ADVERTISEMENT

ಪ್ರಧಾನಿ ಮೋದಿ ಮಾತನ್ನು ಪಾಲಿಸದ ಮೋಹನ್‌ ಭಾಗವತ್‌: ದಿನೇಶ್‌ ಅಮಿನ್‌ಮಟ್ಟು

‘ಆರ್‌ಎಸ್‌ಎಸ್‌, ಮೋಹನ್‌ ಭಾಗವತ್‌ ಟ್ವಿಟರ್‌ ಡಿಪಿಯಲ್ಲಿಲ್ಲ ಹರ್‌ ಘರ್‌ ತಿರಂಗ ಚಿತ್ರ’

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 12:25 IST
Last Updated 10 ಆಗಸ್ಟ್ 2022, 12:25 IST
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನ– ಒಂದು ಸಂವಾದ’ ಕಾರ್ಯಕ್ರಮವನ್ನು ಎಚ್‌.ಎನ್‌. ನಾಗಮೋಹನ ದಾಸ್‌ ಉದ್ಘಾಟಿಸಿದರು. ಕೆ.ಎನ್‌. ಶಿವಲಿಂಗಯ್ಯ, ಬೆಟ್ಟಯ್ಯಕೋಟೆ, ದಿನೇಶ್‌ ಅಮಿನ್‌ಮಟ್ಟು,  ನಟರಾಜ್‌ ಶಿವಣ್ಣ ಇದ್ದರು
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನ– ಒಂದು ಸಂವಾದ’ ಕಾರ್ಯಕ್ರಮವನ್ನು ಎಚ್‌.ಎನ್‌. ನಾಗಮೋಹನ ದಾಸ್‌ ಉದ್ಘಾಟಿಸಿದರು. ಕೆ.ಎನ್‌. ಶಿವಲಿಂಗಯ್ಯ, ಬೆಟ್ಟಯ್ಯಕೋಟೆ, ದಿನೇಶ್‌ ಅಮಿನ್‌ಮಟ್ಟು,  ನಟರಾಜ್‌ ಶಿವಣ್ಣ ಇದ್ದರು   

ಮೈಸೂರು: ‘ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಖಾತೆಗಳ ಡಿಪಿಗಳಲ್ಲಿ ಹರ್‌ ಘರ್‌ ತಿರಂಗ ಚಿತ್ರ ಹಾಕುವಂತೆ ಪ್ರಧಾನಿ ಮೋದಿ ನೀಡಿರುವ ಕರೆಯನ್ನು ಆರ್‌ಎಸ್‌ಎಸ್‌ ಹಾಗೂ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರೇ ಪಾಲಿಸಿಲ್ಲ. ತಮ್ಮ ಟ್ವಿಟರ್‌ ಖಾತೆಯ ಡಿಪಿಯಲ್ಲಿ ರಾಷ್ಟ್ರಧ್ವಜದ ಚಿತ್ರಗಳನ್ನು ಹಾಕಿಲ್ಲ’ ಎಂದು ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಟೀಕಿಸಿದರು.

ದಲಿತ ಸಂಘರ್ಷ ಸಮಿತಿ ಒಕ್ಕೂಟದ ಮೈಸೂರು ಜಿಲ್ಲಾ ಘಟಕ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನ– ಒಂದು ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಹತ್ತಿ, ರೇಷ್ಮೆ ಬಟ್ಟೆ ಬಳಸಿ ನಿರ್ದಿಷ್ಟ ಮಾನದಂಡ ಅನುಸರಿಸಿ ತಯಾರಿಸುತ್ತಿದ್ದ ರಾಷ್ಟ್ರಧ್ವಜವನ್ನು ಈಗ ಫ್ಲೆಕ್ಸ್‌ ರೀತಿ ಮುದ್ರಿಸಿ ಅದರ ಗೌರವವನ್ನು ಹಾಳು ಮಾಡುತ್ತಿದ್ದಾರೆ’ ಎಂದು ದೂರಿದರು.

‘ನಾಗಪುರದಲ್ಲಿರುವ ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿಯಲ್ಲಿ 52 ವರ್ಷ ರಾಷ್ಟ್ರಧ್ವಜವನ್ನು ಆರೋಹಣ ಮಾಡಿರಲಿಲ್ಲ. 2001ರಲ್ಲಿ ಮೂವರು ಯುವಕರು ಹೆಡಗೇವಾರ್‌ ಜನ್ಮದಿನಾಚರಣೆ ವೇಳೆ ರಾಷ್ಟ್ರಧ್ವಜಾರೋಹಣ ಮಾಡಿದ್ದಕ್ಕಾಗಿ ಅವರನ್ನು 12 ವರ್ಷ ಜೈಲಿಗೆ ಹಾಕಲಾಗಿತ್ತು. ಬಳಿಕ ನೆಪಮಾತ್ರಕ್ಕೆ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. 2002ಕ್ಕೆ ಎನ್‌ಡಿಎ ಸರ್ಕಾರದ ಅವಧಿಯಲ್ಲೂ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿಲ್ಲ. ಇಂದು ರಾಷ್ಟ್ರಧ್ವಜವನ್ನು ದೊಡ್ಡ ಚಳವಳಿ ರೀತಿ ಬಿಂಬಿಸಲಾಗುತ್ತಿದೆ. ರಾಷ್ಟ್ರಧ್ವಜದ ಗೌರವಕ್ಕೆ ಮಸಿ ಬಳಿಯುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಮೋದಿ ಒಳ್ಳೆಯ ಕಾರ್ಯಕ್ರಮದ ಆಯೋಜಕ (ಈವೆಂಟ್‌ ಮ್ಯಾನೇಜರ್‌) ಎಂದು ಎಲ್‌.ಕೆ.ಅಡ್ವಾಣಿ ಹೇಳಿದ್ದರು. ಅವರು ಈಗ ಈವೆಂಟ್‌ ರೀತಿಯಲ್ಲಿ ರಾಷ್ಟ್ರಧ್ವಜವನ್ನು ಬಿಂಬಿಸುತ್ತಿದ್ದಾರೆ’ ಎಂದು ದೂರಿದರು.

‘ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರಿಗೆ ತಾಕತ್ತು ಇದ್ದರೆ, ಮುಂದಿನ ಚುನಾವಣೆಯಲ್ಲಿ ಹೆಡಗೇವಾರ್‌, ಗೋಲ್ವಾಲ್ಕರ್‌, ಸಾವರ್ಕರ್‌ ಅವರ ಭಾವಚಿತ್ರವನ್ನು ಇಟ್ಟುಕೊಂಡು ಮತ ಕೇಳಲಿ. ಇವರ ಚಿತ್ರವನ್ನು ಮುದ್ರಿಸಿ ಪ್ರಚಾರ ಮಾಡಿದರೆ ಮತ ಬೀಳುವುದಿಲ್ಲ ಎಂಬುದು ಆರ್‌ಎಸ್‌ಎಸ್‌ನವರಿಗೂ ಗೊತ್ತಿದೆ. ನಮ್ಮಲ್ಲಿ ಬುದ್ಧಿಜೀವಿಗಳು ಇಲ್ಲ ಎಂಬ ಕೊರಗು ಆರ್‌ಎಸ್‌ಎಸ್‌ನವರಿಗೆ ಇದೆ. ರೋಹಿತ್‌ ಚಕ್ರತೀರ್ಥ, ಚಕ್ರವರ್ತಿ ಸೂಲಿಬೆಲೆಯಂತಹ ಕ್ರಿಮಿಕೀಟಗಳು, ಸಗಣಿ ಹುಳಗಳು ಆಗಾಗ ಸದ್ದು ಮಾಡುತ್ತವೆ. ಎಸ್‌.ಎಲ್‌.ಭೈರಪ್ಪ, ದೊಡ್ಡರಂಗೇಗೌಡ ಅವರನ್ನು ಬಿಟ್ಟರೆ ಯಾರೂ ಇಲ್ಲ. ನಾನು ಬಲಪಂಥೀಯ ಚಿಂತಕ ಎಂದು ಹೇಳಿಕೊಳ್ಳಲು ಆರ್‌ಎಸ್‌ಎಸ್‌ನವರಿಗೇ ಭಯ, ಕೀಳರಿಮೆ’ ಎಂದು ಹೇಳಿದರು.

‘ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದಾಗಿ ಆರ್‌ಎಸ್‌ಎಸ್‌ನವರು ಹೇಳುತ್ತಿದ್ದಾರೆ. ಮುಸ್ಲಿಮರನ್ನು ಎದುರಿಗೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಮುಸ್ಲಿಮರು ಹಿಂದೂಗಳ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ. ಹೀಗಾಗಿ, ಹಿಜಾಬ್‌, ಹಲಾಲ್‌, ವ್ಯಾಪಾರ ನಿರಾಕರಣೆಯಂತಹ ಘಟನೆಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಸಂಸತ್‌ ಅನ್ನು ಹೊರಗುತ್ತಿಗೆ ನೀಡಲಾಗಿದೆ. ಅಂಬಾನಿ, ಅದಾನಿಯವರಿಗೆ ಬೇಕಾದಂತಹ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಏರ್‌ ಇಂಡಿಯಾ ಬಲವರ್ಧನೆಗೆಂದು ಅನುದಾನ ನೀಡಿದ ಬಳಿಕ ಅದನ್ನು ಮಾರಾಟ ಮಾಡಲಾಯಿತು. ಬಿಎಸ್‌ಎನ್‌ಎಲ್‌ ಸಂಸ್ಥೆ ಬಲವರ್ಧನೆಗೆಂದು ಅನುದಾನ ನೀಡಿದ್ದಾರೆ. ಈ ಸಂಸ್ಥೆಯನ್ನೂ ಮಾರಾಟ ಮಾಡುತ್ತಾರೆ. ಸಂವಿಧಾನವನ್ನು ದುರ್ಬಲಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಾಹಿತಿಗಳು ಪಾಂಡಿತ್ಯ ಪ್ರದರ್ಶನ ಮಾಡುತ್ತಾರೆ. ಬೃಹತ್‌ ಗ್ರಂಥಗಳನ್ನು ರಚಿಸುತ್ತಾರೆ. ನನಗೇನು ತಿಳಿದಿದೆಯೋ ಅದನ್ನು ಬರೆಯುವುದು ಮುಖ್ಯವಲ್ಲ. ಜನರಿಗೇನು ಬೇಕೋ ಅದನ್ನು ಬರೆಯಬೇಕು. ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ದೇವನೂರ ಮಹಾದೇವ ಅವರು ಬರೆಯುವ ಪುಸ್ತಕವೇ ಅಲ್ಲ. ಅವರು ಇನ್ನೊಂದು ಕಾದಂಬರಿ, ಕಥಾಸಂಕಲನವೋ ಬರೆದಿದ್ದರೆ ನೊಬೆಲ್‌ ಬರುತ್ತಿತ್ತೋ ಏನೊ. ಅವರು ಸಾಮಾನ್ಯ ಜನರನ್ನು ಮುಟ್ಟಬೇಕು, ಬಡಿದೆಬ್ಬಿಸಬೇಕು, ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಬರೆಯುತ್ತಾರೆ. ಹೀಗಾಗಿ, ಈ ಕೃತಿಗೆ ವ್ಯಾಪಕವಾಗಿ ಬೇಡಿಕೆ ಸೃಷ್ಟಿಯಾಗಿದೆ’ ಎಂದರು.

‘ಅಪ್ರಜಾಪ್ರಭುತ್ವ ಕಾಯ್ದೆಗಳ ಪರ್ವ’

ಕಾರ್ಯಕ್ರಮ ಉದ್ಘಾಟಿಸಿದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಮಾತನಾಡಿ, ‘ದೇಶದಲ್ಲಿ ಅಪ್ರಜಾಪ್ರಭುತ್ವದ ಕಾಯ್ದೆಗಳ ಪರ್ವ ಆರಂಭವಾಗಿದೆ. ಕೃಷಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಶೇ 48ರಷ್ಟು ಬಿಲ್‌ಗಳನ್ನು ಚರ್ಚೆ ಮಾಡದೆ ಅನುಮೋದನೆ ನೀಡಲಾಗಿದೆ’ ಎಂದು ದೂರಿದರು.

‘ಕಾರ್ಯಾಂಗದಲ್ಲಿ ಶೇ 80ರಷ್ಟು ಮಂದಿ ತಮ್ಮನ್ನು ಮಾರಿಕೊಂಡಿದ್ದಾರೆ. ನ್ಯಾಯಾಂಗದ ಮೇಲೂ ಪ್ರಭಾವ ಬೀರಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳು ನೋವು ಉಂಟುಮಾಡುತ್ತಿವೆ. ಜನಪ್ರತಿನಿಧಿಗಳು ಬಟ್ಟೆ ಬದಲಿಸಿದಂತೆ ಪಕ್ಷಗಳನ್ನು ಬದಲಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್‌ಗೆ ಅವಕಾಶ ಸಿಕ್ಕಿತ್ತು. ಅದನ್ನು ಬಳಸಿಕೊಳ್ಳಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರವನ್ನು ಟೀಕೆ, ವಿಮರ್ಶೆ ಮಾಡಿದರೆ ಜೈಲಿಗೆ ಹಾಕಲಾಗುತ್ತಿದೆ. ಧರಣಿಯಲ್ಲಿ ಭಾಗವಹಿಸಿದ ಕಾರಣಕ್ಕೆ ವ್ಯಕ್ತಿಯ ಮನೆಯನ್ನು ಉರುಳಿಸುತ್ತಾರೆ. ರಾಜ್ಯದಲ್ಲೂ ಉತ್ತರ ಪ್ರದೇಶದ ಮಾದರಿ ಅನುಸರಿಸುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಹೇಳಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ಕಾನೂನಿಗೆ ವಿರುದ್ಧವಾದ ಧೋರಣೆ ಕೈಗೊಳ್ಳುವ ವ್ಯಕ್ತಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ’ ಎಂದು ದೂರಿದರು.

‘ಧರ್ಮ ಅಪ್ರಜಾಪ್ರಭುತ್ವಗೊಂಡಾಗ, ಧರ್ಮ ರಾಜಕಾರಣದ ಜತೆ ಬೆರೆತಾಗ ಕೋಮುವಾದವಾಗುತ್ತದೆ. ಶಾಲೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದನ್ನು ಜನಕಲ್ಯಾಣ, ವಿಜ್ಞಾನ ತೀರ್ಮಾನ ಮಾಡಬೇಕು. ಮೊಟ್ಟೆಯನ್ನೂ ಕಸಿದುಕೊಳ್ಳುವ ಧರ್ಮ ರಾಜಕಾರಣದಲ್ಲಿ ಬೆರೆಯುತ್ತಿದೆ. ಇಷ್ಟ ಇಲ್ಲದಿರುವವರು ಬಾಳೆಹಣ್ಣು ಅಥವಾ ಬೇರೆ ಏನಾದರೂ ತಿನ್ನಲಿ. ತಿನ್ನುವ ತಟ್ಟೆಯಿಂದ ಮೊಟ್ಟೆಯನ್ನು ಕಿತ್ತುಕೊಳ್ಳುವ ಧಾರ್ಮಿಕ ಫರ್ಮಾನುಗಳಿಗೆ ಸರ್ಕಾರ ಶರಣಾಗಿದೆ’ ಎಂದು ಹೇಳಿದರು.

‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯ ಸಮಿತಿ ಸಂಚಾಲಕ ಕೆ.ಎನ್‌. ಶಿವಲಿಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ್‌ ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.