ADVERTISEMENT

ಶ್ರೀರಂಗಪಟ್ಟಣ: ಅನಾಥವಾದ ವೀರಗಲ್ಲು, ಮಾಸ್ತಿ ಕಲ್ಲು!

ತಗಡವಾಡಿ ಬಿಸಿಲು, ಮಳೆಗೆ ಮಾಸಿ ಹೋಗುತ್ತಿರುವ ಐತಿಹಾಸಿಕ ಕುರುಹು

ಗಣಂಗೂರು ನಂಜೇಗೌಡ
Published 13 ಜೂನ್ 2024, 6:03 IST
Last Updated 13 ಜೂನ್ 2024, 6:03 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ತಡಗವಾಡಿ ಗ್ರಾಮದ ಬೋರೇದೇವರ ದೇವಾಲಯದ ಬಳಿ ಅನಾಥವಾಗಿ ಬಿದ್ದಿರುವ ಐತಿಹಾಸಿಕ ವೀರಗಲ್ಲುಗಳು&nbsp;</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ತಡಗವಾಡಿ ಗ್ರಾಮದ ಬೋರೇದೇವರ ದೇವಾಲಯದ ಬಳಿ ಅನಾಥವಾಗಿ ಬಿದ್ದಿರುವ ಐತಿಹಾಸಿಕ ವೀರಗಲ್ಲುಗಳು 

   

ಶ್ರೀರಂಗಪಟ್ಟಣ: ಹಲವು ಶತಮಾನಗಳ ಹಿಂದಿನ ಐತಿಹಾಸಿಕ ಮಹತ್ವದ ಘಟನಾವಳಿಗಳಿಗೆ ಸಾಕ್ಷಿಯಾಗಿರುವ ವೀರಗಲ್ಲು ಮತ್ತು ಮಾಸ್ತಿ (ಮಹಾಸತಿ) ಕಲ್ಲುಗಳು ತಾಲ್ಲೂಕಿನ ತಡಗವಾಡಿ ಗ್ರಾಮದಲ್ಲಿ ಅನಾಥವಾಗಿ ಬಿದ್ದಿವೆ.

ಗ್ರಾಮದ ಬೋರೇದೇವರ ದೇವಾಲಯದ ಎದುರು, ರಸ್ತೆ ಬದಿಯಲ್ಲೇ ಈ ಪಳೆಯುಳಿಕೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಐತಿಹಾಸಿಕ ಕುರುಹುಗಳ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡುತ್ತಿವೆ. ವೀರಗಲ್ಲು ಮತ್ತು ಮಾಸ್ತಿಕಲ್ಲುಗಳ ಬಳಿ ಮಣ್ಣು ತಂದು ಸುರಿಯಲಾಗುತ್ತಿದೆ. ಐತಿಹಾಸಿಕ ಕುರುಹುಗಳ ಊರಿನ ಮಧ್ಯೆ ಇದ್ದರೂ ಈ ಬಗ್ಗೆ ಇದುವರೆಗೆ ಯಾರೂ ನಿಗಾ ವಹಿಸದೇ ಇರುವುದು ಟೀಕೆಗೆ ಗ್ರಾಸವಾಗಿದೆ.

ADVERTISEMENT

ಆರೇಳು ಮಾಸ್ತಿ ಕಲ್ಲುಗಳು ಇಲ್ಲಿ ಅಸ್ತವ್ಯಸ್ತವಾಗಿ ಬಿದ್ದಿವೆ. ಎಂಟಕ್ಕೂ ಹೆಚ್ಚು ವೀರಗಲ್ಲುಗಳೂ ಇವೆ. ಎರಡು ವೀರಗಲ್ಲು ಮತ್ತು ಒಂದು ಮಾಸ್ತಿ ಕಲ್ಲಿನ ಮೇಲೆ ಅಗಲವಾದ ಕಲ್ಲಿನ ಚಪ್ಪಡಿ ಇದ್ದು ಕಿರು ಗುಡಿಯಂತೆ ಕಾಣುತ್ತದೆ. ಯುದ್ದದಲ್ಲಿ ವೀರರು ಮೃತಪಟ್ಟ ಕುರುಹಾಗಿ ವೀರಗಲ್ಲುಗಳು ಮತ್ತು ಪತಿಯ ಜತೆ ಪತ್ನಿ ಸಹಗಮ (ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದು) ಮಾಡಿರುವುದಕ್ಕೆ ಮಾಸ್ತಿ ಕಲ್ಲುಗಳು ಸಾಕ್ಷಿಯಾಗಿವೆ.

ವೀರಗಲ್ಲುಗಳ ಪಕ್ಕದಲ್ಲೇ ಇರುವ ಮಾಸ್ತಿ (ಮಹಾಸತಿ) ಕಲ್ಲು

ಪ್ರತಿ ವೀರಗಲ್ಲುಗಳಲ್ಲೂ ಮೂರು ಸಾಲಿನ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ. ಕೆಳಗಿನ ಸಾಲಿನಲ್ಲಿ ಸೈನಿಕನು ಶತ್ರುವಿನ ಜತೆ ಕಾಳಗ ಮಾಡುವುದು, ಎರಡನೇ ಸಾಲಿನಲ್ಲಿ ವೀರ ಮರಣವನ್ನಪ್ಪುವುದು, ಮೂರನೇ ಸಾಲಿನಲ್ಲಿ ದೇವದೂತರು ಆತನನ್ನು ಕೈಲಾಸಕ್ಕೆ ಹೊತ್ತೊಯ್ಯುತ್ತಿರುವುದು ಮತ್ತು ತುತ್ತ ತುದಿಯಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳಿವೆ. ಯುದ್ದದಲ್ಲಿ ಮಡಿದವರ ಹೆಸರು ಎಂದಿಗೂ ಉಳಿಯಲಿ ಎಂಬುದರ ಸಂಕೇತವಾಗಿ ಈ ಕಲ್ಲುಗಳನ್ನು ಕಡೆದು ನಿಲ್ಲಿಸಲಾಗಿದೆ.

ಇಲ್ಲಿರುವ ಎಲ್ಲವೂ ಒಕ್ಕೈ ಮಾಸ್ತಿ ಕಲ್ಲುಗಳು. ಮಹಿಳೆಯು ತನ್ನ ಬಲಗೈಯನ್ನು ಮೇಲೆ ಎತ್ತಿರುವಂತೆ ಚಿತ್ರಿಸಲಾಗಿದೆ. ಕೆಳ ಭಾಗದಲ್ಲಿ ಸೈನಿಕ ಮತ್ತು ಆತನ ಪತ್ನಿಯ ಚಿತ್ರಗಳಿವೆ. ಕೆಲವು ಮಾಸ್ತಿ ಕಲ್ಲುಗಳಲ್ಲಿ ಮಹಿಳೆಯು ತನ್ನ ಪತಿಯ ಜತೆ ಛತ್ರಿಯನ್ನು ಹಿಡಿದು ನಿಂತಿರುವಂತೆ, ಮತ್ತೆ ಕೆಲವದರಲ್ಲಿ ಕರ ಜೋಡಿಸಿ ಪ್ರಾರ್ಥಿಸುತ್ತಿರುವಂತೆ ಚಿತ್ರಿಸಲಾಗಿದೆ.

ತಡಗವಾಡಿ ಗ್ರಾಮಕ್ಕೆ ಮೂರು ಕಿ.ಮೀ. ದೂರದ ಅರಕೆರೆ (ವೀರ ನರಸಿಂಹಪುರ) ಗ್ರಾಮವು 13ನೇ ಶತಮಾನದಲ್ಲಿ ಹೊಯ್ಸಳರ ದೊರೆ ವೀರ ಸೋಮೇಶ್ವರನ ಆಳ್ವಿಕೆಗೆ ಒಳಪಟ್ಟಿತ್ತು. ಅಗ್ರಹಾರವಾಗಿದ್ದ ಅರಕೆರೆಯನ್ನು ಹಿರಿಯಪ್ಪ ಎಂಬ ಪಾಳೇಗಾರ ನೋಡಿಕೊಳ್ಳುತ್ತಿದ್ದ. 16ನೇ ಶತಮಾನದಲ್ಲಿ ಇದು ಸೇನಬೋವ ರಾಮಣ್ಣ ಎಂಬಾತನ ಸುಪರ್ದಿಯಲ್ಲಿತ್ತು ಎಂಬೆಲ್ಲ ಅಂಶಗಳು ಲಭ್ಯ ಶಿಲಾ ಶಾಸನಗಳಿಂದ ತಿಳಿಯುತ್ತವೆ. ತಡಗವಾಡಿ ಗ್ರಾಮವೂ ಅರಕೆರೆ ಪಾಳೇಪಟ್ಟಿಗೆ ಸೇರಿದ್ದು, ಇಲ್ಲಿರುವ ವೀರಗಲ್ಲು ಮತ್ತು ಮಾಸ್ತಿಕಲ್ಲುಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದರೆ ಐತಿಹಾಸಿಕ ಘಟನಾವಳಿಗಳ ಮೇಲೆ ಬೆಳಕು ಚೆಲ್ಲಬಹುದು ಎಂಬುದು ಸ್ಥಳೀಯರ ಒತ್ತಾಯ.

‘ಇಲ್ಲಿರುವ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳ ಮಹತ್ವ ಗ್ರಾಮಸ್ಥರಿಗೆ ಅಷ್ಟಾಗಿ ಗೊತ್ತಿಲ್ಲ. ಈ ಬಗ್ಗೆ ಗ್ರಾಮದ ಸಂಘ, ಸಂಸ್ಥೆಗಳು ಹಾಗೂ ಮುಖಂಡರ ಸಭೆ ನಡೆಸಿ ಇವುಗಳ ಸಂರಕ್ಷಣೆ ಕುರಿತು ಚರ್ಚಿಸಲಾಗುವುದು’ ಎಂದು ಗ್ರಾಮದ ಸೋಮೇಶ್ವರ ಕನ್ನಡ ಯುವಕರ ಸಂಘದ ಕಾರ್ಯದರ್ಶಿ ನಾಗರಾಜು ಹೇಳಿದ್ದಾರೆ.

‘ತಡಗವಾಡಿ ಗ್ರಾಮದ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳ್ನು ‘ನಮ್ಮ ಸ್ಮಾರಕ ಯೋಜನೆ’, ನರೇಗಾ ಯೋಜನೆ ಅಥವಾ ಇಲಾಖೆಯಿಂದ ಸಂರಕ್ಷಿಸಲಾಗುವುದು. ಈ ಪಾರಂಪರಿಕ ಕುರುಹುಗಳನ್ನು ಇರುವ ಸ್ಥಳದಲ್ಲೇ ಸಂರಕ್ಷಣೆ ಮಾಡಲು ಕ್ರಮ ವಹಿಸಲಾಗುತ್ತದೆ’ ಎಂದು ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್ ಎನ್‌.ಎನ್‌. ಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.