ಮೈಸೂರು: ‘ಆರೋಪಿ ಸ್ಥಾನದಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೊಲೀಸರು ಗೌರವ ವಂದನೆಯನ್ನು ಹೇಗೆ ಕೊಟ್ಟರು? ಶಿಷ್ಟಾಚಾರ ಎಂದರೆ ಏನು ಎಂಬುದು ಪೊಲೀಸರಿಗೆ ಗೊತ್ತಿದೆಯಾ?’ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು.
ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಬುಧವಾರ ನಡೆದ ಮುಖ್ಯಮಂತ್ರಿಯ ವಿಚಾರಣೆ ವೇಳೆ ಪೊಲೀಸರು ನಡೆದುಕೊಂಡ ರೀತಿ ನಾಚಿಕೆಗೇಡು. ಇವರೆಲ್ಲಾ ಸೇರಿ ಈ ವ್ಯವಸ್ಥೆಯನ್ನು ಹಾಳು ಮಾಡಿದರು. ಯಾವ ಲೋಕಾಯುಕ್ತವನ್ನು ಸಿದ್ದರಾಮಯ್ಯ ಮುಚ್ಚಿಹಾಕಿದ್ದರೋ ಈಗ ಅದೇ ಲೋಕಾಯುಕ್ತದ ಎದುರು ಅದರಲ್ಲೂ ಮೈಸೂರಿನಲ್ಲೇ ವಿಚಾರಣೆಗಾಗಿ ಬಂದಿದ್ದು ನನಗೆ ವೈಯುಕ್ತಿಕವಾಗಿ ಬೇಸರ ತಂದಿದೆ. ಅರ್ಕಾವತಿ ಪ್ರಕರಣವನ್ನು ಮುಚ್ಚಿ ಹಾಕಲಿಕ್ಕೆ ಸಿದ್ದರಾಮಯ್ಯ ಲೋಕಾಯುಕ್ತಕ್ಕೆ ಬಾಗಿಲು ಹಾಕಿದ್ದರು’ ಎಂದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಮೈಸೂರಿನ ಜನ, ನಮಗೆಲ್ಲಾ ಕನಿಷ್ಠ 20X30 ಚದರಡಿ ಅಳತೆಯ ನಿವೇಶನ ಸಿಗುತ್ತದೆ ಅಂದುಕೊಂಡಿದ್ದರು. ಆದರೆ, ಸಿದ್ದರಾಮಯ್ಯ ತಮ್ಮ ಪತ್ನಿಗೆ 14 ನಿವೇಶನ ಕೊಡಿಸಿಕೊಂಡರು. ಈಗಾಗಲೇ ಲೋಕಾಯುಕ್ತ, ಇಡಿ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಸದ್ಯದಲ್ಲೇ ಸಿಬಿಐ ಪ್ರವೇಶವೂ ಆಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.