ADVERTISEMENT

ಕಾರ್ಮಿಕರ ಕನಿಷ್ಠ ವೇತನ ಹಚ್ಚಳ ಶೀಘ್ರ: ಗೋಪಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 10:31 IST
Last Updated 25 ಅಕ್ಟೋಬರ್ 2024, 10:31 IST

ಮೈಸೂರು: ‘ಕಾರ್ಮಿಕರ ಕನಿಷ್ಠ ವೇತನವನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು’ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಎಚ್‌.ಎನ್. ಗೋಪಾಲಕೃಷ್ಣ ತಿಳಿಸಿದರು.

ಇಲ್ಲಿನ ವಿದ್ಯಾರಣ್ಯಪುರಂನ ಬಿಲ್ಡರ್ಸ್‌ ಚಾರಿಟಬಲ್‌ ಟ್ರಸ್ಟ್‌ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಕಾರ್ಮಿಕ ಕಾಯ್ದೆಗಳು ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವೇತನ ಪರಿಷ್ಕರಣೆಯು 5 ವರ್ಷಗಳ ಹಿಂದೆ ನಡೆದಿತ್ತು. ಈಗ ವೈಜ್ಞಾನಿಕವಾಗಿ ನಿಗದಿಪಡಿಸಲಾಗುವುದು. ಪ್ರಸ್ತುತ ₹ 14ಸಾವಿರ ಕೊಡಲಾಗುತ್ತಿದ್ದು, ಅದರಲ್ಲಿ ಜೀವನ ನಡೆಸುವುದು ಕಷ್ಟ. ಹಾಗೆಂದು ಸಂಘಟನೆಗಳು ಕೇಳಿದಂತೆ ₹35ಸಾವಿರ ಕೊಡುವುದಕ್ಕೂ ಆಗುವುದಿಲ್ಲ. ಎಲ್ಲರಿಗೂ ಒಮ್ಮತವಾದ ಕನಿಷ್ಠ ವೇತನ ನಿಗದಿಪಡಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ 20ಸಾವಿರಕ್ಕೂ ಜಾಸ್ತಿ ನೋಂದಾಯಿತ ಸಂಸ್ಥೆಗಳಿದ್ದು, ಒಟ್ಟು 65 ಲಕ್ಷ ಕಾರ್ಮಿಕರಿದ್ದಾರೆ. ಅಸಂಘಟಿತ ವಲಯದಲ್ಲಿ 1.81 ಕೋಟಿ ಕಾರ್ಮಿಕರಿದ್ದಾರೆ. ಇಲಾಖೆಗೆ 880 ಹುದ್ದೆ ಮಂಜೂರಾಗಿದ್ದು, ಪ್ರಸ್ತುತ 450 ಅಧಿಕಾರಿಗಳಷ್ಟೆ ಕೆಲಸ ಮಾಡುತ್ತಿದ್ದೇವೆ. ಇಲಾಖೆಯ ವ್ಯಾಪ್ತಿಯು ದೊಡ್ಡದಿದೆ’ ಎಂದರು.

‘25 ಕಾರ್ಮಿಕ ಕಾಯ್ದೆಗಳನ್ನು ಕ್ರೋಡೀಕರಿಸಿ 4 ಕಾರ್ಮಿಕ ಸಂಹಿತೆಗಳು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರಬಹುದು. ಇದಕ್ಕಾಗಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 38 ಲಕ್ಷ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದಾರೆ. ವರ್ಷಕ್ಕೆ ಸರಾಸರಿ ₹1ಸಾವಿರ ಕೋಟಿ ಕಾರ್ಮಿಕ ಸೆಸ್ ಸಂಗ್ರಹವಾಗುತ್ತಿದೆ. ಅದರಲ್ಲಿ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಲೇಬರ್ ವೆಲ್‌ಫೇರ್ ಬೋರ್ಡ್‌ನಿಂದ ಏಳು ಯೋಜನೆ ಜಾರಿಗೊಳಿಸಲಾಗಿದೆ. ಉದ್ಯೋಗದಾತರು ಮಂಡಳಿಗೆ ಪಾವತಿಸಬೇಕಾದ ಪಾಲನ್ನು ನಿಯಮಿತವಾಗಿ ಕಟ್ಟಬೇಕು. ಹೋದ ವರ್ಷ ₹ 57 ಕೋಟಿ ವೆಚ್ಚವಾಗಿದ್ದು, 29ಸಾವಿರ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಒದಗಿಸಿದ್ದೇವೆ’ ಎಂದರು.

‘ಅಸಂಘಟಿತ ವಲಯದವರು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಪಡೆದುಕೊಳ್ಳಲು ಕೇಂದ್ರದ ‘ಇ–ಶ್ರಮ್’ ಪೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬೇಕು. 398 ವರ್ಗದ ಅಸಂಘಟಿತ ಕಾರ್ಮಿಕರಿಗೆ ಅವಕಾಶವಿದೆ. ಈವರೆಗೆ 99.87 ಲಕ್ಷ ಮಂದಿ ಮಾತ್ರ ನೋಂದಾಯಿಸಿದ್ದಾರೆ. ಉಳಿದವರೂ ಮುಂದಾಗಬೇಕು’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಗಿಗ್ ಕ್ಷೇತ್ರದ ಕಾರ್ಮಿಕರು (ಸ್ವತಂತ್ರ ಕಾರ್ಮಿಕರು) 2.39 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಅವರಿಗೆ ವಿಮೆ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಈವರೆಗೆ 10ಸಾವಿರ ಮಂದಿ ಮಾತ್ರವೇ ನೋಂದಾಯಿಸಿದ್ದಾರೆ. ಅವರಿಗಾಗಿಯೇ ಪ್ರತ್ಯೇಕ ಮಂಡಳಿ ರಚಿಸುವ ಚಿಂತನೆಯೂ ನಡೆದಿದೆ. ದಿನಪತ್ರಿಕೆ ಹಾಕುವ 40ಸಾವಿರದಿಂದ 50ಸಾವಿರ ಮಂದಿ ಇದ್ದು, ಅವರಿಗೂ ವಿಮೆ ದೊರೆಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.