ADVERTISEMENT

ಮೂಲಭೂತ ಅಗತ್ಯಗಳಿಗೆ ಅಸಮರ್ಪಕ ಹೂಡಿಕೆ: ವಿ.ಶಿವದಾಸನ್‌ ಆರೋಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:30 IST
Last Updated 26 ಅಕ್ಟೋಬರ್ 2024, 16:30 IST
ಮೈಸೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ವಿ.ಶಿವದಾಸನ್‌ ಮಾತನಾಡಿದರು. ಎಚ್‌.ಎಸ್‌.ಸುನಂದಾ, ಜಗದೀಶ್‌ ಸೂರ್ಯ, ಯು.ಬಸವರಾಜ್, ಎಂ.ಜಗನ್ನಾಥ್‌, ವಿಜಯ್‌ಕುಮಾರ್‌ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ವಿ.ಶಿವದಾಸನ್‌ ಮಾತನಾಡಿದರು. ಎಚ್‌.ಎಸ್‌.ಸುನಂದಾ, ಜಗದೀಶ್‌ ಸೂರ್ಯ, ಯು.ಬಸವರಾಜ್, ಎಂ.ಜಗನ್ನಾಥ್‌, ವಿಜಯ್‌ಕುಮಾರ್‌ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಪ್ರಜೆಗಳ ಮೂಲಭೂತ ಅಗತ್ಯವಾದ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ವಲಯಕ್ಕೆ ಕೇಂದ್ರ ಸರ್ಕಾರವು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದು, ಆಡಳಿತ ಪಕ್ಷಗಳ ನಿಲುವಿನಿಂದ ಬಡವರು ಬಡವರಾಗಿಯೇ ಉಳಿದಿದ್ದಾರೆ’ ಎಂದು ಕೇರಳದ ಸಂಸದ ವಿ.ಶಿವದಾಸನ್‌ ಪ್ರತಿಪಾದಿಸಿದರು.

ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ವು ಶನಿವಾರ ಸ್ವಾತಂತ್ರ್ಯ ಉದ್ಯಾನದಲ್ಲಿ 24ನೇ ಮೈಸೂರು ಜಿಲ್ಲಾ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ದೇಶದಲ್ಲಿ ಜನರ ಜೀವಿತಾವಧಿಯನ್ನು ಸರ್ಕಾರದ ನೀತಿಗಳು ನಿರ್ಧರಿಸುತ್ತಿವೆ. ಸೌಲಭ್ಯದ ಕೊರತೆಯಿಂದ ಕಡುಬಡವನ ಜೀವಿತಾವಧಿಯೇ ಕುಂಠಿತವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕಮ್ಯುನಿಸ್ಟ್‌ ಪಕ್ಷವು ಕೆಂಬಣ್ಣದ ಬಾವುಟದ ನೆರಳಿನಡಿ ದುಡಿಯುವ ವರ್ಗದ ರಕ್ಷಣೆಗಾಗಿ ನಿರಂತರ ಹೋರಾಟ ಮಾಡುತ್ತಿದೆ. ಮೇಲ್ನೋಟಕ್ಕೆ ಶ್ರೀಮಂತರು ಹೆಚ್ಚು ತೆರಿಗೆ ಪಾವತಿಸುತ್ತಾರೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ, ಕೇಂದ್ರ ಸರ್ಕಾರ ಆ ವರ್ಗಕ್ಕೆ ರಿಯಾಯಿತಿ ನೀಡಿ ಪೋಷಿಸುತ್ತಿದೆ. ಬದಲಾಗಿ ತೆರಿಗೆಯ ಹೆಸರಿನಲ್ಲಿ ಬಡ ಜನರ ರಕ್ತ ಹೀರಲಾಗುತ್ತಿದೆ’ ಎಂದರು.

‘ಕಾರ್ಪೊರೇಟ್‌ ಜಗತ್ತು ನಮ್ಮನ್ನು ಆಳಲು ಯತ್ನಿಸುತ್ತಿದೆ. ಸರ್ಕಾರದ ವ್ಯವಸ್ಥೆಯೂ ಬಜೆಟ್‌ನಲ್ಲಿ ಅವರಿಗಾಗಿ ರಿಯಾಯಿತಿ ಘೋಷಿಸುತ್ತದೆ. ಅದಕ್ಕಾಗಿ ಬೇಕಾದ ತೆರಿಗೆಯನ್ನು ದುಡಿಯುವ ವರ್ಗದಿಂದಲೇ ಕಸಿಯಲಾಗುತ್ತಿದೆ. ಹೀಗಾದರೆ ಜನರ ಬಜೆಟ್‌ ರೂಪುಗೊಳ್ಳುವುದು ಯಾವಾಗ, ಜನರಿಂದ ಪಡೆದ ತೆರಿಗೆ ಹಣ ಅವರ ಅಭಿವೃದ್ಧಿಗೆ ದೊರೆಯಬೇಕು ಎಂಬುದು ನಮ್ಮ ಆಶಯ’ ಎಂದು ತಿಳಿಸಿದರು.

‘ಬಿಸಿಯೂಟ ನೌಕರರಿಗೆ ಕೇಂದ್ರ ಸರ್ಕಾರ ತಿಂಗಳಿಗೆ ₹1,200 ಪಾವತಿಸುತ್ತಿದೆ. ಒಬ್ಬ ವ್ಯಕ್ತಿ ಈ ಮೊತ್ತದಿಂದ ಬದುಕಲು ಹೇಗೆ ಸಾಧ್ಯ. ಕೇಂದ್ರವು ಬಿಸಿಯೂಟ ಯೋಜನೆಯ ಅನುದಾನ ಕಡಿತಗೊಳಿಸಿರುವುದರಿಂದ ವೇತನ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸದಿರುವುದು ವಿಷಾದನೀಯ’ ಎಂದು ಹೇಳಿದರು.

‘ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಪೂರ್ಣಾವಧಿ ಕೆಲಸವಿದ್ದರೂ, ಅವರನ್ನು ನೌಕರರೆಂದು ಗುರುತಿಸಿ ವೇಜ್‌ ಬೋರ್ಡ್‌ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರ ತಯಾರಿಲ್ಲ. ಈ ಕೆಲಸಗಳನ್ನು ‘ಯೋಜನೆಯ ಕೆಲಸ’ ಎಂದು ಕರೆದು ದುಡಿಸಿಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ನಾರಿ ಶಕ್ತಿ ಎಂದು ಕರೆಯುವ ನರೇಂದ್ರ ಮೋದಿ ಮಹಿಳಾ ವರ್ಗದ ಪರವಾಗಿ ಯಾಕೆ ಕೆಲಸ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿನ ಅನುದಾನವನ್ನೂ ಕಡಿಮೆ ಮಾಡಿದ್ದಾರೆ. ದೇವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಆಡಳಿತ ಪಕ್ಷ ದೇವರಂತ ಮಕ್ಕಳ ಪೋಷಣೆಯನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ. ಬಜೆಟ್‌ನಲ್ಲಿ ಅವಕಾಶ ಇದ್ದರೂ ಆರೋಗ್ಯ ಹಾಗೂ ಶಿಕ್ಷಣ ವಲಯಕ್ಕೆ ಹಣ ಮೀಸಲಿಡುತ್ತಿಲ್ಲ. ದೇಶದಲ್ಲಿ ಬಡತನ, ನಿರುದ್ಯೋಗ, ಅಪರಾಧಗಳು ಹೆಚ್ಚುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರಿ ಆರೋಗ್ಯ ವಲಯವನ್ನು ಕೇಂದ್ರವು ಒತ್ತಡವೆಂದು ಭಾವಿಸುತ್ತಿದೆ. ಈ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಮಾಡುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಅಂಗಾಂಗ ಮಾರಾಟ‌ ಮಾಡುವ ವ್ಯವಸ್ಥೆಯಿದ್ದು, ಅದರಿಂದ ದೂರವಿರಲು ಸರ್ಕಾರಿ ವ್ಯವಸ್ಥೆ ನೋಡಿಕೊಳ್ಳಬೇಕು. ಆದರೆ, ಸರ್ಕಾರ ಇವುಗಳ ಬಗ್ಗೆ ಯೋಚಿಸದೆ ಯೋಜನೆಗಳನ್ನು ಕಡಿತಗೊಳಿಸುತ್ತಿದೆ. ದುಬಾರಿ ಶುಲ್ಕದ ಕಾರಣದಿಂದ ಸಾಲ ಸೌಲಭ್ಯದ ವ್ಯವಸ್ಥೆಯಿದ್ದರೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸಮರ್ಪಕ ಯೋಜನೆ ಜಾರಿಗೊಳಿಸಬೇಕಿದೆ’ ಎಂದು ಅಭಿಪ್ರಾಯಪ‍ಟ್ಟರು.

ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ರಾಜ್ಯ ಸಮಿತಿ ಸದಸ್ಯೆ ಎಚ್‌.ಎಸ್‌.ಸುನಂದಾ, ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಸೂರ್ಯ, ಎಂ.ಜಗನ್ನಾಥ್‌, ವಿಜಯ್‌ಕುಮಾರ್‌ ಭಾಗವಹಿಸಿದ್ದರು.

ಗನ್‌ಹೌಸ್‌ ವೃತ್ತದಿಂದ ಮೆರವಣಿಗೆ

ಬಹಿರಂಗ ಸಭೆ ಆರಂಭಕ್ಕೂ ಮುನ್ನ ಕಮ್ಯುನಿಸ್ಟ್‌ ಪಕ್ಷ ಹಾಗೂ ಕಾರ್ಮಿಕ ಸಂಘಟನೆ ಸದಸ್ಯರು ನಗರದ ಗನ್‌ಹೌಸ್‌ ವೃತ್ತದಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದವರೆಗೆ ಮೆರವಣಿಗೆ ನಡೆಸಿದರು. ಕಾರ್ಮಿಕರ ಪರವಾದ ಘೋಷಣೆ ಮೊಳಗಿದವು. ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಕೆಂಬಣ್ಣದ ಉಡುಗೆ ಟೋಪಿ ತೊಟ್ಟು ಕೈಯಲ್ಲಿ ಬಾವುಟ ಹಿಡಿದು ಕ್ರಾಂತಿ ಗೀತೆಗಳನ್ನು ಹಾಡುತ್ತಾ ಹೆಜ್ಜೆ ಹಾಕಿದರು.

ಜಿಎಸ್‌ಟಿ: ಒಕ್ಕೂಟ ವ್ಯವಸ್ಥೆಗೆ ಹೊಡೆತ

‘ಜಿಎಸ್‌ಟಿಯು ಒಕ್ಕೂಟ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ ನೀಡಿದೆ. ಅದರಲ್ಲಿನ ದೊಡ್ಡ ಪಾಲನ್ನು ಕೇಂದ್ರವೇ ಪಡೆಯುತ್ತಿದೆ. ಜೆಎಸ್‌ಟಿ ಸಂಗ್ರಹ ಪ್ರಮಾಣ ಹಾಗೂ ಕೇಂದ್ರ ರಾಜ್ಯಗಳಿಗೆ ವಾಪಸ್‌ ನೀಡುವ ಪ್ರಮಾಣ ಗಮನಿಸಿದಾಗ ಹೇಗೆ ಹಣ ಲೂಟಿ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತದೆ. ಆಡಳಿತ ಪಕ್ಷದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿ ನಮ್ಮ ಹಕ್ಕನ್ನು ಪಡೆಯಲು ಹೋರಾಟ ಸಂಘಟಿಸಬೇಕು’ ಎಂದು ವಿ.ಶಿವದಾಸನ್‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.