ADVERTISEMENT

ಸಾಲು ರಜೆ: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರ ಲಗ್ಗೆ

ಅರಮನೆ, ಮೃಗಾಲಯ, ವಸ್ತುಪ್ರದರ್ಶನ ಮೈದಾನದಲ್ಲಿ ಜನಜಂಗುಳಿ

ಆರ್.ಜಿತೇಂದ್ರ
Published 4 ನವೆಂಬರ್ 2024, 6:51 IST
Last Updated 4 ನವೆಂಬರ್ 2024, 6:51 IST
<div class="paragraphs"><p>ಮೈಸೂರು ಅರಮನೆಗೆ ಭಾನುವಾರ ಭೇಟಿ ನೀಡಿದ ಪ್ರವಾಸಿಗರು&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; </p></div>

ಮೈಸೂರು ಅರಮನೆಗೆ ಭಾನುವಾರ ಭೇಟಿ ನೀಡಿದ ಪ್ರವಾಸಿಗರು                     

   

ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜು

ಮೈಸೂರು: ಶುಕ್ರವಾರದಿಂದ ಭಾನುವಾರದವರೆಗೆ ಸಾಲು ರಜೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಮತ್ತೊಮ್ಮೆ ದಸರೆ ನೆನಪಿಸುವಂತೆ ಇತ್ತು.

ADVERTISEMENT

ವಿಶ್ವವಿಖ್ಯಾತ ಮೈಸೂರು ಅರಮನೆ, ಮೃಗಾಲಯ, ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಮೂರು ದಿನದಂದು ಜನಜಾತ್ರೆ ನೆರೆದಿತ್ತು. ಅರಮನೆಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಪಾರಂಪರಿಕ ಹಾಗೂ ವಾಸ್ತುಶಿಲ್ಪ ಶ್ರೇಷ್ಠತೆಯ ಸೌಧದ ಅಂದವನ್ನು ಕಣ್ತುಂಬಿಕೊಂಡರು. ರಾಜ್ಯೋತ್ಸವ ಹಾಗೂ ದೀಪಾವಳಿಯ ಹಿನ್ನೆಲೆಯಲ್ಲಿ ಶುಕ್ರವಾರ, ಶನಿವಾರ ಸಂಜೆ ಅರಮನೆಯು ವಿದ್ಯುತ್‌ ದೀಪಗಳಿಂದ ಕಂಗೊಳಿಸಿದ್ದು, ಕತ್ತಲಲ್ಲೂ ಪ್ರವಾಸಿಗರನ್ನು ಆಕರ್ಷಿಸಿತು. ಭಾನುವಾರ ಸಂಜೆ ಎಂದಿನಂತೆ ದೀಪಾಲಂಕಾರವಿತ್ತು.

ಅರಮನೆ ಸುತ್ತಮುತ್ತ, ದೊಡ್ಡಕೆರೆ ಮೈದಾನ ಪೂರ್ತಿ ವಾಹನಗಳ ನಿಲುಗಡೆಯಾಗಿದ್ದು, ಪ್ರವಾಸಿಗರು ಸ್ಥಳ ಸಿಗದೇ ಪರದಾಡಿದರು. ಸಂಜೆ ಹೊತ್ತು ರಸ್ತೆಗಳ ಅಕ್ಕಪಕ್ಕವೇ ಸಾಲಾಗಿ ವಾಹನಗಳು ನಿಂತಿದ್ದು, ಕೆ.ಆರ್. ವೃತ್ತ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆಯಿಂದಾಗಿ ಜನರು ಪರದಾಡುವಂತಾಯಿತು.

ಆಕರ್ಷಕ ವಿದ್ಯುತ್‌ ದೀಪಾಲಂಕಾರ, ಮಳಿಗೆಗಳ ಕಾರಣಕ್ಕೆ ಈ ಬಾರಿಯ ವಸ್ತುಪ್ರದರ್ಶನ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ವಾರಾಂತ್ಯದಲ್ಲಿ ನೋಡುಗರ ಸಂಖ್ಯೆ ಇನ್ನಷ್ಟು ಹೆಚ್ಚಿದ್ದು, ಉತ್ತಮ ವಹಿವಾಟು ನಡೆಯುತ್ತಿದೆ. ಮಳೆಯ ನಡುವೆಯೂ ಹೆಚ್ಚೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ. ಈ ಮೂರು ದಿನವೂ ಇಲ್ಲಿ ಕಾಲಿಡಲು ಜಾಗವಿಲ್ಲದಂತ ಪರಿಸ್ಥಿತಿ ಇತ್ತು.

‘ಸಾಮಾನ್ಯ ದಿನದಲ್ಲಿ ವಸ್ತುಪ್ರದರ್ಶನ ವೀಕ್ಷಣೆಗೆ ಸರಾಸರಿ 7–8 ಸಾವಿರ ಜನರು ಬಂದರೆ, ಕಳೆದ ಮೂರು ದಿನವೂ ಈ ಸಂಖ್ಯೆ 30 ಸಾವಿರ ದಾಟಿದೆ. ಅದಕ್ಕೆ ತಕ್ಕಂತೆ ಸೌಲಭ್ಯಗಳು ಇದ್ದು, ಯಾವುದೇ ತೊಂದರೆ ಆಗದಂತೆ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೃಗಾಲಯಕ್ಕೂ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದು, ವನ್ಯಜೀವಿಗಳ ಅಂದಕ್ಕೆ ಮನಸೋತರು. ಇಲ್ಲಿನ ಸಾಲುಮರಗಳ ನೆರಳು ಪ್ರವಾಸಿಗರಿಗೆ ಹೆಚ್ಚು ಆಯಾಸ ಆಗದಂತೆ ಕಾಪಾಡಿತು.

ಬಸ್‌–ರೈಲಿನಲ್ಲಿ ಕಿಕ್ಕಿರಿದ ಪ್ರಯಾಣಿಕರು

ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ನಗರದ ಬಸ್ ಹಾಗೂ ರೈಲು ನಿಲ್ದಾಣದಲ್ಲಿ ಭಾನುವಾರ ಸಾವಿರಾರು ಪ್ರಯಾಣಿಕರು ಕಿಕ್ಕಿರಿದು ನೆರೆದಿದ್ದು ಇಲ್ಲಿಂದ ತೆರಳಲು ಪ್ರಯಾಸಪಟ್ಟರು. ರಜೆಯ ಮಜಾ ಅನುಭವಿಸಲು ಮೈಸೂರಿಗೆ ಬಂದವರನ್ನು ವಾಪಸ್‌ ರಾಜಧಾನಿ ಬೆಂಗಳೂರಿನತ್ತ ಕರೆದೊಯ್ಯಲು ಕೆಎಸ್‌ಆರ್‌ಟಿಸಿ 250ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಮಹದೇಶ್ವರ ಬೆಟ್ಟ ಹಾಸನ ಕೊಡಗು ಮಾರ್ಗದ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದು ಜನರು ಬಸ್ ಏರಲು ಪೈ‍ಪೋಟಿ ನಡೆಸಿದರು. ರೈಲುಗಳಲ್ಲೂ ಸಾಕಷ್ಟು ಪ್ರಯಾಣಿಕರು ತುಂಬಿದ್ದು ಬೆಂಗಳೂರು ಕಡೆಗೆ ತೆರಳುವ ಬಹುತೇಕ ರೈಲುಗಳು ಭರ್ತಿ ಆಗಿದ್ದವು. ಜನರು ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ಇತ್ತು. ಈ ಬಾರಿ ದಸರೆ ಸಂದರ್ಭ ಮೈಸೂರಿಗೆ 1 ದಶಲಕ್ಷ ಪ್ರಯಾಣಿಕರು ರೈಲಿನ ಮೂಲಕ ಬಂದಿಳಿದಿದ್ದು ದಾಖಲೆಯಾಗಿದೆ.

ರಜೆ ದಿನದಲ್ಲಿ ವಸ್ತುಪ್ರದರ್ಶನಕ್ಕೆ ನಿತ್ಯ 30 ಸಾವಿರಕ್ಕೂ ಅಧಿಕ ಮಂದಿ ಬರುತ್ತಿದ್ದಾರೆ. ಈ ಬಾರಿ ಮಳಿಗೆಗಳು ಹಾಗೂ ದೀಪಾಲಂಕಾರ ಹೆಚ್ಚು ಆಕರ್ಷಕವಾಗಿದ್ದು ಜನರನ್ನು ಸೆಳೆದಿದೆ
-ರುದ್ರೇಶ್‌, ಸಿಇಒ ವಸ್ತುಪ್ರದರ್ಶನ ಪ್ರಾಧಿಕಾರ
ದೀಪಾವಳಿ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮೈಸೂರು ಘಟಕವು 250ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದ್ದು ಎಲ್ಲ ಮಾರ್ಗಗಳಲ್ಲೂ ಪ್ರಯಾಣಿಕರ ದಟ್ಟಣೆ ಇದೆ
-ದಿನೇಶ್‌, ಕೆಎಸ್‌ಆರ್‌ಟಿಸಿ ಅಧಿಕಾರಿ
ಮಕ್ಕಳಿಗೆ ರಜೆ ಇದ್ದ ಕಾರಣಕ್ಕೆ ಅರಮನೆ ನೋಡಲು ಬೆಂಗಳೂರಿನಿಂದ ಬಂದಿದ್ದೆವು. ಆದರೆ ಜನಸಂದಣಿ ಹೆಚ್ಚಿದ್ದ ಕಾರಣಕ್ಕೆ ಸರಿಯಾಗಿ ನೋಡಲಾಗಲಿಲ್ಲ. ಮತ್ತೊಮ್ಮೆ ಬರುತ್ತೇವೆ
-ಸುಮನಾ, ಬೆಂಗಳೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.