ADVERTISEMENT

ಮುಡಾ ಪ್ರಕರಣ: ಸುಜೀತ್‌, ಭೈರತಿ ಸುರೇಶ್ ವಿರುದ್ಧ ತನಿಖೆಗೆ ಸ್ನೇಹಮಯಿ ಕೃಷ್ಣ ಮನವಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:10 IST
Last Updated 6 ಅಕ್ಟೋಬರ್ 2024, 14:10 IST
ಭೈರತಿ ಸುರೇಶ್‌
ಭೈರತಿ ಸುರೇಶ್‌   

ಮೈಸೂರು: ಲೋಕಾಯುಕ್ತದ ಹಿಂದಿನ ಮೈಸೂರು ಎಸ್‌.ಪಿ. ಸುಜೀತ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ವಿರುದ್ಧ ತನಿಖೆ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪೊಲೀಸ್ ಮಹಾನಿರ್ದೇಶಕರಿಗೆ ಭಾನುವಾರ ಇ–ಮೇಲ್‌ ಮೂಲಕ ದೂರು ನೀಡಿದ್ದಾರೆ.

‘ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿದ್ದ ಲೋಕಾಯುಕ್ತ ಪೊಲೀಸರು, ಲೋಕಾಯುಕ್ತರಿಂದ ಸರ್ಚ್‌ ವಾರಂಟ್ ಪಡೆದು ಮುಡಾ ಕಚೇರಿ ಮೇಲೆ ದಾಳಿಗೆ ಯೋಜಿಸಿದ್ದರು. ಆದರೆ, ಈ ಮಾಹಿತಿಯನ್ನು ಎಸ್‌.ಪಿ. ಸುಜೀತ್‌ ಸಚಿವ ಬೈರತಿ ಸುರೇಶ್‌ಗೆ ತಿಳಿಸಿದ್ದರು. ನಂತರದಲ್ಲಿ ಬೈರತಿ ಸುರೇಶ್‌ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಬಂದು ಮುಡಾ ಕಚೇರಿಯಲ್ಲಿದ್ದ ಪ್ರಮುಖ ದಾಖಲೆಗಳನ್ನು ಬೆಂಗಳೂರಿಗೆ ಒಯ್ದರು. ಇದೇ ದಾಖಲೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು. ಈ ರೀತಿ ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ಸುಜೀತ್ ಅವರನ್ನು ಸರ್ಕಾರ ಮೈಸೂರಿನಿಂದ ಬೆಂಗಳೂರಿಗೆ ಆಯಕಟ್ಟಿನ ಜಾಗಕ್ಕೆ ವರ್ಗಾಯಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

‘ಸುಜೀತ್ ಹಾಗೂ ಬೈರತಿ ಸುರೇಶ್ ನಡುವಿನ ದೂರವಾಣಿ ಕರೆಗಳನ್ನು ತನಿಖೆಗೆ ಒಳಪಡಿಸಬೇಕು. ಮೈಸೂರಿನಿಂದ ಹೆಲಿಕಾಪ್ಟರ್‌ನಲ್ಲಿ ದಾಖಲೆಗಳನ್ನು ಕೊಂಡೊಯ್ದ ಕುರಿತು ಕೂಡ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಸೋಮವಾರ ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತವಾಗಿ ದೂರು ಸಲ್ಲಿಸುವುದಾಗಿ ಸ್ನೇಹಮಯಿ ಕೃಷ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.