ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ನೀಡುವ ಊಟವನ್ನು ಇದೇ ಮೊದಲ ಬಾರಿಗೆ ‘ಹಾಟ್‌ಬಾಕ್ಸ್’ನಲ್ಲಿ ಕೊಡುವುದಕ್ಕೆ ತಯಾರಿ ಆರಂಭವಾಗಿದೆ. ‘ಈ ಉಪಕ್ರಮದ ಮೂಲಕ ತಟ್ಟೆಯಲ್ಲಿ ಊಟ ಪಡೆಯುವುದು, ತಣ್ಣಗಾದ ಆಹಾರ ಸೇವಿಸುವ ಪ್ರಮೇಯ ತಪ್ಪಲಿದೆ’ ಎಂಬ ಆಶಯವನ್ನು ಇಲಾಖೆ ಹೊಂದಿದೆ.
ಸದ್ಯ 810 ಕೈದಿಗಳಿರುವ ಕಾರಾಗೃಹದಲ್ಲಿ ನಿತ್ಯ ಸಂಜೆ 6.30ರೊಳಗೆ ರಾತ್ರಿ ಊಟ ವಿತರಿಸಲಾಗುತ್ತದೆ. ತಟ್ಟೆಗಳಲ್ಲಿ ಊಟ ಪಡೆಯುವ ಕೈದಿಗಳು ರಾತ್ರಿ ವೇಳೆ ಊಟ ಮಾಡುತ್ತಿದ್ದರು. ಅಷ್ಟರ ವೇಳೆಗೆ ಊಟವು ತಣ್ಣಗಾಗಿರುತ್ತಿತ್ತು. ಕೈದಿಗಳ ಆರೋಗ್ಯದ ದೃಷ್ಟಿಯಿಂದ ಬಿಸಿಯಾದ ಆಹಾರ ಸಿಗುವಂತೆ ಮಾಡಲು ‘ಹಾಟ್‌ಬಾಕ್ಸ್’ ಖರೀದಿಸಲಾಗುತ್ತಿದೆ. ಯೋಜನೆ ಅನುಷ್ಠಾನಕ್ಕಾಗಿ ಕಾರಾಗೃಹ ಇಲಾಖೆಯ ಹಣಕಾಸು ವಿಭಾಗಕ್ಕೆ ಮಂಜೂರಾತಿಗಾಗಿ ಪತ್ರವನ್ನು ಬರೆದಿದ್ದು, ಅನುಮೋದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಹಾಟ್‌ಬಾಕ್ಸ್ ದರಪಟ್ಟಿ ಆಹ್ವಾನ: ನೋಂದಾಯಿತ ವರ್ತಕರು ಹಾಗೂ ಸಂಸ್ಥೆಗಳಿಂದ 10, 20, 30 ಲೀಟರ್‌ಗಳ 24 ಹಾಟ್‌ಬಾಕ್ಸ್‌ಗಳ ಖರೀದಿಗಾಗಿ ಜಿಎಸ್‌ಟಿ ಸಹಿತ ದರಪಟ್ಟಿಯನ್ನು ಕಾರಾಗೃಹವು ಆಹ್ವಾನಿಸಿದೆ. ಪಟ್ಟಿಯನ್ನು ಸೆ.5ರ ಸಂಜೆ 4 ಗಂಟೆ ಒಳಗೆ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಅವರಿಗೆ ನೀಡುವಂತೆ ಕೋರಲಾಗಿದೆ.
‘ಕಾರಾಗೃಹದಲ್ಲಿ ವಿವಿಧ ಬ್ಯಾರಕ್‌ಗಳಿದ್ದು, ಒಂದೊಂದರಲ್ಲಿ 15ರಿಂದ 30 ಕೈದಿಗಳು ಇದ್ದಾರೆ. ಪ್ರತಿ ಬ್ಯಾರಕ್‌ಗೆ ಅನುಗುಣವಾಗಿ 10, 20, 30 ಲೀಟರ್ ಸಾಮರ್ಥ್ಯದ ಹಾಟ್‌ಬಾಕ್ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಅವುಗಳನ್ನು ಬ್ಯಾರಕ್‌ನಲ್ಲಿರುವ ಕೈದಿಗಳ ಸಂಖ್ಯೆ ಆಧರಿಸಿ ಹಂಚಿಕೆ ಮಾಡಲಾಗುತ್ತದೆ. ಅದರಲ್ಲಿ ನಿಗದಿತ ಪ್ರಮಾಣದ ಆಹಾರವನ್ನು ಒದಗಿಸಲಾಗುವುದು. ಅಲ್ಲಿರುವವರು ಹಸಿವಾದಾಗ ಊಟ ತೆಗೆದುಕೊಂಡು ಮಾಡಬಹುದು. ಇದರ ಉಸ್ತುವಾರಿಗೆ ಒಬ್ಬರನ್ನು ನಿಯೋಜಿಸಲಾಗುತ್ತದೆ’ ಎಂದು ಚೀಫ್ ಸೂಪರಿಂಟೆಂಡೆಂಟ್ ಪಿ.ಎಸ್.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಿಯಮದ ಪ್ರಕಾರ, ಜೈಲುವಾಸಿಗಳಿಗೆ ಸಂಜೆ ವೇಳೆಯೇ ರಾತ್ರಿಯೂಟ ವಿತರಿಸಬೇಕು. ಕತ್ತಲೆಗೂ ಮುನ್ನವೇ ಕೈದಿಗಳನ್ನು ಬ್ಯಾರಕ್‌ಗಳಿಗೆ ಕಳುಹಿಸಬೇಕಾಗುತ್ತದೆ. ಹೀಗಾಗಿ ಕೈದಿಗಳು ತಟ್ಟೆಗಳಲ್ಲಿಯೇ ಇಟ್ಟುಕೊಳ್ಳುತ್ತಿದ್ದರು. ತಣ್ಣಗಿನ ಆಹಾರ ತಿನ್ನುವ ಬದಲು ಆರೋಗ್ಯದ ದೃಷ್ಟಿಯಿಂದ ಬಿಸಿಯಾಗಿ ನೀಡಲು ಈ ಉಪಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಈ ವ್ಯವಸ್ಥೆಗೆ ಚಾಲನೆ ನೀಡಲಾಗುವುದು. ಇದಕ್ಕಾಗಿ ‘ಹಾಟ್‌ಬಾಕ್ಸ್’ ಖರೀದಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಮಡಿಕೇರಿ ಕಾರಾಗೃಹದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಮಳೆಗಾಲದ ತಂಪಿನ ವಾತಾವರಣದಲ್ಲಿ ಊಟ ಬೇಗನೆ ತಣ್ಣಗಾಗುತ್ತದೆ. ಹೊಸ ಕ್ರಮದಿಂದ ಕೈದಿಗಳಿಗೆ ಅನುಕೂಲವಾಗಲಿದೆ.-ಪಿ.ಎಸ್.ರಮೇಶ್ ಚೀಫ್, ಸೂಪರಿಂಟೆಂಡೆಂಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.