ADVERTISEMENT

ಮುಡಾ ‘ಅಕ್ರಮ’; ಅಧಿಕಾರಿಗಳ ವರ್ಗಾವಣೆ

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ಸಭೆ: ತನಿಖೆಗೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 21:17 IST
Last Updated 1 ಜುಲೈ 2024, 21:17 IST
ಮೈಸೂರಿನ ಮುಡಾ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಡಾ ಅಧ್ಯಕ್ಷ ಕೆ. ಮರಿಗೌಡ, ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಶದ್ ಉರ್ ರೆಹಮಾನ್‌ ಶರೀಫ್‌ ಪಾಲ್ಗೊಂಡಿದ್ದರು
ಮೈಸೂರಿನ ಮುಡಾ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಡಾ ಅಧ್ಯಕ್ಷ ಕೆ. ಮರಿಗೌಡ, ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಶದ್ ಉರ್ ರೆಹಮಾನ್‌ ಶರೀಫ್‌ ಪಾಲ್ಗೊಂಡಿದ್ದರು   

ಮೈಸೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ, ಆಯುಕ್ತ ಸೇರಿದಂತೆ ಮೂವರು ಅಧಿಕಾರಿಗಳನ್ನು ಸರ್ಕಾರವು ವರ್ಗಾವಣೆ ಮಾಡಿದೆ. ಜತೆಗೆ ತನಿಖೆಗೆ ಸಮಿತಿಯನ್ನೂ ರಚಿಸಿದೆ.

ಮುಡಾ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ತುರ್ತು ಸಭೆ ಬಳಿಕ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

‘ಎಲ್ಲ ಆರೋಪಗಳ ಸಮಗ್ರ ತನಿಖೆಗಾಗಿ ತಂಡ ರಚಿಸಿದ್ದೇವೆ. ನಿಷ್ಪಕ್ಷಪಾತ ತನಿಖೆಯ ಕಾರಣಕ್ಕೆ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್, ಕಾರ್ಯದರ್ಶಿ ಶೇಖರ್‌ ಮತ್ತು ಎಇಇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಆದೇಶಿಸಿದ್ದೇನೆ. ಎಲ್ಲ ಪ್ರಕರಣಗಳ ಕುರಿತು ನ್ಯಾಯಸಮ್ಮತ ತನಿಖೆ ನಡೆಸಿ ಕ್ರಮ ಜರುಗಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಲಂಕಷವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಯಾರೋ ಅಧಿಕಾರಿಗಳು, ದಲ್ಲಾಳಿಗಳು ಈ ಕೆಲಸ ಮಾಡಿದ್ದರೆ ಅದನ್ನು ಶಾಸಕರ ಮೇಲೆ ಆರೋಪಿಸಬಾರದು’ ಎಂದು ಹೇಳಿದರು.

ಹಂಚಿಕೆಯಾದ ನಿವೇಶನ ತಡೆಯುತ್ತೇವೆ: ‘ಮುಡಾದಲ್ಲಿ ಮುಂದಿನ ಒಂದು ತಿಂಗಳು ಯಾವುದೇ ನಿವೇಶನ ಹಂಚಿಕೆ ಮಾಡುವಂತಿಲ್ಲ. ಸಭೆ ನಡೆಸುವಂತಿಲ್ಲ. ಕಳೆದ 2–3 ವರ್ಷದಲ್ಲಿ 50:50 ಅನುಪಾತ ಹಾಗೂ ಬದಲಿ ನಿವೇಶನ ಸೇರಿದಂತೆ ಹಂಚಿಕೆ ಆಗಿರುವ ಎಲ್ಲ ನಿವೇಶನಗಳನ್ನೂ ತಡೆ ಹಿಡಿಯಲಾಗುವುದು. ತನಿಖೆ ಬಳಿಕ ನೈಜವಾಗಿದ್ದವರಿಗೆ ನಿವೇಶನ ಹಿಂತಿರುಗಿಸಿ, ಅಕ್ರಮ ನಡೆದಿದ್ದಲ್ಲಿ ಅಂತಹ ನಿವೇಶನಗಳನ್ನು ಮುಡಾ ವಶಕ್ಕೆ ಪಡೆಯಲಾಗುವುದು. ಯಾವುದೇ ಪಕ್ಷದವರಿದ್ದರೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದರು.

‘ಸಚಿವ ಸಂಪುಟದ ಅನುಮತಿ ಪಡೆಯದೆಯೇ ಶೇ 50:50 ಅನುಪಾತದ ಅಡಿ ನಿವೇಶನ ಹಂಚಿಕೆ ಮಾಡಬಾರದು ಎಂದು ಸೂಚಿಸಿ ಕಳೆದ ವರ್ಷ ಅಕ್ಟೋಬರ್‌ನಲ್ಲೇ ಸರ್ಕಾರ ಮುಡಾಕ್ಕೆ ಪತ್ರ ಬರೆದು ಆದೇಶಿಸಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಎಷ್ಟು ನಿವೇಶನ ಹಂಚಿಕೆ ಆಗಿದೆಯೋ ಗೊತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಈ ನಿಯಮ ಜಾರಿಗೆ ಬಂದಿದೆ. ತನಿಖೆ ಬಳಿಕ ನಿಖರ ಮಾಹಿತಿ ಸಿಗಲಿದೆ’ ಎಂದು ವಿವರಿಸಿದರು.

‘ವಿಧಾನಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಆರೋಪಿಸುವಂತೆ ಪ್ರಕರಣದಲ್ಲಿ ಡಾ.ಯತೀಂದ್ರ ಅವರ ಪಾತ್ರವಿಲ್ಲ. ಅವರ ಬಳಿ ಸಾಕ್ಷಿ ಇದ್ದರೆ ತಂದು ಕೊಡಲಿ’ ಎಂದು ಸವಾಲು ಹಾಕಿದರು.

‘ವಿಶ್ವನಾಥ್ ಈಗ ಮಾತನಾಡುತ್ತಿದ್ದಾರೆ. ಸೈಟು ಕೇಳಿಕೊಂಡು ನನ್ನ ಬಳಿ ಬಂದಿದ್ದನ್ನು ಅವರು ನೆನಪಿಸಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

ಶಾಸಕ ಕೆ. ಹರೀಶ್‌ ಗೌಡ, ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ಮುಡಾ ಅಧ್ಯಕ್ಷ ಕೆ. ಮರಿಗೌಡ, ಆಯುಕ್ತ ಜಿ.ಟಿ. ದಿನೇಶ್‌ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಶಾದ್‌ ಉರ್ ರೆಹಮಾನ್‌ ಶರೀಫ್‌ ಸಭೆಯಲ್ಲಿ  ಪಾಲ್ಗೊಂಡಿದ್ದರು. ಮುಡಾ ಕಚೇರಿ ಸುತ್ತ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

‘ಇದಕ್ಕೂ ಮುನ್ನ ಸಚಿವರು ನಗರದ ಖಾಸಗಿ ಹೋಟೆಲ್‌ನಲ್ಲಿ ಆಪ್ತರು ಹಾಗೂ ಕೆಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕರಣದ ಮಾಹಿತಿ ಪಡೆದರು’ ಎಂದು ಮೂಲಗಳು ತಿಳಿಸಿವೆ.

15 ದಿನದಲ್ಲಿ ವರದಿಗೆ ಸೂಚನೆ

ಮುಡಾದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಗಾಗಿ ರಾಜ್ಯ ಸರ್ಕಾರವು ಸಮಿತಿ ರಚಿಸಿದ್ದು 15 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದೆ. ನಗರಾಭಿವೃದ್ಧಿ ಇಲಾಖೆಯ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಹಾಗೂ ಗ್ರಾಮಾಂತರ ಯೋಜನಾ ವಿಭಾಗದ ಆಯುಕ್ತ ಆರ್. ವೆಂಕಟಾಚಲಪತಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ.ಸಿ. ಶಶಿಕುಮಾರ್‌ ಜಂಟಿ ನಿರ್ದೇಶಕಿ ಶಾಂತಲಾ ಹಾಗೂ ಉಪ ನಿರ್ದೇಶಕ ಪ್ರಕಾಶ್‌ ಸಮಿತಿಯಲ್ಲಿದ್ದಾರೆ.

‘ಮುಡಾದಲ್ಲಿ ನಡೆದಿದೆ ಎನ್ನಲಾದ ಎಲ್ಲ ಅವ್ಯವಹಾರಗಳ ಬಗ್ಗೆ ಸಮಿತಿಯು ಪರಿಶೀಲಿಸಿ 15 ದಿನಗಳ ಒಳಗೆ ಸಮಗ್ರ ವರದಿ ನೀಡಬೇಕು. ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸ್ಪಷ್ಟ ಅಭಿಪ್ರಾಯ ನೀಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ಸೂಚನೆ ಮೀರಿ ಹಂಚಿಕೆ?

ಸರ್ಕಾರದ ನಿಯಾಮಾವಳಿ ಹಾಗೂ ಆದೇಶಗಳನ್ನು ಉಲ್ಲಂಘಿಸಿ ಮುಡಾ ವ್ಯಾಪ್ತಿಯಲ್ಲಿ ಭಾರಿ ಮೌಲ್ಯದ ನಿವೇಶನಗಳನ್ನು ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದ್ದು ಇದೇ ಅಧಿಕಾರಿಗಳಿಗೆ ಉರುಳಾಗುವ ಸಾಧ್ಯತೆ ಇದೆ.

‘ಪ್ರೋತ್ಸಾಹದಾಯಕ ನಿವೇಶನಗಳನ್ನು ನೀಡುವ ಸಂಬಂಧ 2015ರಲ್ಲಿ ಸರ್ಕಾರ ನಿಯಮ ರೂಪಿಸಿತು. ‌ನಂತರ ರಚನೆಯಾದ ಬಡಾವಣೆಗಳ ಭೂಸಂತ್ರಸ್ತರಿಗೆ ಮಾತ್ರ ಈ ನಿಯಮಗಳು ಅನ್ವಯಿಸುತ್ತವೆ. ಆದರೆ 30–40 ವರ್ಷಗಳ ಹಿಂದೆ ಜಮೀನು ನೀಡಿದವರ ಹೆಸರಿಗೂ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅದಕ್ಕೆ ಬೇಕಾದ ದಾಖಲೆಗಳನ್ನೂ ಅಷ್ಟೇ ತ್ವರಿತವಾಗಿ ಸೃಷ್ಟಿಸಲಾಗಿದೆ.

ಹೀಗೆ ಹಂಚಿಕೆ ಮಾಡಲಾದ ನಿವೇಶನಗಳ ಅಳತೆಯಲ್ಲೂ ಉದಾರತೆ ತೋರಿದ್ದು ಒಂದೊಂದು ನಿವೇಶನದ ಮೌಲ್ಯವೇ ಕೋಟಿಗಟ್ಟಲೆ ಇದೆ. ಈ ಎಲ್ಲ ನಿವೇಶನಗಳ ಮೌಲ್ಯ ಸಾವಿರಾರು ಕೋಟಿ ದಾಟಬಹುದು. ಇದರಲ್ಲಿ ಎಷ್ಟು ಅಕ್ರಮ ಎಷ್ಟು ಸಕ್ರಮ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ’ ಎಂದು ಮುಡಾ ವ್ಯವಹಾರಗಳನ್ನು ಬಲ್ಲ ಮುಖಂಡರೊಬ್ಬರು ತಿಳಿಸಿದರು.

‘50:50 ಅನುಪಾತ ಅಡಿ ನಿವೇಶನ ನೀಡಲು ಕಡ್ಡಾಯವಾಗಿ ಸರ್ಕಾರದ ಅನುಮತಿ ಬೇಕು. ಸರ್ಕಾರವೇ ಈ ಅನುಪಾತದಲ್ಲಿ ನಿವೇಶನ ನೀಡುವಂತಿಲ್ಲ ಎಂದು ಎಚ್ಚರಿಸಿದ್ದರೂ ಆ ಆದೇಶವನ್ನು ಗಾಳಿಗೆ ತೂರಿ ಭೂಸಂತ್ರಸ್ತರ ಹೆಸರಿನಲ್ಲಿ ನೂರಾರು ನಿವೇಶನಗಳು ಹಂಚಿಕೆ ಆಗಿವೆ’ ಎಂಬ ಆರೋಪಗಳೂ ಕೇಳಿಬಂದಿವೆ.

ಮಾಹಿತಿ ಕೋರಿ ಪತ್ರ ಬರೆದ ವಿಶ್ವನಾಥ್‌

‘ಮುಡಾ ವ್ಯಾಪ್ತಿಯಲ್ಲಿ 2020ರಿಂದ ಈವರೆಗೆ ನೋಂದಣಿ ಆಗಿರುವ ನಿವೇಶನಗಳ ಮಾಹಿತಿ ನೀಡುವಂತೆ ಕೋರಿ ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುಡಾದ ನೋಂದಣಿ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಪೆನ್‌ಡ್ರೈವ್‌ ಇಲ್ಲವೇ ಪತ್ರದ ಮೂಲಕ ತುರ್ತಾಗಿ ಮಾಹಿತಿ ನೀಡಬೇಕು’ ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.