ADVERTISEMENT

ಬೆಂಗಳೂರು–ಮೈಸೂರು ನಡುವಣ ರೈಲುಗಳ ವೇಗ ಹೆಚ್ಚಿಸಲು ಸಂಸದ ಪ್ರತಾಪ್ ಸಿಂಹ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 13:12 IST
Last Updated 4 ಅಕ್ಟೋಬರ್ 2023, 13:12 IST
   

ಮೈಸೂರು: ‘ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ರೈಲುಗಳ ವೇಗವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ರೈಲ್ವೆ ಅಧಿಕಾರಿಗಳೊಂದಿಗೆ ಇಲ್ಲಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಬುಧವಾರ ನಡೆದ ಸಭೆಯ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಈಗ ಸಂಚರಿಸುತ್ತಿರುವ ರೈಲುಗಳು ಬೆಂಗಳೂರು ತಲುಪುವುದು ವಿಳಂಬವಾಗುತ್ತಿದೆ. ಹಳಿ ನಿರ್ವಹಣೆ, ದುರಸ್ತಿ ಮೊದಲಾದ ಕಾರಣದಿಂದ ಎರಡು ತಿಂಗಳಿಂದೀಚೆಗೆ ಈ ಸಮಸ್ಯೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಕೆಲವು ರೈಲುಗಳನ್ನು ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಆಗಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ’ ಎಂದರು.

ADVERTISEMENT

‘ಕಾವೇರಿ ಎಕ್ಸ್‌ಪ್ರೆಸ್, ಚೆನ್ನೈ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಕಾಚಿಗುಡ, ಹಂಪಿ ಎಕ್ಸ್‌ಪ್ರೆಸ್, ಗೋಲ್‌ಗುಂಬಜ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್ ಮಾಡಬೇಕು. ಚೆನ್ನೈ ಇಂಟರ್‌ಸಿಟಿ, ವಿಶ್ವಮಾನವ, ತಾಳಗುಪ್ಪ, ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್‌ ಹಾಗೂ ತಿರುಪತಿ ರೈಲುಗಳ ವೇಗವನ್ನು ಹೆಚ್ಚಿಸಬೇಕು. ಪ್ರಯಾಣದ ಅವಧಿಯನ್ನು ತಗ್ಗಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಅಶೋಕಪುರಂ ರೈಲು ನಿಲ್ದಾಣದಿಂದ:

‘ಎಲ್ಲ ಪ್ಯಾಸೆಂಜರ್‌ (ಮೆಮು) ರೈಲುಗಳು (ನಾಲ್ಕು) ಮೈಸೂರು ಕೇಂದ್ರ ರೈಲು ನಿಲ್ದಾಣದ ಬದಲಿಗೆ ಉನ್ನತೀಕರಿಸಿದ ಅಶೋಕಪುರಂ ರೈಲು ನಿಲ್ದಾಣದಿಂದ ಹೊರಡುವಂತೆ ಮಾಡಬೇಕು. ದಸರಾ ಸಂದರ್ಭದಲ್ಲಿ ಈ ನಿಲ್ದಾಣದ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಮೈಸೂರು–ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದೇ ತಿಂಗಳಲ್ಲಿ ಅಂತಿಮ ಸ್ಥಳ ಸಮೀಕ್ಷಾ ವರದಿಯನ್ನು ಸಲ್ಲಿಸಲಾಗುವುದು. ಅದು ರೈಲ್ವೆ ಮಂಡಳಿಗೆ ಹೋಗಲಿದೆ. ನಂತರ ರಾಜ್ಯ ಸರ್ಕಾರ ಸಹಕಾರ ಕೊಡಬೇಕಾಗುತ್ತದೆ. ಬಳಿಕ ನಾವು ಕೆಲಸ ಕೈಗೆತ್ತಿಕೊಳ್ಳಲಿದ್ದೇವೆ. ಇದು ಈಗಾಗಲೇ ಮಂಜೂರಾಗಿರುವ ಯೋಜನೆಯಾಗಿದೆ’ ಎಂದು ಹೇಳಿದರು.

‘ಮೈಸೂರು ರೈಲು ನಿಲ್ದಾಣವನ್ನು ₹ 356 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ‍ಪಡಿಸಲಾಗುವುದು. ಹೊಸದಾಗಿ ಮೂರು ಅಂಕಣಗಳು ಸೇರಿದಂತೆ ವಿವಿಧ ಕೆಲಸಗಳು ನಡೆಯಲಿವೆ. ಡಿಸೆಂಬರ್‌ ವೇಳೆಗೆ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿದೆ. 3ನೇ ಪ್ರವೇಶ ದ್ವಾರ ನಿರ್ಮಾಣ ಯೋಜನೆಯು ವಿನ್ಯಾಸದ ಹಂತದಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಅಶೋಕಪುರಂ ರೈಲು ನಿಲ್ದಾಣದಲ್ಲಿ ಮತ್ತೊಂದು ಅಂಕಣ ನಿರ್ಮಿಸುವಂತೆ ಸೂಚಿಸಲಾಗಿದೆ’ ಎಂದರು.

‘ಮೈಸೂರು ಮತ್ತೊಂದು ಬೆಂಗಳೂರಿನಂತೆ ಆಗಬಾರದೆಂಬ ದೂರದೃಷ್ಟಿಯಿಂದ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಅಶೋಕಪುರಂ ರೈಲು ನಿಲ್ದಾಣ ಉನ್ನತೀಕರಿಸಲಾಗಿದೆ. ಚಾಮರಾಜನಗರ ನಿಲ್ದಾಣವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ರೈಲ್ವೆ ಅಭಿವೃದ್ಧಿ ವಿಷಯದಲ್ಲಿ ಮೈಸೂರು ಹಾಗೂ ಚಾಮರಾಜನಗರವನ್ನು ಅವಳಿ ನಗರಗಳಾಗಿ ನೋಡಿಯೇ ಕ್ರಮ ವಹಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಯಾವುದೇ ಯೋಜನೆಗಳಿದ್ದರೂ ನಮ್ಮ ಸರ್ಕಾರದಲ್ಲಿ ಬಜೆಟ್‌ ಸಂದರ್ಭವನ್ನೇ ಕಾಯಬೇಕಾಗಿಲ್ಲ. ಈಗಿನಿಂದಲೇ ಸಲ್ಲಿಸುವಂತೆ ಸೂಚಿಸಿದ್ದೇನೆ. ಅನುಮೋದನೆ ಕೊಡಿಸುವ ಕೆಲಸವನ್ನು ನಾನು ಮಾಡುತ್ತೇವೆ’ ಎಂದರು.

‘ಮೈಸೂರು ರೈಲು ನಿಲ್ದಾಣದಲ್ಲೇ 65 ಎಕರೆ ಜಾಗ ಲಭ್ಯವಿದ್ದು, ಅದನ್ನು ಬಳಸಿಕೊಂಡು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದರು.

ಮುಖ್ಯ ವ್ಯವಸ್ಥಾಪಕ ವಿಷ್ಣು ಭೂಷಣ್, ಹಿರಿಯ ವಿಭಾಗೀಯ ಆಪರೇಟಿಂಗ್ ಮ್ಯಾನೇಜರ್ ಅಂಕಿತಾ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.