ADVERTISEMENT

ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಭೈರತಿ ಸುರೇಶ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 21:10 IST
Last Updated 1 ಜುಲೈ 2024, 21:10 IST
ಭೈರತಿ ಸುರೇಶ್‌
ಭೈರತಿ ಸುರೇಶ್‌   

ಮೈಸೂರು/ಕಲಬುರಗಿ: ‘‌ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸದ್ಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಮುಂದೆಯೂ ಅವರೇ ಇರುತ್ತಾರೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಡಿಸಿಎಂ ಹುದ್ದೆಯೂ ಖಾಲಿ ಇಲ್ಲ. ನಾಲ್ಕೈದು ಡಿಸಿಎಂ ಮಾಡಬೇಕು ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.

'ಅನಗತ್ಯ ಹೇಳಿಕೆ ನೀಡಿದರೆ ಸಚಿವರಿಗೆ ನೋಟಿಸ್ ನೀಡುತ್ತೇವೆ’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಡಿಸಿಎಂ ವಿಚಾರ ಸೇರಿ ಅನಗತ್ಯ ಹೇಳಿಕೆ ಕೊಡಬಾರದೆಂದು ಹೈಕಮಾಂಡ್ ಹೇಳಿರಬಹುದು. ಹೀಗಾಗಿ ಅವರು ಹಾಗೆ ಹೇಳಿರಬಹುದು’ ಎಂದರು.

ADVERTISEMENT

‘ಕೆಲವು ಸಮುದಾಯಗಳಿಗೆ ತಮ್ಮವರಿಗೆ ಸಿಎಂ, ಡಿಸಿಎಂ ಹುದ್ದೆ ಕೊಡಿ ಎಂದು ಕೇಳಲು ವೇದಿಕೆ, ಮಠಾಧೀಶರು, ಪ್ರಬಲವಾದ ಧ್ವನಿಯಾದರೂ ಇದೆ. ಆದರೆ, ಹುಟ್ಟಿನಿಂದ ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸಿಕೊಂಡು ಬರುತ್ತಿರುವ, ಧ್ವನಿ, ಮಠ, ಸ್ವಾಮೀಜಿ ಇಲ್ಲದ ಸಮುದಾಯಗಳು ಏನು ಮಾಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಕಲಬುರಗಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸ್ವಾತಂತ್ರ್ಯದ ನಂತರ ಯಾವ ಸಮುದಾಯಗಳಿಗೆ ಮುಖ್ಯಮಂತ್ರಿ ಪ್ರಾತಿನಿಧ್ಯ ಸಿಕ್ಕಿದೆ? ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಯಾವ ಸಮುದಾಯಗಳಿಗೆ ಎಷ್ಟೆಷ್ಟು ವೋಟ್ ಬಿದ್ದಿವೆ? ಯಾವ ಸಮುದಾಯಗಳು ನೂರಕ್ಕೆ ನೂರು ಮತ ಹಾಕಿದ್ದಾರೆ? ಯಾವ ಸಮುದಾಯ ಶೇ 40ರಷ್ಟು ಮತ ಚಲಾಯಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ಗಟ್ಟಿ ಧ್ವನಿ ಇರುವ ಸಮುದಾಯಗಳು ಪ್ರಶ್ನಿಸುತ್ತಿವೆ. ಧ್ವನಿ ಇಲ್ಲದವರಿಗೆ ಕೇಳಲು ಆಗುತ್ತಿಲ್ಲ. ಆದರೂ ಶೇ 100ರಷ್ಟು ವೋಟ್ ಕೊಟ್ಟಿವೆ. ನಾವ್ಯಾರೂ ಪಕ್ಷ, ಸರ್ಕಾರ ಮತ್ತು ಸಂಘಟನೆಗೆ ನಷ್ಟ ಆಗುವಂತೆ ಎಲ್ಲಿಯೂ ಮಾತನಾಡಿಲ್ಲ’ ಎಂದು ಹೇಳಿದರು.

‘ಸಿಎಂ, ಡಿಸಿಎಂ ಸ್ಥಾನಕ್ಕಾಗಿ ತಾಳ್ಮೆ ಬೇಕು’

(ಬೆಳಗಾವಿ ವರದಿ): ‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಲು ಸಮುಯ ಕೂಡಿ ಬರಬೇಕು. ನಮ್ಮ ರೈಲು ಬಂದಾಗ ನಾವು ಅದರಲ್ಲಿ ಹತ್ತಬೇಕು. ಅಲ್ಲಿಯವರೆಗೆ ತಾಳ್ಮೆ ಮುಖ್ಯ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು ನಿಜ. ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡುವುದು ಸಹಜ. ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದರು.

ಯಾರೋ ಬಾಯಿ ಚಪಲಕ್ಕೆ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡುತ್ತಾರೆ. ಹಾಗಂತ ಶಾಸಕರು ಕೂಡ ಆ ರೀತಿ ಮಾತನಾಡಬಾರದು.
-ಎಚ್.ಸಿ. ಬಾಲಕೃಷ್ಣ , ಶಾಸಕ
ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದಿದ್ದರೆ, ದಲಿತ ಸಮುದಾಯದವರಿಗೆ ಅವಕಾಶ ನೀಡಬೇಕು
-ಗುರುಪ್ರಸಾದ್ ಕೆರಗೋಡು, ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿಸಂಚಾಲಕ
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿರುವುದು ಗೊತ್ತೇ ಇಲ್ಲ. ನಿಮಗೆ ಗೊತ್ತಿದ್ದರೆ ಹೇಳಿ. ಹೈಕಮಾಂಡ್‌ನ ತೀರ್ಮಾನವೇ ಅಂತಿಮವಾಗಿರುತ್ತದೆ
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.