ADVERTISEMENT

Muda Case: ಲೋಕಾಯುಕ್ತ ಅಧಿಕಾರಿಗಳಿಂದ ಕೆಸರೆ ಸ್ಥಳ ಮಹಜರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 6:02 IST
Last Updated 1 ಅಕ್ಟೋಬರ್ 2024, 6:02 IST
<div class="paragraphs"><p>ಸ್ಥಳ ಮಹಜರು</p></div>

ಸ್ಥಳ ಮಹಜರು

   

ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ಚುರುಕು ಗೊಳಿಸಿರುವ ಇಲ್ಲಿನ ಲೋಕಾಯುಕ್ತ ಪೊಲೀಸರು ಮಂಗಳವಾರ ಪ್ರಕರಣದ ಕೇಂದ್ರ ಬಿಂದುವಾದ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಸ್ಥಳ ಮಹಜರು ನಡೆಸಿದರು.

ಲೋಕಾಯುಕ್ತ ಎಸ್.ಪಿ. ಉದೇಶ್‌ ನೇತೃತ್ವದಲ್ಲಿ ಕಂದಾಯ, ಭೂಮಾಪನ ಹಾಗೂ ಮುಡಾ ಅಧಿಕಾರಿಗಳ ತಂಡವು ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಜೊತೆಗೂಡಿ ಬೆಳಿಗ್ಗೆ 9ಕ್ಕೆ ಸ್ಥಳಕ್ಕೆ ತೆರಳಿತು. ಸಂಜೆ 5ರವರೆಗೂ ಸರ್ವೆ ನಡೆಸಿತು. ಕೈಯಲ್ಲಿ ಕಬ್ಬಿಣದ ಚೈನ್‌ಗಳನ್ನು ಹಿಡಿದ ಸಿಬ್ಬಂದಿ ಈ ಸರ್ವೆ ಸಂಖ್ಯೆಯಲ್ಲಿನ ಪ್ರತಿ ನಿವೇಶನವನ್ನೂ ಅಳೆದರು. ನಂತರ, ಅಲ್ಲಿಯೇ ಜಮೀನಿನ ನಕ್ಷೆ ಸೇರಿ ಎಲ್ಲ ದಾಖಲೆಗಳನ್ನೂ
ಸಿದ್ಧಪಡಿಸಿಕೊಳ್ಳಲಾಯಿತು.

ADVERTISEMENT

ಬಳಿಕ ತನಿಖಾಧಿಕಾರಿಗಳ ತಂಡವು ತಹಶೀಲ್ದಾರ್ ಕಚೇರಿಗೆ ತೆರಳಿ ಅಲ್ಲಿ ನಕ್ಷೆ, ವರದಿ ಸಿದ್ಧಪಡಿಸಿಕೊಂಡು ಹಾಜರಿದ್ದ ಎಲ್ಲರ ಸಹಿ ದಾಖಲಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ.

ಏನಿತ್ತು ಸ್ಥಳದಲ್ಲಿ?:

2004ರಲ್ಲಿ ಜೆ. ದೇವರಾಜು ಅವರಿಂದ ಸಿದ್ದರಾಮಯ್ಯ ಭಾವಮೈದುನ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ, 2010ರಲ್ಲಿ ಅವರ ಸಹೋದರಿ ಬಿ.ಎಂ. ಪಾರ್ವತಿ ಹೆಸರಿಗೆ ದಾನಪತ್ರದ ರೂಪದಲ್ಲಿ ಹಕ್ಕು ವರ್ಗಾವಣೆಯಾದ ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಜಮೀನು ಒಟ್ಟು 3.16 ಎಕರೆ ವಿಸ್ತೀರ್ಣ ಹೊಂದಿದೆ. ಇದನ್ನು ಮುಡಾ, ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಂಡಿದೆ.

ವಿವಿಧ ಅಳತೆಯ ಒಟ್ಟು 30 ನಿವೇಶನಗಳು ಈ ಜಮೀನಿನಲ್ಲಿವೆ. ಉಳಿದ ಜಾಗದಲ್ಲಿ 1 ಎಕರೆ 14 ಗುಂಟೆಯನ್ನು ಉದ್ಯಾನ ಹಾಗೂ 39 ಗುಂಟೆಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿ ಕೊಂಡಿರುವುದು ವಿವಿಧ ಇಲಾಖೆಗಳ ಜಂಟಿ ಸರ್ವೆ ವೇಳೆ ಕಂಡುಬಂದಿದೆ. ಇದೇ ವೇಳೆ ಸರ್ವೆ ಸಂಖ್ಯೆ 462ರ 37 ಗುಂಟೆ ಜಮೀನಿನ ಸರ್ವೆ ಕಾರ್ಯವೂ ನಡೆಯಿತು.

ಬುಧವಾರ ಸರ್ಕಾರಿ ರಜೆ ಇದ್ದು, ಗುರುವಾರ ಮುಡಾ ವಿಜಯನಗರದ ವಿವಿಧೆಡೆ ಬಿ.ಎಂ. ಪಾರ್ವತಿ ಅವರಿಗೆ ನೀಡಿದ್ದ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.