ADVERTISEMENT

ತಲಕಾಡು: ಡ್ರೋನ್ ಮೂಲಕ ಭತ್ತದ ಬೆಳೆಗೆ ಔಷಧಿ

ತಲಕಾಡು: ನಿರಂತರ ಮಳೆಯಿಂದಾಗಿ ಹೆಚ್ಚಿದ ರೋಗಬಾಧೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 14:14 IST
Last Updated 17 ಅಕ್ಟೋಬರ್ 2024, 14:14 IST
ತಲಕಾಡಿನಲ್ಲಿ ಭತ್ತದ ಬೆಳೆ ರೋಗಕ್ಕೆ ಔಷಧಿ ಸಿಂಪರಣೆ ಮಾಡಲು ಡ್ರೋನ್ ಬಳಕೆ.
ತಲಕಾಡಿನಲ್ಲಿ ಭತ್ತದ ಬೆಳೆ ರೋಗಕ್ಕೆ ಔಷಧಿ ಸಿಂಪರಣೆ ಮಾಡಲು ಡ್ರೋನ್ ಬಳಕೆ.   

ತಲಕಾಡು: ಭತ್ತದ ಬೆಳೆಗೆ ಔಷಧಿ ಸಿಂಪಡಿಸಲು ಇಲ್ಲಿನ ರೈತರು ಡ್ರೋನ್ ಮೊರೆ ಹೋಗಿದ್ದಾರೆ.

ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ರೈತರು ಬೆಳೆಗಳಿಗೆ ಔಷಧಿ ಸಿಂಪಡಿಸಲು ಸಮಸ್ಯೆಯಾಗುತ್ತಿದೆ.

ಮಾಧವ ಮಂತ್ರಿ ಅಚ್ಚುಕಟ್ಟು ಪ್ರದೇಶದ 5,828 ಎಕರೆ ಕೃಷಿ ಭೂಮಿ ಹಾಗೂ ರಾಮಸ್ವಾಮಿ ನಾಲೆಯ ಅಚ್ಚುಕಟ್ಟು ಪ್ರದೇಶದ 5,000 ಎಕರೆಗೂ ಹೆಚ್ಚಿನ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ಪ್ರಕ್ರಿಯೆ ಪೂರ್ಣಗೊಂಡಿದೆ.

ADVERTISEMENT

ಇಡೀ ಬಯಲು ಪ್ರದೇಶ ಹಸಿರುಮಯವಾಗಿ ಕಂಗೊಳಿಸುತ್ತಿದೆ. ಭತ್ತದ ಫಸಲಿಗೆ ಅಧಿಕ ಮಳೆಯಿಂದ ಕೊಳೆ, ಜೋನು ಇತರ ರೋಗಬಾ‌ಧೆಗಳು ಹೆಚ್ಚಾಗುತ್ತಿದೆ. ಸಮಯಕ್ಕೆ ಸರಿಯಾಗಿ ಕೂಲಿ ಕಾರ್ಮಿಕರು ಸಿಗದ ಸಮಸ್ಯೆಯೂ ರೈತರನ್ನು ಕಾಡುತ್ತಿದೆ.

ಇದರಿಂದಾಗಿ ಔಷಧಿ ಸಿಂಪಡಣೆಗೆ ಕೃಷಿಕರು ಪರದಾಡುವ ಪರಿಸ್ಥಿತಿ ತಲಕಾಡಿನಲ್ಲಿ ಎದುರಾಗಿದೆ. ಔಷಧಿ ತುಂಬಿದ ಕ್ಯಾನುಗಳನ್ನು ಮಳೆ ಇರುವ ಕಾರಣ ಜಮೀನಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯುವುದು ಕಷ್ಟವಾಗಿದೆ. ಈ ಕಾರಣದಿಂದಲೂ ಪರ್ಯಾಯವಾಗಿ ಡ್ರೋನ್ ಬಳಕೆ ಅನಿವಾರ್ಯವಾಗಿದೆ.

‘ಕಡಿಮೆ ಸಮಯದಲ್ಲಿ ಹೆಚ್ಚಿನ ಪರಿಣಾಮಕಾರಿಯಾದ ಸಿಂಪಡಣೆ ಡ್ರೋನ್ ಮೂಲಕ ಸಾಧ್ಯ. ಹೊಸತನದ ಜೊತೆಗೆ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಭತ್ತ ಸೇರಿ ಇತರೆ ಬೆಳೆಯನ್ನು ರೋಗದಿಂದ ರಕ್ಷಿಸಲು ಡ್ರೋನ್ ಸಹಕಾರಿ’ ಎಂದು ಡೋನ್ ಮಾಲಿಕ ಮಣಿಕಂದನ್ ತಿಳಿಸಿದರು.

ಸಪ್ಟೆಂಬರ್– ಅಕ್ಟೋಬರ್ ಮಾಹೆಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಪರಿಣಾಮ ಭತ್ತದ ಬೆಳೆಗೆ ಬಹಳಷ್ಟು ಅನುಕೂಲ ಜೊತೆಗೆ ಅನನುಕೂಲ ಸೃಷ್ಟಿ ಮಾಡಿಕೊಟ್ಟಿದೆ.

‘ನಿರೀಕ್ಷೆಗೆ ಮೀರಿದ ಮಳೆಯಿಂದಾಗಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ಇದೂ ಕೂಡ ರೋಗಬಾಧೆಗೆ ಕಾರಣ’ ಎಂದು ರೈತ ಟಿ.ಪಿ.ಗೋವಿಂದ್ ಬೇಸರ ವ್ಯಕ್ತಪಡಿಸಿದರು.

‘ಅಧಿಕ ತೇವಾಂಶ ಹೆಚ್ಚಾಗಿರುವುದರಿಂದ ಸಾಧ್ಯವಾದಷ್ಟು ಜಮೀನಿನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಶಿಫಾರಸು ಮಾಡಿದ ಔಷಧಿಗಳನ್ನು ಭತ್ತದ ಬುಡಕ್ಕೆ ಸಿಂಪಡಿಸುವ ಮೂಲಕ ರೋಗಬಾಧೆ ಭತ್ತಕ್ಕೆ ಹರಡದಂತೆ ರೈತರು ಜಾಗೃತ ರಾಗಬೇಕು. ಸಕಾಲಕ್ಕೆ ಔಷಧಿ ಸಿಂಪ‍‍ಡಣೆ ಮಾಡಬೇಕು’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಸುಹಾಸಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಧವಮಂತ್ರಿ ಅಚ್ಚುಕಟ್ಟು ಪ್ರದೇಶ 5,828 ಎಕರೆ ರಾಮಸ್ವಾಮಿ ನಾಲೆ ಅಚ್ಚುಕಟ್ಟು ಪ್ರದೇಶ 5,000 ಎಕರೆ ನಿರಂತರ ಮಳೆಯಿಂದ ರೋಗಬಾಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.