ಮೈಸೂರು: ‘ನಾನು ಎಲ್ಲಿ ಪ್ರಚಾರ ನಡೆಸಬೇಕೆಂದು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರು ಸೂಚಿಸಿದ ಕಡೆಯಲ್ಲಾ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದೇನೆ. ಮಂಡ್ಯದಲ್ಲಿ ಪ್ರಚಾರಕ್ಕೆ ಆಹ್ವಾನ ಬಂದಿಲ್ಲ. ನನ್ನ ಬೆಂಬಲಿಗರು ಅಲ್ಲಿ ಎನ್‌ಡಿಎ ಪರ ಪ್ರಚಾರ ನಡೆಸಿದ್ದಾರೆ. ಒಳ ಏಟಿನ ಪ್ರಶ್ನೆಯೇ ಇಲ್ಲ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳದಿರುವ ಕುರಿತು ಶನಿವಾರ ನಗರದ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದ ಅವರು, ‘ಗೆದ್ದ ಕ್ಷೇತ್ರವನ್ನೇ ಎನ್‌ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಅದಕ್ಕಿಂತ ದೊಡ್ಡ ಸಹಕಾರ ಏನು ಬೇಕು’ ಎಂದೂ ಪ್ರಶ್ನಿಸಿದರು.
‘ಎರಡು ವಾರದ ಹಿಂದೆ ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಸಹಕಾರ ಕೇಳಿದ್ದರು. ನಾನು ಬಿಜೆಪಿಗೆ ಸೇರ್ಪಡೆಗೊಳ್ಳುವುದಲ್ಲದೇ ಮನಃಪೂರ್ವಕವಾಗಿ ನನ್ನ ಸ್ಥಾನವನ್ನೇ ಬಿಟ್ಟು ಕೊಟ್ಟಿದ್ದೇನೆ. ನನ್ನ ಈ ನಿರ್ಧಾರವು ಎನ್‌ಡಿಎ ಅಭ್ಯರ್ಥಿ ಪರವಾಗಿಯೇ ಇದೆ. ಅದನ್ನು ಅನುಮಾನಿಸುವ ಅಗತ್ಯವಿಲ್ಲ’ ಎಂದರು.
ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ ಕುರಿತು ಪ್ರತಿಕ್ರಿಯಿಸಿ, ‘ ದರ್ಶನ್ ಸಣ್ಣ ಮಗುವಲ್ಲ, ಅವರು ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರರು. ಕಳೆದ ಬಾರಿಯೂ ಬೇರೆ ಪಕ್ಷದ ಪರ ಪ್ರಚಾರ ಮಾಡಿದ್ದರು. ನಾನು ಸ್ಪರ್ಧಿಸಿದ್ದರೆ ನನ್ನ ಪರ ಪ್ರಚಾರ ಮಾಡುತ್ತಿದ್ದರು’ ಎಂದರು.
‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಬೇಸರದ ಸಂಗತಿ. ಆದರೆ ಆಕೆಯ ತೇಜೋವಧೆ ಮಾಡುವುದು ಸರಿಯಲ್ಲ. ವೈಯಕ್ತಿಕ ಕಾರಣಕ್ಕೆ ಆದರೆ ಅದು ಕೊಲೆಯಲ್ಲವೇ? ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಒಂದು ಸಮುದಾಯವನ್ನು ಓಲೈಸುವ ಪ್ರಯತ್ನವನ್ನೂ ಮಾಡಬಾರದು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.