ADVERTISEMENT

Muda Case | ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಇದೇ ಮೊದಲು: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 10:08 IST
Last Updated 27 ಸೆಪ್ಟೆಂಬರ್ 2024, 10:08 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಮೈಸೂರು: ‘ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ. ನನಗೆ ದೊರೆಯುತ್ತಿರುವ ಜನ ಬೆಂಬಲದಿಂದ ವಿರೋಧಪಕ್ಷಗಳು ಬೆದರಿವೆ. ತಪ್ಪು ಮಾಡಿಲ್ಲವಾದ್ದರಿಂದ ನಾನು ರಾಜೀನಾಮೆ ನೀಡುವ ಅಗತ್ಯವಿಲ್ಲ’ ಎಂದರು.

ADVERTISEMENT

‘ಸಂವಿಧಾನದಡಿ ಆಯ್ಕೆಯಾದ ರಾಜ್ಯಪಾಲರಿಂದ ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧ ಪಕ್ಷಗಳ ಸರ್ಕಾರವಿದೆಯೋ ಅಲ್ಲಿ ಕೇಂದ್ರ ಸರ್ಕಾರ ಇಡಿ, ಸಿಬಿಐ ಹಾಗೂ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ರಾಷ್ಟ್ರಪತಿ ಅಥವಾ ರಾಜ್ಯಪಾಲರು ಸಂವಿಧಾನದ ಪ್ರಕಾರ ಕೆಲಸ ಮಾಡಲು ಇರುವವರೇ ನಾಮನಿರ್ದೇಶನಗೊಂಡವರೇ ಹೊರತು, ಯಾವುದೇ ಚುನಾವಣೆ ಮೂಲಕ ಆಯ್ಕೆಯಾದವರಲ್ಲ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ, ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿರುವ ಪ್ರಮುಖರು. ಈ ಪ್ರಮುಖ ವ್ಯತ್ಯಾಸ ಇರುವಾಗ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ಬಗ್ಗೆ ಕುರಿತು ದೇಶದಾದ್ಯಂತ ಚರ್ಚೆಯಾಗಬೇಕು’ ಎಂದರು.

‘ಸರ್ಕಾರ–ರಾಜ್ಯಪಾಲರ ನಡುವಿನ ಸಂಘರ್ಷದಿಂದ ಸಂವಿಧಾನದ ಸಂಘರ್ಷ ಉಂಟಾಗುತ್ತಿದೆಯೇ’ ಎಂಬ ಪ್ರಶ್ನೆಗೆ, ‘ನಮಗೆ ಜನಬೆಂಬಲ ದೊರೆತಿದ್ದು, ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಈ ಐದು ವರ್ಷದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡುವಂತೆ ಜನಾದೇಶವಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ನಮ್ಮ ಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ. ಆಪರೇಷನ್ ಕಮಲದ ಅವರ ಪ್ರಯತ್ನ ವಿಫಲವಾಗಿದೆ’ ಎಂದರು.

‘ನಾನು ಲೋಕಾಯುಕ್ತವನ್ನು ಮುಚ್ಚಲಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಅಸ್ತಿತ್ವದಲ್ಲಿದೆ. ಬಿಜೆಪಿಯಲ್ಲಿ ತಪ್ಪು ಮಾಡದಿರುವ ಅಥವಾ ಭ್ರಷ್ಟಾಚಾರ ಮಾಡದಿರುವ ಒಬ್ಬರೂ ಇಲ್ಲ. ನಾವು ಎಂದಿಗೂ ಸಂವಿಧಾನ ಹಾಗೂ ಕಾನೂನು ವಿರುದ್ಧವಾಗಿ ಯಾವುದೇ ಕೆಲಸಗಳನ್ನು ಮಾಡಿಲ್ಲ; ಮುಂದೆಯೂ ಮಾಡುವುದಿಲ್ಲ’ ಎಂದು ಹೇಳಿದರು.

‘ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಯಾವುದೇ ಕಾರಣಕ್ಕೂ ಬಡವರ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.