ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಗೆ ‘ಕಾವೇರಿ’ ಹೆಸರು ಸೂಕ್ತ: ಪ್ರತಾಪ ಸಿಂಹ

ಮುಖ್ಯಮಂತ್ರಿಗೂ ಮನವಿ ಸಲ್ಲಿಸುವೆ ಎಂದ ಸಂಸದ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 12:30 IST
Last Updated 6 ಜನವರಿ 2023, 12:30 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಕಾವೇರಿ ಹೆಸರಿಡುವುದು ಸೂಕ್ತ. ನದಿಗಳಿಂದಲೇ ಜೀವಸಂಕುಲ ಉಳಿದಿದೆ ಎಂಬ ಕಾರಣದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಎದುರು ಪ್ರತಿಪಾದಿಸಿದ್ದೇನೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ನಾಯಕ ಎಸ್‌.ಎಂ.ಕೃಷ್ಣ ಸೇರಿದಂತೆ ಕೆಲವರು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ಕೇಳಿದ್ದಾರೆ. ಕೆಲವರು, ಎಚ್.ಡಿ.ದೇವೇಗೌಡರ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ, ಹೆದ್ದಾರಿಗಳಿಗೆ ವ್ಯಕ್ತಿಗಳ ಹೆಸರಿಡುವ ಪದ್ಧತಿ ಇಲ್ಲ’ ಎಂದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ವಿಮಾನನಿಲ್ದಾಣಕ್ಕೆ ಇಡಲು ಕ್ರಮ ವಹಿಸಿದ್ದೇನೆ. ಜೀವನದಿ ಕಾವೇರಿ ಬಗ್ಗೆ ಈ ಭಾಗದ ಜನರಲ್ಲಿ ಗೌರವವಿದೆ. ಆ ನದಿ ಇಲ್ಲದಿದ್ದರೆ ಇಲ್ಲಿ ಅಭಿವೃದ್ಧಿ ಆಗುತ್ತಿತ್ತೇ? ಈ ವಿಷಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿಯಾಗಿ ಚರ್ಚಿಸಲಿದ್ದೇನೆ. ಕಾವೇರಿ ಹೆಸರಿಡುವಂತೆ ಒಮ್ಮತದಿಂದ ಕೇಂದ್ರ ಸರ್ಕಾರವನ್ನು ಕೋರೋಣ ಎಂದು ಎಸ್.ಎಂ.ಕೃಷ್ಣ ಅವರಲ್ಲೂ ಮನವಿ ಮಾಡುತ್ತೇನೆ’ ಎಂದರು.

ADVERTISEMENT

‘ದೇಶದಲ್ಲಿ ಹಲವು ಎಕ್ಸ್‌ಪ್ರೆಸ್‌ಗಳಿಗೆ ನದಿಗಳ ಹೆಸರನ್ನೇ ಇಡಲಾಗಿದೆ’ ಎಂದು ಪ್ರತಿಪಾದಿಸಿದರು.

ಟೋಲ್ ಕಟ್ಟಬೇಕಾಗತ್ತದೆ: ‘ಎಕ್ಸ್‌ಪ್ರೆಸ್‌ ವೇಯನ್ನು ಅಪಘಾತ ಮುಕ್ತ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸಿ, ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿ ಕುರಿತು ತಜ್ಞರಲ್ಲದವರೂ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಒಮ್ಮೆ ಪರಿಶೀಲಿಸುವಂತೆ ಸಚಿವ ಗಡ್ಕರಿ ಅವರನ್ನು ಕೋರಿದ್ದೆ. ಅದರಂತೆ, ಬಂದಿದ್ದರು. ಮಾಗಡಿ ರಸ್ತೆ ಬಳಿಯಿಂದ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯವರೆಗೆ ಮತ್ತು ಮರಳುವಾಗ ರಸ್ತೆಯ ಮತ್ತೊಂದು ಬದಿಯನ್ನು ವೈಮಾನಿಕ ಸಮೀಕ್ಷೆಯಲ್ಲಿ ವೀಕ್ಷಿಸಿದರು. ರಾಮನಗರ ಬಳಿ ಹೆದ್ದಾರಿಯಲ್ಲೇ ಹೆಲಿಕಾಪ್ಟರ್ ಇಳಿಸಲಾಯಿತು. ಮುಖ್ಯ ಹೆದ್ದಾರಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೇವಾ ರಸ್ತೆ ಕಾಮಗಾರಿಯು ಮುಂದುವರಿದಿದ್ದು, ಪೂರ್ಣಗೊಳ್ಳಲು ಸಮಯ ಬೇಕಾಗುತ್ತದೆ’ ಎಂದು ವಿವರಿಸಿದರು.

ಸೇವಾ ರಸ್ತೆ ಸಿದ್ಧಗೊಳ್ಳುವವರೆಗೆ ಅವಕಾಶ: ‘ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು, ತುರ್ತು ಸೇವೆ, ತಂಗುದಾಣ ನಿರ್ಮಾಣ ಮೊದಲಾದವು ಹಂತ ಹಂತವಾಗಿ ನಡೆಯುತ್ತವೆ. ಸರ್ವಿಸ್‌ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ದ್ವಿಚಕ್ರವಾಹನ ಹಾಗೂ ತ್ರಿಚಕ್ರ ವಾಹನಗಳಿಗೆ ಎಕ್ಸ್‌ಪ್ರೆಸ್‌ ವೇನಲ್ಲಿ ಅವಕಾಶ ಇರಲಿದೆ. ‌ಸರ್ವೀಸ್ ರಸ್ತೆ ಪೂರ್ಣಗೊಂಡ ಬಳಿಕ ಅಪಘಾತ ಮುಕ್ತ ರಸ್ತೆಯನ್ನಾಗಿಸುವ ಉದ್ದೇಶದಿಂದಾಗಿ ಅವಕಾಶ ಕೊಡುವುದಿಲ್ಲ. ದ್ವಿಚಕ್ರವಾಹನ ಹಾಗೂ ತ್ರಿಚಕ್ರವಾಹನಗಳು ಸರ್ವಿಸ್‌ ರಸ್ತೆಯನ್ನು ಬಳಸಿಕೊಳ್ಳಬಹುದು. ಇದರಿಂದ ಅವರು ಟೋಲ್ ಪಾವತಿಸುವುದು ತಪ್ಪಲಿದೆ’ ಎಂದು ತಿಳಿಸಿದರು.

‘ಈ ಹೆದ್ದಾರಿಯು ಕಾರುಳ್ಳವರಿಗೆ ಅಥವಾ ಶ್ರೀಮಂತರಿಗೆ ಎಂಬ ತಪ್ಪು ಕಲ್ಪನೆ ಬೇಡ. ಎಲ್ಲರಿಗೂ ಸುಸಜ್ಜಿತವಾದ ರಸ್ತೆ ಇದು. ಸರ್ವಿಸ್ ರಸ್ತೆಯಲ್ಲಿ ಟೋಲ್ ಕಟ್ಟದೇ ಎಲ್ಲರೂ ಸಂಚರಿಸಬಹುದಾಗಿದೆ. ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಇರಲಿದೆ. ಎಷ್ಟಿರಲಿದೆ ಎನ್ನುವುದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಪ್ರಸಾದದಲ್ಲಿ, ಸ್ವದೇಶಿ ದರ್ಶನ್‌ನಲ್ಲಿ ಅನುದಾನ’
‘ಚಾಮುಂಡೇಶ್ವರಿ ದೇವಸ್ಥಾನವನ್ನು ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ ₹ 41.29 ಕೋಟಿ ಕೆಲವೇ ದಿನಗಳಲ್ಲಿ ಬರಲಿದೆ. ಅದರಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಾಪ ಸಿಂಹ ಹೇಳಿದರು.

‘ದಸರಾ ವಸ್ತುಪ್ರದರ್ಶನವು ‘ಸ್ವದೇಶ್ ದರ್ಶನ್’ ಯೋಜನೆಯಲ್ಲಿ ಆಯ್ಕೆಯಾಗಿದೆ. ಅದನ್ನು ಎಲ್ಲ ಋತುವಿನಲ್ಲೂ ಪ್ರವಾಸೋದ್ಯಮ ಚಟವಟಿಕೆಗೆ ‍ಪೂರಕವಾದ ಕೇಂದ್ರವನ್ನಾಗಿ ಮಾಡಲಾಗುವುದು. ವರ್ಷವಿಡೀ ವಸ್ತುಪ್ರದರ್ಶನ ಇರಲಿದೆ. ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಾಗುತ್ತದೆ. ಮೈಸೂರಿಗೆ ಎರಡು ದೊಡ್ಡ ಕೊಡುಗೆ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ’ ಎಂದರು.

ಬಿಜೆಪಿ ಬ್ರೋಕರ್ ಜನತಾ ಪಾರ್ಟಿ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿಕೆ, ಮಂಡ್ಯ ಸಂಸದೆ ಸುಮಲತಾ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿರುವುದು, ಸ್ಯಾಂಟ್ರೊ ರವಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದರು. ‘ಅದು ನನಗೆ ಗೊತ್ತಿಲ್ಲ’ ಎಂದಷ್ಟೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.