ADVERTISEMENT

ಮುಡಾ | ಪ್ರತಿ ಸಭೆಯಲ್ಲೂ ಶಾಸಕರ ಫೈಲ್‌ಗಳೇ ಹೆಚ್ಚು: ಎಸ್‌.ಟಿ. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 10:37 IST
Last Updated 7 ಜುಲೈ 2024, 10:37 IST
<div class="paragraphs"><p>ಎಸ್‌.ಟಿ. ಸೋಮಶೇಖರ್‌ </p></div>

ಎಸ್‌.ಟಿ. ಸೋಮಶೇಖರ್‌

   

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆಯುತ್ತಿದ್ದ ಪ್ರತಿ ಸಭೆಯಲ್ಲೂ ಆಗಿನ ಸ್ಥಳೀಯ ಶಾಸಕರ ಫೈಲ್‌ಗಳೇ ಇರುತ್ತಿದ್ದವು ಹಾಗೂ ಚರ್ಚೆಯಾಗದೆ ಪಾಸ್ ಆಗುತ್ತಿದ್ದವು’ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಹಾಲಿ ಶಾಸಕ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಮುಡಾ ಸಭೆಯ ಬಹುತೇಕ ವಿಷಯಗಳು ಶಾಸಕರಿಗೆ ಸೇರಿದವೇ ಆಗಿರುತ್ತಿದ್ದವು. ಈ ಮಟ್ಟಕ್ಕೆ ಇಲ್ಲಿನ ಶಾಸಕರು ಲಾಬಿ ಮಾಡುತ್ತಾರೆ. ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ವಿಧಾನಪರಿಷತ್ ಸದಸ್ಯರು ವಾಸ ಸ್ಥಳವನ್ನು ಮೈಸೂರು ಎಂದು ತೋರಿಸುತ್ತಾರೆ’ ಎಂದು ದೂರಿದರು.

ADVERTISEMENT

‘ನನ್ನ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಮುಡಾದಲ್ಲಿ ಒಂದೇ ಒಂದು ನಿವೇಶನ ಪಡೆದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ನಿವೇಶನ ತೆಗದುಕೊಂಡಿಲ್ಲ. ಒತ್ತಡ ಹೇರಿ ಯಾರಿಗೂ ಕೊಡಿಸಿಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ನನ್ನ ಹೆಸರು ತರಬೇಡಿ’ ಎಂದರು.

‘ನಾನು ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ, ಮುಡಾದಲ್ಲಿನ ಅಕ್ರಮ ಗಮನಕ್ಕೆ ಬಂದಿತ್ತು. ಆಗಿನ ಆಯುಕ್ತರು ಸಭೆ ಮಾಡದೆ ನಿವೇಶನಗಳನ್ನು ಕೊಟ್ಟಿದ್ದಾರೆ. ಶೇ 50:50 ಅನುಪಾತದಡಿ ಕೊಡುವಾಗ ಸಭೆಗೆ ತಂದು ಚರ್ಚಿಸಬೇಕಿತ್ತು. ಇದ್ಯಾವ ನಿಯಮಗಳನ್ನೂ ಅನುಸರಿಸಿಲ್ಲ. ಆದ್ದರಿಂದ ಆಯುಕ್ತರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಹೇಳಿದ್ದೆ. ಆದರೆ, ಜಾತಿ ಪ್ರಭಾವದಿಂದ ಉಳಿದುಬಿಟ್ಟರು. ಆಗಲೇ ಸರಿಯಾದ ಕ್ರಮ ಆಗಿದ್ದರೆ ಈಗ ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿವೇನೋ’ ಎಂದರು. ‘ಈಗಲಾದರೂ ಸಮರ್ಪಕ ತನಿಖೆ ನಡೆದು ವ್ಯವಸ್ಥೆ ಬದಲಾಗಲಿ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.