ADVERTISEMENT

ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ |ಅಚ್ಚುಕಟ್ಟಾಗಿ ನಿರ್ವಹಿಸಿ: ಪ್ರಕಾಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಮೇ 2024, 15:50 IST
Last Updated 31 ಮೇ 2024, 15:50 IST
ಮೈಸೂರಿನಲ್ಲಿ ಶುಕ್ರವಾರ ಮತ ಎಣಿಕೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಮಾತನಾಡಿದರು
ಮೈಸೂರಿನಲ್ಲಿ ಶುಕ್ರವಾರ ಮತ ಎಣಿಕೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಮಾತನಾಡಿದರು   

ಮೈಸೂರು: ‘ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯವನ್ನು (ಜೂನ್‌ 6) ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕು’ ಎಂದು ಕರ್ನಾಟಕ ದಕ್ಷಿಣ ಶಿಕ್ಷಕರ, ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಸೂಚಿಸಿದರು.

ಇಲ್ಲಿ ಶುಕ್ರವಾರ ಮತ ಎಣಿಕೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಒಟ್ಟು 14, ನೈರುತ್ಯ ಶಿಕ್ಷಕರ ಕ್ಷೇತ್ರದ ಒಟ್ಟು 14 ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ಎಣಿಕೆಗೆ 14 ಮೇಜುಗಳ ವ್ಯವಸ್ಥೆ ಮಾಡಲಾಗುವುದು. ಇದು ಬ್ಯಾಲೆಟ್ ಪೇಪರ್‌ನಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಆಗಿದೆ. ಎಣಿಕೆ ವೇಳೆ ಗೊಂದಲ ಉಂಟಾದರೆ ಚುನಾವಣಾಧಿಕಾರಿ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.

ADVERTISEMENT

ಯಾವ ಮತ ಸಿಂಧು, ಯಾವುದು ಅಸಿಂಧುವಾಗುತ್ತದೆ ಎನ್ನುವುದನ್ನು ತಿಳಿಸಿದರು. ಬ್ಯಾಲೆಟ್ ಪೇಪರ್‌ಗಳನ್ನು ಯಾವ ರೀತಿ ತೆರೆಯಬೇಕು ಎಂಬುದರ ಮಾಹಿತಿ ನೀಡಿದರು.

‘ಎಣಿಕೆ ಸಿಬ್ಬಂದಿ ಅಂದು ಬೆಳಿಗ್ಗೆ 7ಕ್ಕೆ ಹಾಜರಿರಬೇಕು. ಇದು ಬಹಳ ಸುಲಭದ ಕೆಲಸವಾಗಿದ್ದು, ಮತ ಪತ್ರ ಎಣಿಕೆ ಮಾಡಬೇಕು. 25ರ ಬಂಡಲ್ ಮಾಡಿಟ್ಟುಕೊಳ್ಳಬೇಕು. ಬಳಿಕ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದರು.

ಪ್ರಾದೇಶಿಕ ಕಚೇರಿಯ ಸಹಾಯಕ ಚುನಾವಣಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ‘ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಿಯೋಜಿತ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು’ ಎಂದು ಸೂಚಿಸಿದರು.

ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.