ADVERTISEMENT

Muda Case: ಸಿದ್ದರಾಮಯ್ಯ ಆಪ್ತನ ಅಧಿಕಾರ ತ್ಯಾಗ

ರಾಜ್ಯ ಸರ್ಕಾರಕ್ಕೆ ಬರೆದ ಪತ್ರವೇ ವಿರೋಧ ಪಕ್ಷಗಳಿಗೆ ಅಸ್ತ್ರವಾಯಿತು; ಪಕ್ಷದಲ್ಲೂ ವಿರೋಧವಿತ್ತು

ಆರ್.ಜಿತೇಂದ್ರ
Published 17 ಅಕ್ಟೋಬರ್ 2024, 6:54 IST
Last Updated 17 ಅಕ್ಟೋಬರ್ 2024, 6:54 IST
ಕೆ. ಮರೀಗೌಡ
ಕೆ. ಮರೀಗೌಡ   

ಮೈಸೂರು: ಮುಡಾ ಅಧ್ಯಕ್ಷರಾಗಿ ತಾವೇ ಅಲ್ಲಿನ ಅಕ್ರಮದ ಬಗ್ಗೆ ಪತ್ರ ಬರೆದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದ ಹಾಗೂ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ಎದುರಿಸಿದ್ದ ಕೆ. ಮರೀಗೌಡ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. 

‘ಸಿದ್ದರಾಮಯ್ಯ ಅವರೇ ನನ್ನ ಮನೆ ದೇವರು’ ಎನ್ನುವ ಮರೀಗೌಡ ಇದೇ ವರ್ಷ ಮಾರ್ಚ್‌ನಲ್ಲಿ ಮುಡಾ ಅಧ್ಯಕ್ಷರಾಗಿದ್ದು, ಈ ಹುದ್ದೆಯಲ್ಲಿದ್ದ ಏಳು ತಿಂಗಳಲ್ಲೇ ಅನೇಕ ವಿವಾದಗಳನ್ನು ಎದುರಿಸಿದ್ದರು. ‘ಸಿದ್ದರಾಮಯ್ಯ ಅವರಿಗೆ ಮಗ್ಗುಲ ಮುಳ್ಳಾಗಿದ್ದಾರೆ’ ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಮುಡಾ ಹಗರಣ ಬೆಳಕಿಗೆ ಬರಲು ಕಾಂಗ್ರೆಸ್‌ನ ಎರಡು ಗುಂಪುಗಳ ಒಳಜಗಳವೇ ಕಾರಣ ಎಂಬ ಆರೋಪವಿದೆ. ಒಂದು ಗುಂಪಿನವರಿಗೆ ನಿವೇಶನ ಹಂಚಿಕೆ ಆಗಿದ್ದನ್ನು ತಡೆಹಿಡಿದು, ‘ಮುಡಾದಲ್ಲಿ ಶೇ 50:50 ಅನುಪಾತದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ’ ಎಂದು ಮರೀಗೌಡ ಸರ್ಕಾರಕ್ಕೆ ಪತ್ರ ಬರೆದಿದ್ದರು. ಮುಡಾ ಆಯುಕ್ತರ ಮೇಲೂ ಸಿಟ್ಟು ಹೊರ ಹಾಕಿದ್ದರು. ಆ ಪತ್ರ ಬಹಿರಂಗಗೊಂಡು ಅದೇ ವಿರೋಧಪಕ್ಷದವರಿಗೆ ಅಸ್ತ್ರವಾಯಿತು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ ಶೇ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಾಗಿದ್ದ ವಿಷಯ ವಿವಾದವಾಗಿ ರೂಪಗೊಳ್ಳಲು ಮರೀಗೌಡ ಅವರ ಪತ್ರವೇ ಕಾರಣವಾಯಿತು; ಸಿದ್ದರಾಮಯ್ಯ ಅವರಿಗೆ ಸಂಕಷ್ಟವನ್ನೂ ತಂದೊಡ್ಡಿತು’ ಎಂದು ಕಾಂಗ್ರೆಸ್ ಮುಖಂಡರೇ ದೂರಿದ್ದರು. ಅಂದಿನಿಂದ ಅವರ ರಾಜೀನಾಮೆಗೆ ಒತ್ತಾಯ ಕೇಳಿಬಂದಿತ್ತು. ಈಚೆಗೆ ಮೈಸೂರು ವಿಮಾನನಿಲ್ದಾಣದಲ್ಲಿ ಅವರಿಗೆ ಸಿದ್ದರಾಮಯ್ಯ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.

ಮನೆ, ನಿವೇಶನದ ವಿವಾದ: ಮರೀಗೌಡ ಪತ್ನಿ ಜಯಶ್ರೀ ಹೆಸರಿನಲ್ಲಿ ಇದೇ ವರ್ಷ ಜೂನ್‌ನಲ್ಲಿ ಮೈಸೂರಿನಲ್ಲಿ ₹6 ಕೋಟಿ ಮೌಲ್ಯದ ಬಂಗಲೆ ಖರೀದಿಸಿದ್ದರು. ನಿವೃತ್ತ ಶಿಕ್ಷಕಿಯಾದ ಅವರ ಪತ್ನಿ ಭಾರಿ ಮೌಲ್ಯದ ಮನೆ ಖರೀದಿ ಮಾಡಿದ್ದು ಸುದ್ದಿಯಾಗಿತ್ತು. ‘ಸೆಟ್ಲ್‌ಮೆಂಟ್ ಡೀಡ್‌’ ಹೆಸರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಒಬ್ಬರಿಂದ ಮರೀಗೌಡ ಸಂಬಂಧಿಯೊಬ್ಬರಿಗೆ ವಿಜಯನಗರದಲ್ಲಿ ನಿವೇಶನ ನೋಂದಣಿ ಆಗಿದ್ದು ಸಹ ವಿವಾದವಾಗಿತ್ತು.

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಕ್ಕೆ 14 ನಿವೇಶನಗಳನ್ನು ವಾಪಸ್ ನೀಡಿದ ಬೆನ್ನಲ್ಲೇ ಮರೀಗೌಡ ರಾಜೀನಾಮೆ ನೀಡುವ ಸುದ್ದಿ ಹಬ್ಬಿತ್ತು. ಆದರೆ, ದಸರಾ ಬಳಿಕ ನಿರ್ಧಾರ ಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚಿಸಿದ್ದರು ಎನ್ನಲಾಗಿದೆ.

ಹಿಂದೆಯೂ ಮುಜುಗರ:

ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇದೇ ಮರೀಗೌಡ ಅಂದಿನ ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರನ್ನು ನಿಂದಿಸಿ, ನಂತರ ಒಂದಷ್ಟು ದಿನ ತಲೆಮರೆಸಿಕೊಂಡಿದ್ದರು. ನಂತರದಲ್ಲಿ ಬಂಧನಕ್ಕೆ ಒಳಗಾಗಿ ಒಂದು ತಿಂಗಳು ಜೈಲುವಾಸವನ್ನೂ ಅನುಭವಿಸಿದ್ದರು. ಅದರಿಂದಾಗಿ ಸಿದ್ದರಾಮಯ್ಯ ಮುಜುಗರ ಪಟ್ಟುಕೊಳ್ಳುವಂತಾಗಿತ್ತು.

ಸಿದ್ದರಾಮಯ್ಯ ಆಪ್ತ:

ಸಿದ್ದರಾಮಯ್ಯ ಅತ್ಯಾಪ್ತರಲ್ಲಿ ಮರೀಗೌಡ ಸಹ ಒಬ್ಬರು. 40 ವರ್ಷಗಳಿಂದ ಅವರ ಜೊತೆಗಿದ್ದಾರೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮರೀಗೌಡ, 2023ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಆದರೆ ಪಕ್ಷ ಬೇರೊಬ್ಬರಿಗೆ ಟಿಕೆಟ್ ನೀಡಿತ್ತು. ಅದನ್ನು ಸರಿದೂಗಿಸಲೆಂದೇ ಸಿದ್ದರಾಮಯ್ಯ ತಮ್ಮ ಆಪ್ತನಿಗೆ ಮುಡಾ ಅಧ್ಯಕ್ಷ ಸ್ಥಾನ ನೀಡಿದ್ದರು ಎನ್ನಲಾಗಿದೆ.

ಉಳಿದವರಿಂದಲೂ ರಾಜೀನಾಮೆ:

ಸ್ನೇಹಮಯಿ ಕೃಷ್ಣ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸೇರಿದಂತೆ ಮುಡಾ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರೂ ರಾಜೀನಾಮೆ ನೀಡಿ ಜೈಲಿಗೆ ಹೋಗುವ ಸಮಯ ಬರಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದರು. ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ‘ಮರೀಗೌಡ ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿಲ್ಲ. ತಪ್ಪು ಮಾಡಿದ್ದಕ್ಕೆ ಕೊಟ್ಟಿದ್ದಾರೆ. ಸಚಿವ ಮಹದೇವಪ್ಪ ಕೂಡ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ. ಅವರ ತಮ್ಮನ ಮಗ ನವೀನ್ ಬೋಸ್ ಹೆಸರಲ್ಲಿ ಸೆಟ್ಲ್‌ಮೆಂಟ್‌ ಡೀಡ್ ಮೂಲಕ ಮುಡಾ ನಿವೇಶನ ಪಡೆದಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.