ADVERTISEMENT

ಕಲುಷಿತ ನೀರು ಸೇವಿಸಿ ಮೃತಪಟ್ಟ ಕನಕರಾಜು ಮನೆಗೆ ಸಚಿವ ಮಹದೇವಪ್ಪ ಭೇಟಿ

ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 22 ಮೇ 2024, 14:24 IST
Last Updated 22 ಮೇ 2024, 14:24 IST
ಕೆ.ಸಾಲುಂಡಿ ಗ್ರಾಮದಲ್ಲಿ ಅಸ್ವಸ್ಥರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಕ್ಲಿನಿಕ್‌ಗೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಮುಡಾ ಅಧ್ಯಕ್ಷ ಕೆ.ಮರಿಗೌಡ ಜೊತೆಗಿದ್ದರು
ಕೆ.ಸಾಲುಂಡಿ ಗ್ರಾಮದಲ್ಲಿ ಅಸ್ವಸ್ಥರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಕ್ಲಿನಿಕ್‌ಗೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಮುಡಾ ಅಧ್ಯಕ್ಷ ಕೆ.ಮರಿಗೌಡ ಜೊತೆಗಿದ್ದರು   

ಮೈಸೂರು: ಕಲುಷಿತ ನೀರು ಸೇವಿಸಿ ಮೃತಪಟ್ಟ ತಾಲ್ಲೂಕಿನ ಕೆ.ಸಾಲುಂಡಿ ಗ್ರಾಮದ ನಿವಾಸಿ ಕನಕರಾಜು ಮನೆಗೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆರೋಗ್ಯ ಇಲಾಖೆಯು ನಿರ್ಮಿಸಿರುವ ತಾತ್ಕಾಲಿಕ ಕ್ಲಿನಿಕ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸೂಚನೆಯಂತೆ ಮೃತಪಟ್ಟ ಕನಕರಾಜು ಕುಟುಂಬಕ್ಕೆ ₹2 ಲಕ್ಷ ಪರಿಹಾರ ನೀಡುತ್ತೇವೆ. ಕಲುಷಿತ ನೀರಿನಿಂದ 98 ಜನ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಮಾದರಿ ಪರಿಶೀಲಿಸಿದಾಗ ವಿಪ್ರಿಯೋ ಕಾಲರಾ ಕಂಡುಬಂದಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ರೋಗ ತಡೆಗಟ್ಟಲು ಕ್ರಮವಹಿಸಿದೆ’ ಎಂದರು.

‘34 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐವಿ ಫ್ಲುವಿಡ್‌, ಆ್ಯಂಟಿ ಬಯಾಟಿಕ್‌ ನೀಡಿ ಜನ ಆರೋಗ್ಯವಾಗಿರುವಂತೆ ನೋಡಿಕೊಳ್ಳಲಾಗಿದೆ. ಟ್ಯಾಂಕರ್‌ ಮೂಲಕ ಶುದ್ಧ ನೀರು ಒದಗಿಸುತ್ತಿದ್ದು, ಒಆರ್‌ಎಸ್‌ ಪ್ಯಾಕೆಟ್‌ ನೀಡಿದ್ದಾರೆ. ಮುಡಾದಿಂದ 3 ಹೊಸ ಕೊಳವೆಬಾವಿ ಕೊರೆಸುವ ಚಿಂತನೆ ನಡೆದಿದೆ. ನೀತಿ ಸಂಹಿತೆ ಇರುವುದರಿಂದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ADVERTISEMENT

‘ಜನ ಯಾವುದಕ್ಕೂ ಭಯಪಡದೇ, ಸ್ವಚ್ಛತೆಯಿಂದ ಇರಬೇಕು. ಆರೋಗ್ಯ ಇಲಾಖೆ ಗ್ರಾಮಸ್ಥರಿಗೆ ಕುಡಿಯುವ ನೀರಿನೊಂದಿಗೆ ಎಲೋಜಿನ್‌ ಮಾತ್ರೆ ನೀಡಬೇಕಿದೆ. ಪ್ರಕರಣಕ್ಕೆ ಕಾರಣರಾದವರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.