ADVERTISEMENT

ಕಾನೂನುಬಾಹಿರ ವ್ಯವಹಾರ ಮಾಡಿದ್ದರೆ ರಾಜಕೀಯ ನಿವೃತ್ತಿ: ಮಂಜೇಗೌಡ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:21 IST
Last Updated 1 ಜುಲೈ 2024, 16:21 IST
ಸಿ.ಎನ್.ಮಂಜೇಗೌಡ
ಸಿ.ಎನ್.ಮಂಜೇಗೌಡ   

‌ಮೈಸೂರು: ‘ನಾನು ಮುಡಾದಲ್ಲಿ ಕಾನೂನುಬಾಹಿರ ವ್ಯವಹಾರ ಮಾಡಿದ್ದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸವಾಲು ಹಾಕಿದ್ದಾರೆ.

‘ಮಂಜೇಗೌಡ ಅಟೆಂಡರ್‌ ರೀತಿ ಕಡತಗಳನ್ನು ಇಟ್ಟುಕೊಂಡು ಮುಡಾ ಕಚೇರಿಯಲ್ಲಿ ಓಡಾಡುತ್ತಿರುತ್ತಾರೆ’ ಎಂಬ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಕ್ಕೆ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ‘ನಾನೊಬ್ಬ ಜನಪ್ರತಿನಿಧಿ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಜನಪ್ರತಿನಿಧಿಗಳು ನನ್ನನ್ನು ಆಯ್ಕೆ ಮಾಡಿದ್ದಾರೆ. ವಿಶ್ವನಾಥ್‌ ಅವರಂತೆ ನಾಮನಿರ್ದೇಶಿತ ಸದಸ್ಯನಲ್ಲ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯನಾಗಿ ಮೈಸೂರು ಎ.ಪಿ.ಎಂ.ಸಿ ಅಧ್ಯಕ್ಷನಾಗಿ 35 ವರ್ಷಗಳಿಂದ ಸಾರ್ವಜನಿಕ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಜನರ ಕೆಲಸ ಮಾಡುತ್ತಿದ್ದೇನೆ. ವಿಶ್ವನಾಥ್ ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದಿದ್ದಾರೆ.

ADVERTISEMENT

‘ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು, ಭಾರಿ ಅವ್ಯವಹಾರವಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಹೇಳಿದ್ದಾರೆ. ಆದರೆ, ಅವರೇ ಬೋಗಾದಿಯಲ್ಲಿ 2017ರ ಏ.27ರಂದು ಅವರದ್ದೇ ಆದ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್‌ಗೆ ಹೆಣ್ಣು ಮಕ್ಕಳ ವಸತಿ ಶಾಲೆ ಉದ್ದೇಶಕ್ಕೆ 1202 ಚ.ಮೀ. ಅಳತೆಯ ಸಿ.ಎ ನಿವೇಶನ ಪಡೆದು ನಿಗದಿತ ಉದ್ದೇಶಕ್ಕೆ ಬಳಸದೆ ರಾಜಕೀಯ ಪ್ರಭಾವ ಬೀರಿ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ’ ಎಂದು ದೂರಿದ್ದಾರೆ.

‘ಕನಕದಾಸನಗರದಲ್ಲಿ ಪಶು ಆಸ್ಪತ್ರೆಗೆ ಮೀಸಲಿಟ್ಟು ಒಂದು ಎಕರೆ ಜಾಗ (43560 ಚ.ಅ.)ವನ್ನು ಬದಲಿ ನಿವೇಶನವಾಗಿ ಪಡೆದು ಹೆಚ್ಚುವರಿ ಹಣವನ್ನು ಕಟ್ಟದೆ ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಇವರ ನಿವೇಶನವನ್ನು ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘15 ವರ್ಷಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗಿದೆ. 50:50 ಅನುಪಾತದಲ್ಲಿ ರೈತರಿಗೆ ನಿವೇಶನ ನೀಡಿಲ್ಲ. ಇದನ್ನು ದಾಖಲೆ ಸಮೇತ ಸದನದಲ್ಲಿ ಮಂಡಿಸಿ ಸರ್ಕಾರದ ಗಮನ ಸೆಳೆದು ರೈತರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ನನ್ನ ವಿರುದ್ಧ ಆರೋಪಿಸುವವರು ಸಮಯ ನಿಗದಿಪಡಿಸಿ ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.