೋಲೆ ಹೊರಡಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯು ನಿಯಮಿತವಾಗಿ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡುವುದರ ಜತೆಗೆ ಸಭೆ ನಡೆಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.