ADVERTISEMENT

‘ವೈದ್ಯಕೀಯ ಕ್ಷೇತ್ರ: ವಿಪುಲ ಉದ್ಯೋಗಾವಕಾಶ’

ಶುಶ್ರೂಶಕರ ಸಮರ್ಪಣಾ ಕಾರ್ಯಕ್ರಮದಲ್ಲಿ ಎಲಿಜಬೆತ್ ಜಾನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಮೇ 2024, 13:58 IST
Last Updated 3 ಮೇ 2024, 13:58 IST
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮರ್ಪಣಾ ಕಾರ್ಯಕ್ರಮ’ದಲ್ಲಿ ಶುಶ್ರೂಷಕ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮರ್ಪಣಾ ಕಾರ್ಯಕ್ರಮ’ದಲ್ಲಿ ಶುಶ್ರೂಷಕ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ. ನರ್ಸಿಂಗ್ ಪದವೀಧರರಿಗೆ ದೇಶ– ವಿದೇಶದಲ್ಲಿ ಸೇವೆ ಮಾಡಲು ಅವಕಾಶಗಳ ಬಾಗಿಲು ತೆರೆದಿದೆ’ ಎಂದು ನಿವೃತ್ತ ಮೇಜರ್ ಜನರಲ್ ಎಲಿಜಬೆತ್ ಜಾನ್ ಹೇಳಿದರು.

ಜೆಎಸ್ಎಸ್ ಆಸ್ಪತ್ರೆಯ ಸಭಾಂಗಣದಲ್ಲಿ ಜೆಎಸ್ಎಸ್ ನರ್ಸಿಂಗ್ ಕಾಲೇಜಿಗೆ ಪ್ರವೇಶ ಪಡೆದ ಶುಶ್ರೂಷಕ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ‘ಸಮರ್ಪಣಾ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘2050ರ ವೇಳೆಗೆ ದೇಶದಲ್ಲಿ ವಯೋವೃದ್ಧರ ಸಂಖ್ಯೆಯು ಹೆಚ್ಚಲಿದೆ. ಹೀಗಾಗಿ, ಈಗ ತರಬೇತಿ ಪಡೆಯುತ್ತಿರುವ ಶುಶ್ರೂಷಕರಿಗೆ ವಿಪುಲ ಉದ್ಯೋಗಾವಕಾಶಗಳಿವೆ’ ಎಂದು ತಿಳಿಸಿದರು.

ADVERTISEMENT

‘ವೈದ್ಯಕೀಯ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. ಆಸ್ಪತ್ರೆಗಳು ಸ್ಥಾಪನೆಯಾಗುತ್ತಿವೆ. ಹೀಗಾಗಿ ಜಾಗತಿಕವಾಗಿ ನುರಿತ ಶುಶ್ರೂಷಕರ ಅಭಾವವಿದ್ದು, ವಿದ್ಯಾರ್ಥಿಗಳು ಇದೇ ಕ್ಷೇತ್ರವನ್ನು ಆರಿಸಿಕೊಂಡಿರುವುದು ಸರಿಯಾಗಿದೆ’ ಎಂದರು.

‘ಜೀವವನ್ನು ಉಳಿಸುವ ಜವಾಬ್ದಾರಿ ಶುಶ್ರೂಷಕರ ಮೇಲಿದೆ. ಪೋಷಕರಿಗೆ ತೋರುವ ಕಾಳಜಿ ಮತ್ತು ಆರೈಕೆಯನ್ನೇ ರೋಗಿಗಳ ಮೇಲೂ ತೋರಬೇಕು. ಮಾನವೀಯತೆ, ಕಾರುಣ್ಯ, ಸೇವೆಯೇ ವಿದ್ಯಾರ್ಥಿಗಳ ಗುರಿಯಾಗಬೇಕು’ ಎಂದು ಹೇಳಿದರು. 

‘ವೈದ್ಯರಷ್ಟೇ ಗೌರವ ಶುಶ್ರೂಷಕರಿಗೂ ಸಿಗುತ್ತದೆ. ಅವರು ಕೇವಲ ಒಂದು ವಿಷಯದಲ್ಲಿ ತಜ್ಞರಿರುತ್ತಾರೆ. ಆದರೆ, ಶುಶ್ರೂಷಕರಿಗೆ ಎಲ್ಲ ವೈದ್ಯಕೀಯ ವಿಷಯಗಳ ಮೇಲೂ ಜ್ಞಾನವಿರುತ್ತದೆ. ರೋಗಿಗಳ ನಡುವೆ ಹೆಚ್ಚು ಒಡನಾಟ ಇರುವುದರಿಂದ ಅನುಭವವೂ ದಟ್ಟವಾಗಿರುತ್ತದೆ’ ಎಂದು ತಿಳಿಸಿದರು.

‘ರೋಗಿಗಳ ದೈಹಿಕ ಹಾಗೂ ಮಾನಸಿಕ ಸ್ಥಿತಿಗೆ ಅನುಗುಣವಾಗಿ ಆರೈಕೆ ಮಾಡುವ ಅನುಭವ ಗಳಿಸಿಕೊಳ್ಳಬೇಕು. ನರ್ಸಿಂಗ್‌ನಲ್ಲೂ ಬಹುಶಿಸ್ತೀಯ ಕಲಿಕೆಗೆ ಅವಕಾಶವಿದ್ದು, ಸಂಶೋಧನೆ ಹಾಗೂ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೆಲಸದ ಒತ್ತಡದ ನಡುವೆ ಶುಶ್ರೂಷಕರು ವೈಯಕ್ತಿಕ ಆರೋಗ್ಯದ ಕಡೆಗೆ ಆದ್ಯತೆ ನೀಡಬೇಕು. ಸ್ವಯಂ ತರಬೇತಿಯನ್ನು ಪಡೆಯಬೇಕು. ಕೌಶಲ ಹೆಚ್ಚಿಸಿಕೊಳ್ಳಬೇಕು’ ಎಂದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಜೆಎಸ್ಎಸ್ ಆಸ್ಪತ್ರೆಯ ಶುಶ್ರೂಷಕ ಸೇವೆಗಳ ಮುಖ್ಯಸ್ಥೆ ಜಾನೆಟ್ ಮಥೈಯಾಸ್, ಪ್ರಾಂಶುಪಾಲೆ ಅಶ್ವಥಿದೇವಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.