ADVERTISEMENT

ಸಭಾಂಗಣ ತುಂಬಿ, ರಸ್ತೆಯಲ್ಲಿ ಕುಳಿತ ಜನ

ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಜನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:28 IST
Last Updated 9 ಏಪ್ರಿಲ್ 2019, 16:28 IST
ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರ ಸಂಭ್ರಮ ಹೀಗಿತ್ತು...
ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರ ಸಂಭ್ರಮ ಹೀಗಿತ್ತು...   

ಮೈಸೂರು: ನಗರದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಜನರು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಕುಳಿತು ಎಲ್‌ಇಡಿ ಪರದೆಯಲ್ಲಿ ವೀಕ್ಷಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಿದ್ದ ಎಲ್ಲ ಕುರ್ಚಿಗಳೂ ತುಂಬಿದ್ದವು. ಜತೆಗೆ, ಆವರಣದಲ್ಲಿ ಸಾವಿರಕ್ಕೂ ಅಧಿಕ ಮಂದಿ ನಿಂತು ವೀಕ್ಷಿಸುತ್ತಿದ್ದರು. ಜನಸಂದಣಿ ಅಧಿಕವಾಗಿದ್ದರಿಂದ ಜನರು ರಸ್ತೆ ವಿಭಜಕ ಮತ್ತು ರಸ್ತೆ ಬದಿಗಳಲ್ಲಿ ಕುಳಿತರು.

ಸುಮಾರು 45ರಿಂದ 50 ಸಾವಿರದಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ರಸ್ತೆಯುದ್ದಕ್ಕೂ ‘ಮತ್ತೆ ಮೋದಿ’ ಎಂಬ ಘೋಷಣೆಗಳನ್ನು ಮೊಳಗಿಸಿದರು.

ADVERTISEMENT

ಬಿಜೆಪಿ ಧ್ವಜಗಳು ಎಲ್ಲೆಂದರಲ್ಲಿ ಹಾರಾಡಿದವು. ಧ್ವಜವನ್ನು ಬೀಸುತ್ತಾ ಟ್ರಾಕ್ಟರ್‌ನಲ್ಲಿ ವ್ಯಕ್ತಿಯೊಬ್ಬ ಸುತ್ತುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾದರು.

ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದ ಜನರು ಪರದಾಡುವಂತಾಯಿತು. ಪರ್ಯಾಯ ಮಾರ್ಗಗಳಲ್ಲಿ ವಿಳಾಸ ಕೇಳುತ್ತ ಜನರು ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಶೇಷವಾಗಿ ನಂಜನಗೂಡು ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇಲ್ಲಿನ ಪರ್ಯಾಯ ಮಾರ್ಗಗಳು ತೀರಾ ಚಿಕ್ಕದಾಗಿದ್ದರಿಂದ ಸಾಗುವುದಕ್ಕೆ ಅನನುಕೂಲವಾಯಿತು. ಜತೆಗೆ, ತಡವೂ ಆಯಿತು.

ನೀರಿನ ಪ್ಲಾಸ್ಟಿಕ್‌ ಕವರ್‌ಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಮೋದಿ ಚಿತ್ರದ ಕಟೌಟ್‌ ಇದ್ದ ವಾಹನದ ಮುಂದೆ ಸೆಲ್ಫೀ ತೆಗೆದುಕೊಳ್ಳಲು ಜನರು ಮುಗಿಬಿದ್ದರು.

ಜಯರುದ್ರಸ್ವಾಮಿ ಎಂಬುವವರು ಯುವಕನೊಬ್ಬ ಮಾರಾಟ ಮಾಡುತ್ತಿದ್ದ ‘ನಮೋ ಮತ್ತೊಮ್ಮೆ’ ಎಂಬ ಪುಸ್ತಕದ ಎಲ್ಲ 86 ಪ್ರತಿಗಳನ್ನು ಖರೀದಿಸಿ ಉಚಿತವಾಗಿ ಹಂಚಿದರು.

ಜನರಿಗೆ ಶೌಚಾಲಯದ ಸಮಸ್ಯೆ ಹೆಚ್ಚಾಗಿ ಕಾಡಿತು. ರಸ್ತೆಯ ಇಕ್ಕೆಲಗಳಲ್ಲಿ ಪುರುಷರು ಮೂತ್ರ ವಿಸರ್ಜಿಸುತ್ತಿದ್ದುದ್ದರಿಂದ ಮಹಿಳೆಯರು ಓಡಾಡಲು ಮುಜುಗರಪಡುವಂತಾಯಿತು. ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ಪರದಾಡಿದರು.

ಅರ್ಧಗಂಟೆ ಮೊದಲೇ ವಾಹನ ಸಂಚಾರ ಶೂನ್ಯ!

ಸಾಮಾನ್ಯವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ವಿಮಾನವು ನಿಲ್ದಾಣಕ್ಕೆ ಬರುತ್ತಿದ್ದಂತೆ ವಾಹನ ಸಂಚಾರವನ್ನು ಅವರು ಹೋಗುವ ಮಾರ್ಗದಲ್ಲಿ ನಿಷೇಧಿಸಲಾಗುತ್ತಿತ್ತು. ಆದರೆ, ಈ ಬಾರಿ ಅರ್ಧಗಂಟೆ ಮೊದಲೇ ಶೂನ್ಯ ವಾಹನ ಸಂಚಾರ ಮಾಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ‘ಸಂಚಾರ ಹೆಚ್ಚಿದ್ದರಿಂದ ಈ ರೀತಿಯ ಕ್ರಮ ಅನಿವಾರ್ಯವಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.