ಮೈಸೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆವರಣದಲ್ಲಿ ನಡೆದ ಆದಾಲತ್‌ನಲ್ಲಿ ನಾಗರಿಕರಿಂದ ಸಮಸ್ಯೆಗಳ ಸುರಿಮಳೆಯಾಯಿತು.
ಮಂಗಳವಾರ ಆಯೋಜಿಸಿದ್ದ ಅದಾಲತ್‌ನಲ್ಲಿ 250ಕ್ಕೂ ಹೆಚ್ಚು ನಾಗರಿಕರು ಸಮಸ್ಯೆಯೊಂದಿಗೆ ಆಗಮಿಸಿದ್ದರು. ಖಾತೆ ಬದಲಾವಣೆ, ಹಕ್ಕುಪತ್ರ, ಸ್ವಾಧೀನ ಪತ್ರ, ಪೌತಿ ಖಾತೆ ವರ್ಗಾವಣೆ, ಕಟ್ಟಡ ಪೂರ್ಣಗೊಂಡ ಬಗ್ಗೆ ಮುಕ್ತಾಯ ವರದಿ ಕೋರಿ ಅರ್ಜಿ, ನಿವೇಶನ, ಮನೆ ಖಾತೆ ವರ್ಗಾವಣೆ, ನೋಂದಣಿ ಪ್ರಕರಣಗಳು, ಮಂಜೂರಾತಿ ಪತ್ರ, ಸ್ವಾಧೀನ ಪತ್ರ ನೀಡದಿರುವುದು ಮೊದಲಾದ ಸಮಸ್ಯೆಗಳನ್ನು ತೋಡಿಕೊಂಡರು.
ವಿಜಯನಗರ 4ನೇ ಹಂತದ ಬಸ್ ನಿಲ್ದಾಣದ ಹಿಂಭಾಗದ ಬಡಾವಣೆ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ದುರಸ್ತಿ, ಚರಂಡಿ ತೊಂದರೆ, ಕಾವೇರಿ ನೀರು ಸರಬರಾಜಾಗುತ್ತಿಲ್ಲ ಮೊದಲಾದ ಸಮಸ್ಯೆಗಳನ್ನು ತೋಡಿಕೊಂಡರು. ಎಇಇ ಮಹೇಶ್ ಅವರನ್ನು ತರಾಟೆಗೆ ತೆಗದುಕೊಂಡರು. ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕರೆ ಸ್ವೀಕರಿಸುವುದಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ‘ವಾರದೊಳಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು. ವರದಿ ನೀಡುವಂತೆ ಎಸ್‌ಇ ಚನ್ನಕೇಶವ ಅವರಿಗೆ ಸೂಚನೆ ನೀಡಿದರು.
12 ವರ್ಷದಿಂದ ಅಲೆದಾಟ: ಅಶೋಕಪುರಂನಲ್ಲಿನ ನಿವೇಶನದ ಖಾತೆ ಬದಲಾವಣೆ ಮಾಡುವ ಸಂಬಂಧ 2011ರಿಂದ ಕಚೇರಿಗೆ ಅಲೆದಾಡುತ್ತಿರುವೆ. ಯಾವುದೇ ಪ್ರಯೋಜನವಾಗಿಲ್ಲ. ಅದಾಲತ್‌ನಲ್ಲಿ ಕೆಲ ದಾಖಲೆ ಕೇಳಿದ್ದು, ಬಳಿಕ ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಚಾಮುಂಡೇಶ್ವರಿ ಲೇಔಟ್‌ನ ವೀಣಾ ಹೇಳಿದರು. ‘ದಾಖಲೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಅಧ್ಯಕ್ಷರು ತಿಳಿಸಿದರು.
ಸಿಆರ್‌ಗೆ ಅರ್ಜಿ ಸಲ್ಲಿಸಿ ಮೂರು ವರ್ಷದಿಂದ ಅಲೆದಾಡುತ್ತಿರುವೆ, ಸಮಸ್ಯೆ ಬಗೆಹರಿದಿಲ್ಲ ಎಂದು ವಿಜಯನಗರ 4ನೇ ಹಂತದ ನಿವಾಸಿ ಆರ್.ನಾರಾಯಣಸ್ವಾಮಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಹೊಸದಾಗಿ ಇನ್ನೊಮ್ಮೆ ಅರ್ಜಿ ಸಲ್ಲಿಸಿ, ಕೂಡಲೇ ಕೊಡಿಸುವೆ ಎಂದು ಹೇಳಿದರು.
‘ಮುಡಾ ಅದಾಲತ್ ಪ್ರತಿ ತಿಂಗಳ 2ನೇ ಹಾಗೂ 4ನೇ ಮಂಗಳವಾರ ನಡೆಯುತ್ತದೆ. ಸಾರ್ವಜನಿಕ ಸೇವೆಗಳ ಕುರಿತು ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಲಾಗುವುದು. ಆದರೆ, ಅದಾಲತ್‌ನಲ್ಲಿ ಮನೆ ನಿವೇಶನಕ್ಕಾಗಿ ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ’ ಎಂದು ಸೋಮಶೇಖರ್ ಹೇಳಿದರು.
ಮುಡಾ ಸದಸ್ಯರಾದ ಲಕ್ಷ್ಮಿದೇವಿ, ಮಾದೇಶ್, ಎಸ್‌ಬಿಎಂ ಮಂಜು, ಎಸ್‌ಇ ಚನ್ನಕೇಶವ, ಕಾರ್ಯದರ್ಶಿ ಕುಸುಮಾ ಕುಮಾರಿ, ತಹಶೀಲ್ದಾರ್ ಮಂಜುನಾಥ್, ಗುರುಪ್ರಸಾದ್, ವಿಷ್ಣುವರ್ಧನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.