ಸಾಲಿಗ್ರಾಮ: ವರುಣನ ಅವಕೃಪೆಯಿಂದಾಗಿ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಮಳೆಯಾಶ್ರಿತ ಬೆಳೆಯಾದ ರಾಗಿ ಒಣಗುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ನಾಟಿ ಮಾಡಿರುವ ಭತ್ತಕ್ಕೆ ಸಕಾಲದಲ್ಲಿ ನೀರು ಸಿಗದೆ ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್‌ನಲ್ಲಿ 27.96 ಸೆ.ಮೀ ಮಳೆ ಬಿದ್ದಿತ್ತು. ಆದರೆ, ಈ ವರ್ಷದ ಆಗಸ್ಟ್‌ನಲ್ಲಿ ಕೇವಲ 0.98 ಸೆ.ಮೀ. ಮಳೆಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ರೈತರು ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ ನಾಟಿ ಮಾಡಿದ್ದು, ಮಳೆ ಕೊರತೆಯಿಂದ ಫಸಲು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೀರಾವರಿ ಸೌಲಭ್ಯ ಹೊಂದಿರುವ, ತಾಲ್ಲೂಕಿನ ಗಡಿಭಾಗದ ಚನ್ನಂಗೆರೆ, ಮಾಯಿಗೌಡನಹಳ್ಳಿ, ಸಕ್ಕರೆ, ಹೊಸೂರು, ಹಳಿಯೂರು, ಚುಂಚನಕಟ್ಟೆ, ಮಿರ್ಲೆ, ಶ್ರೀರಾಮಪುರ, ಅಂಕನಹಳ್ಳಿ, ಮಾಯಿಗೌಡನಹಳ್ಳಿ, ಸಾಲಿಗ್ರಾಮ, ಪಶುಪತಿ, ಕೆಡಗ, ಮಾವನೂರು, ಲಕ್ಷ್ಮೀಪುರ, ಚಿಕ್ಕನಾಯಕನಹಳ್ಳಿ, ನಾಟನಹಳ್ಳಿ, ಹಳೆಮಿರ್ಲೆ ಗ್ರಾಮಗಳಲ್ಲಿ ರೈತರು ಭತ್ತದ ನಾಟಿ ಮಾಡಿದ್ದು, ಭತ್ತದ ಫಸಲಿಗೆ ನೀರಿನ ಅಗತ್ಯವಿದೆ. ಆದರೆ, ನಾಲೆಯಿಂದ ಸಮಪರ್ಕವಾಗಿ ನೀರು ಹರಿಸದ ಕಾರಣ ಭತ್ತದ ಫಸಲು ಒಣಗುತ್ತಿದೆ.
ತಾಲ್ಲೂಕು ವ್ಯಾಪ್ತಿಯಲ್ಲಿ 10 ಸಾವಿರ ಹೆಕ್ಟೇರ್‌ಗೂ ಹೆಚ್ಚು ನೀರಾವರಿ ಪ್ರದೇಶವಿದ್ದು, ಆಗಸ್ಟ್ ತಿಂಗಳಾಂತ್ಯದಲ್ಲಿ ಸುಮಾರು 7,320 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡಿದ್ದು, ಉಳಿದ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲು ನೀರಿನ ಕೊರತೆ ಇರುವುದರಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ. ಮಳೆ ಆಶ್ರಯದಲ್ಲಿ ಬೇಸಾಯ ಮಾಡುವ ಸುಮಾರು 5 ಸಾವಿರ ಎಕರೆ ಪ್ರದೇಶ ಪಾಳು ಬಿದ್ದಿದೆ.
‘ಬೇಸಾಯ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತರು ಭತ್ತದ ನಾಟಿ ಮಾಡಲು ಪ್ರತಿ ಎಕರೆಗೆ ಸುಮಾರು ₹30 ಸಾವಿರ ಖರ್ಚು ಮಾಡಿದ್ದಾರೆ. ನೀರಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಮಳೆ ಕೊರತೆಯಿಂದ ನಾಲೆಗಳಲ್ಲಿ ನೀರು ಹರಿಯದ ಕಾರಣ ಫಸಲು ರೈತರ ಕೈಸೇರುವುದು ಅನುಮಾನವಿದೆ’ ಎಂದು ಸಾಲಿಗ್ರಾಮ ರೈತ ನಾಗೇಂದ್ರ (ಪಾಪಣ್ಣ) ಆತಂಕ ವ್ಯಕ್ತಪಡಿಸಿದರು.
ಬೇಸಾಯ ಮಾಡಲು ಕಾರ್ಮಿಕರ ಕೊರತೆ, ರಸಗೊಬ್ಬರ, ಉಳುಮೆ ಮಾಡಲು ಜಾನುವಾರು ಸಮಸ್ಯೆ ಹಾಗೂ ಗುಣಮಟ್ಟದ ಬಿತ್ತನೆ ಬೀಜದ ಕೊರತೆ ನಡುವೆಯೂ ಭತ್ತದ ನಾಟಿ ಮಾಡಿರುವ, ಫಸಲು ಕೈಗೆ ಸಿಗುವುದಿಲ್ಲ ಎಂಬ ಆತಂಕದಲ್ಲಿ ರೈತರಿದ್ದಾರೆ. ಭತ್ತದ ಫಸಲಿಗೆ ಸಕಾಲದಲ್ಲಿ ರಸಗೊಬ್ಬರ, ಕಳೆನಾಶಕ, ನೀರು ಲಭ್ಯವಾದರೆ ಎಕರೆಗೆ 19ರಿಂದ 20 ಕ್ವಿಂಟಲ್ ಇಳುವರಿ ಬರುತ್ತದೆ. ಆದರೆ, ಈಗ ಫಸಲು ಕೈತಪ್ಪುವುದರಿಂದ ರೈತರು ನಷ್ಟಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಹೊನ್ನೇನಹಳ್ಳಿ ರೈತ ಎಸ್.ಬಿ.ಅಶೋಕ್ ಹೇಳಿದರು.
1 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ ನಾಟಿ ಕಳೆದ ಆಗಸ್ಟ್‌ನಲ್ಲಿ ಬಿದ್ದದ್ದು ಕೇವಲ 0.98 ಸೆ.ಮೀ. ಮಳೆ ಮಳೆ ಕೊರತೆಯಿಂದ ನಾಲೆಗಳಲ್ಲಿ ಹರಿಯದ ನೀರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.