ADVERTISEMENT

ರಾಜ್ಯಪಾಲರ ವಿರುದ್ಧ ಏಕವಚನದಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 15:40 IST
Last Updated 18 ಆಗಸ್ಟ್ 2024, 15:40 IST
ನರೇಂದ್ರಸ್ವಾಮಿ
ನರೇಂದ್ರಸ್ವಾಮಿ   

ಮಳವಳ್ಳಿ (ಮಂಡ್ಯ): ‘ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಅಯೋಗ್ಯ, ಮುಠ್ಠಾಳ ಅರ್ಜಿ ಕೊಡುತ್ತಾನೆ. ಅವನ ಅರ್ಜಿ ಇಟ್ಕೊಂಡು ನೋಟಿಸ್‌ ಕೊಡ್ತೀರಲ್ಲಪ್ಪ. ರಾಜ್ಯಪಾಲ ಆಗುವುದಕ್ಕೆ ನೀನು ನಾಲಾಯಕ್’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ವಿರುದ್ಧ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. 

ಭಾನುವಾರ ಪಟ್ಟಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಕುಮಾರಸ್ವಾಮಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಲೋಕಾಯುಕ್ತ ಅನುಮತಿ ಕೇಳಿದ್ದರೂ 8 ತಿಂಗಳಿಂದ ಕಾಲಾಹರಣ ಮಾಡುತ್ತಾ  ಕುಳಿತಿದ್ದಿಯಲ್ಲಪ್ಪ. ಮಹಾನ್ ಇಂಡಸ್ಟ್ರಿಯಲಿಸ್ಟ್‌ ಮುರುಗೇಶ ನಿರಾಣಿಯದ್ದು 108 ಹಗರಣಗಳಿವೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿಚಾರದಲ್ಲಿ ಜೊಲ್ಲು ಸುರಿಸಿಕೊಂಡು ಕುಳಿತಿದ್ದೀಯಲ್ಲಪ್ಪ. ಘನವೆತ್ತ ರಾಜ್ಯಪಾಲರೇ ನಿನಗೆ ತಾಕತ್ತಿದ್ದರೆ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ ನಮ್ಮ ಸಿದ್ದರಾಮಯ್ಯ ತಪ್ಪು ಮಾಡಿದ್ದರೆ ಅವರ ಜೊತೆ ನಮಗೂ ಶಿಕ್ಷೆ ಕೊಡು. ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಹೇಡಿಗಳಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 136 ಸೀಟು ಗೆದ್ದರು ಎಂದು ಕುಮಾರಸ್ವಾಮಿಗೆ ಹೊಟ್ಟೆ ಕಿಚ್ಚು. ಗುಡು ಗುಡು ಎಂದು ಓಡೋಗಿ ಮೋದಿ ಕಾಲು ಕಟ್ಟಿಕೊಂಡು ಬಿಜೆಪಿ ಜೊತೆ ಸೇರಿದ್ದೀಯಾ. ಸಿದ್ದರಾಮಯ್ಯರ ಒಂದು ರೋಮವನ್ನೂ ಅಲುಗಾಡಿಸಲು ಆಗಲ್ಲ. ನಿಮ್ಮ ಮೋದಿ, ಅಮಿತ್ ಶಾ ಹೇಡಿ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮ ಆಡಳಿತ ನೋಡಿದರೆ ವಂಚನೆ, ದ್ರೋಹ, ಸ್ವಜನ ಪಕ್ಷಪಾತ ತುಂಬಿದೆ ಎಂದು ತಿಳಿಯುತ್ತೆ’ ಎಂದು ಕಿಡಿಕಾರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.