ADVERTISEMENT

ಮುಡಾ ಅಧ್ಯಕ್ಷರ ರಾಜೀನಾಮೆ | ಆಡಳಿತಾಧಿಕಾರಿ ನೇಮಕವೋ? ಡಿ.ಸಿ.ಗೆ ಅಧಿಕಾರವೋ?

ಸದ್ಯಕ್ಕಿಲ್ಲ ಹೊಸಬರಿಗೆ ಅವಕಾಶ

ಆರ್.ಜಿತೇಂದ್ರ
Published 18 ಅಕ್ಟೋಬರ್ 2024, 7:17 IST
Last Updated 18 ಅಕ್ಟೋಬರ್ 2024, 7:17 IST
ಮುಡಾ ಕಚೇರಿ
ಮುಡಾ ಕಚೇರಿ   

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸದ್ಯಕ್ಕೆ ಹೊಸಬರ ನೇಮಕ ಸಾಧ್ಯತೆ ಕಡಿಮೆ. ಬದಲಿಗೆ, ‘ಆಡಳಿತಾಧಿಕಾರಿ ನೇಮಕದ ಮೂಲಕ ಮುಡಾದಲ್ಲಿರುವ ಅವ್ಯವಸ್ಥೆ ಸರಿಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಲಿದೆ’ ಎಂಬ ಮಾತುಗಳು ಕೇಳಿಬಂದಿವೆ.

ಮುಡಾದಲ್ಲಿ ಅಧ್ಯಕ್ಷರಿಲ್ಲದಿದ್ದರೆ ಜಿಲ್ಲಾಧಿಕಾರಿಯನ್ನೇ ಆಡಳಿತಾಧಿಕಾರಿಯಾಗಿ ನೇಮಿಸಿ ಅವರ ಅಧ್ಯಕ್ಷತೆಯಲ್ಲೇ ಸಭೆಗಳನ್ನು ನಡೆಸುವುದು ವಾಡಿಕೆ. ಈ ಹಿಂದೆ ಹಲವು ಜಿಲ್ಲಾಧಿಕಾರಿಗಳು ಈ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕಳೆದ ವರ್ಷ ವಿಧಾನಸಭೆ ಚುನಾವಣೆಯ ಬಳಿಕ ಮರೀಗೌಡರ ನೇಮಕದವರೆಗೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಜವಾಬ್ದಾರಿ ನಿರ್ವಹಿಸಿದ್ದರು. ಆಗ, ಅವರು ಹಾಗೂ ಅಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ನಡುವಿನ ‘ನೋಟಿಸ್ ಸಮರ’ವೂ ಸಾಕಷ್ಟು ಸುದ್ದಿ ಮಾಡಿತ್ತು.

ನಿವೇಶನ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲೇ, ‘ಖಡಕ್‌ ಐಎಎಸ್‌ ಅಧಿಕಾರಿಯೊಬ್ಬರನ್ನು ಮುಡಾ ಆಯುಕ್ತರನ್ನಾಗಿ ನೇಮಿಸಬೇಕು’ ಎಂಬ ಆಗ್ರಹ ಕೇಳಿಬಂದಿತ್ತು. ಆದರೆ, ನಂತರ ಕೆಎಎಸ್‌ ಅಧಿಕಾರಿ ರಘುನಂದನ್‌ ಅವರನ್ನು ಸರ್ಕಾರ ಆಯುಕ್ತರನ್ನಾಗಿ ನೇಮಿಸಿತ್ತು. ಈಗ ಅಧ್ಯಕ್ಷ ಹುದ್ದೆ ಖಾಲಿಯಾಗಿದೆ.

ADVERTISEMENT

ಮುಡಾ ಹಗರಣದ ಕುರಿತು ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ‘ಈ ಹೊತ್ತಿನಲ್ಲಿ ಹೊಸಬರ ನೇಮಕ ಅನುಮಾನ. ಅದರ ಬದಲಿಗೆ ಐಎಎಸ್‌ ದರ್ಜೆಯ ಅಧಿಕಾರಿ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ’ ಎನ್ನಲಾಗಿದೆ.

ಆಡಳಿತಾಧಿಕಾರಿ ನೇಮಕದ ಬಳಿಕ ಮುಡಾ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆಯೂ ನಡೆಯುವ ಸಾಧ್ಯತೆ ಇದೆ. ಕಚೇರಿಯಲ್ಲಿ 15–20 ವರ್ಷದಿಂದ ಬೀಡು ಬಿಟ್ಟಿರುವ ಅಧಿಕಾರಿಗಳು–ಸಿಬ್ಬಂದಿಯ ಪಟ್ಟಿ ಸಿದ್ಧವಾಗಿದ್ದು, ಬಹುತೇಕರ ವರ್ಗಾವಣೆಗೆ ಚಿಂತನೆ ನಡೆದಿದೆ.

2021ರಲ್ಲಿ ನಡೆದಿದ್ದ ಮುಡಾ ಸಭೆಯಲ್ಲಿ 175 ನಿವೇಶನ ಹಂಚಿಕೆಗೆ ತೀರ್ಮಾನವಾಗಿತ್ತು. ಅದರಲ್ಲಿ ಪಾರ್ವತಿ ಅವರು 14 ನಿವೇಶನ ವಾಪಸ್ ನೀಡಿದ್ದು ಉಳಿದ 161 ನಿವೇಶನಗಳನ್ನೂ ವಾಪಸ್ ಪಡೆಯಬೇಕು.
–ತನ್ವೀರ್‌ ಸೇಠ್‌, ಕಾಂಗ್ರೆಸ್ ಶಾಸಕ
50:50 ಅನುಪಾತದಲ್ಲಿ ಮುಡಾ 1400ಕ್ಕೂ ಹೆಚ್ಚು ನಿವೇಶನಗಳನ್ನು ನೀಡಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಎಲ್ಲ ನಿವೇಶನಗಳ ಮಂಜೂರಾತಿಯನ್ನು ಹಿಂಪಡೆಯಬೇಕು.
–ಟಿ.ಎಸ್. ಶ್ರೀವತ್ಸ, ಬಿಜೆಪಿ ಶಾಸಕ
ಮುಡಾದಲ್ಲಿ ಭ್ರಷ್ಟಾಚಾರ ಹೋಗಲಾಡಿಸಿ ಪಾರದರ್ಶಕ ಆಡಳಿತ ತರಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ಪೂರಕವಾದ ಎಲ್ಲ ಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ.
–ಡಾ. ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯ

50:50 ನಿವೇಶನ ಹಿಂಪಡೆಯಲು ಒತ್ತಾಯ

ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ಬದಲಿ ನಿವೇಶನಗಳನ್ನು ಹಿಂದಿರುಗಿಸಿದ ಬೆನ್ನಲ್ಲೇ ಈ ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳನ್ನು ಹಿಂಪಡೆಯಬೇಕು ಎನ್ನುವ ಆಗ್ರಹ ಜೋರಾಗಿದೆ.

ಆಡಳಿತ–ವಿರೋಧ ಪಕ್ಷಗಳ ಶಾಸಕರು ಪಕ್ಷಾತೀತವಾಗಿ ಈ ಬಗ್ಗೆ ಧ್ವನಿ ಎತ್ತುತ್ತಿರುವುದು ವಿಶೇಷ.

‘50:50 ಅನುಪಾತದಲ್ಲಿ ನಿವೇಶನ ಹಂಚಬೇಕೆಂದು ಮುಡಾದ ಯಾವ ಸಭೆಯಲ್ಲೂ ಅನುಮೋದನೆಯಾಗಿಲ್ಲ. ಹೀಗೆ ಹಂಚಿದರೆ ಪ್ರಾಧಿಕಾರ ಉಳಿಯುವುದಿಲ್ಲವೆಂದು ಅಂದೇ ಹೇಳಿದ್ದೆ. 2015ರಿಂದ ಈ ಅನುಪಾತ ಜಾರಿಯಲ್ಲಿದೆ. ಸರ್ಕಾರ ತಡೆಹಿಡಿದಿದ್ದರೂ ಕಾನೂನುಬಾಹಿರವಾಗಿ ನಿವೇಶನಗಳನ್ನು ಹಂಚಲಾಗಿದೆ. ಆ ಎಲ್ಲವನ್ನೂ ಹಿಂಪಡೆಯಬೇಕು’ ಎಂಬುದು ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್‌ ಅವರ ಒತ್ತಾಯ.

1400ಕ್ಕೂ ಹೆಚ್ಚು ನಿವೇಶನ: ‘2020ರಿಂದ 2024ರವರೆಗೆ 50:50 ಅನುಪಾತದಲ್ಲಿ 1400ಕ್ಕೂ ಹೆಚ್ಚು ನಿವೇಶನಗಳು ಹಂಚಿಕೆಯಾಗಿವೆ. ಅಷ್ಟೂ ಪ್ರಕರಣಗಳ ತನಿಖೆಯಾಗಬೇಕು. ಅಲ್ಲಿಯವರೆಗೆ ಎಲ್ಲ ನಿವೇಶನಗಳ ಮಂಜೂರಾತಿಯನ್ನು ಹಿಂಪಡೆಯಬೇಕು’ ಎಂಬುದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಅವರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.