ADVERTISEMENT

ರೈತರ ಸಮಸ್ಯೆ ಪರಿಹಾರಕ್ಕೆ ಕ್ರಮ: ಮೈಸೂರು ಜಿಲ್ಲಾಧಿಕಾರಿ

ನಿಯೋಗಕ್ಕೆ ಜಿಲ್ಲಾಧಿಕಾರಿ ರಾಜೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 6:24 IST
Last Updated 5 ಏಪ್ರಿಲ್ 2024, 6:24 IST
ಮೈಸೂರಿನಲ್ಲಿ ಕುರುಬೂರು ಶಾಂತಕುಮಾರ್‌ ನೇತೃತ್ವದ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಗುರುವಾರ ಚರ್ಚಿಸಿದರು
ಮೈಸೂರಿನಲ್ಲಿ ಕುರುಬೂರು ಶಾಂತಕುಮಾರ್‌ ನೇತೃತ್ವದ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಗುರುವಾರ ಚರ್ಚಿಸಿದರು   

ಮೈಸೂರು: ‘ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ರಚಿಸಿ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ತಮ್ಮನ್ನು ಗುರುವಾರ ಭೇಟಿಯಾದ ರೈತರ ನಿಯೋಗದೊಂದಿಗೆ ಅವರು ಚರ್ಚಿಸಿದರು.

‘ಏ.5ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಗತ್ಯವಿದ್ದಲ್ಲಿ ಗೋಶಾಲೆ ಆರಂಭಿಸಿ ಮೇವು ಬ್ಯಾಂಕ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು.

ADVERTISEMENT

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಕಬಿನಿ ಹಾಗೂ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಸಣ್ಣ ರೈತರು ಯಾವುದೇ ಬೆಳೆ ಬೆಳೆಯದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ರಾಜ್ಯ ಸರ್ಕಾರ ಕೇವಲ ₹2 ಸಾವಿರ ಪರಿಹಾರ ನೀಡಿದೆ. ಇದರಿಂದ ಸಮಸ್ಯೆ ಪರಿಹಾರವಾಗಿಲ್ಲ’ ಎಂದು ತಿಳಿಸಿದರು.

‘ಹಲವೆಡೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಕಬ್ಬು, ತೆಂಗು, ಬಾಳೆ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಅವರಿಗೆ ಕೂಡಲೇ ಪರಿಹಾರ ಕೊಡಿಸಬೇಕು. ಜನ– ಜಾನುವಾರು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರು ದೊರಕಿಸುವ ಉದ್ದೇಶದಿಂದ ನಾಲೆಗಳಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.

ತೀವ್ರ ತೊಂದರೆ: ‘ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿಗೂ ತೊಂದರೆ ಆಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ 3ರಿಂದ 4 ತಾಸು ಕೂಡ ವಿದ್ಯುತ್‌ ಪೂರೈಸುತ್ತಿಲ್ಲ. ಬರದ ನಡುವೆಯೂ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ಮುಂದಾಗಿದ್ದು, ನೋಟಿಸ್ ಕೊಡುತ್ತಿವೆ. ಈ ಮೂಲಕ ರೈತರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಇದನ್ನು ತಡೆಯಬೇಕು’ ಎಂದು ಕೋರಿದರು.

‘ನಾವು ಚುನಾವಣೆ ಕೆಲಸದಲ್ಲಿದ್ದೇವೆ ಎಂದು ಸರ್ಕಾರಿ ನೌಕರರು ಹೇಳುತ್ತಿದ್ದಾರೆ. ಕಚೇರಿಗಳಿಗೆ ಹೋದರೆ ಸ್ಪಂದನೆ ದೊರೆಯುತ್ತಿಲ್ಲ. ಈ ಸಂದರ್ಭದಲ್ಲಿ ರೈತರ ರಕ್ಷಣೆಗೆ ಜಿಲ್ಲಾಡಳಿತ ವಿಶೇಷ ಗಮನಹರಿಸಬೇಕು. ಬರಗಾಲದ ಸಮಸ್ಯೆಗಳಿಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಕಾಟೂರು ಮಹದೇವಸ್ವಾಮಿ, ಅಂಬಳೆ ಮಂಜುನಾಥ್, ಬನ್ನೂರು ಸೂರಿ, ಮಾರ್ಬಳ್ಳಿ ಬಸವರಾಜ್, ರಾಮಚಂದ್ರ, ಸೋಮಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.