ಮೈಸೂರು: ನಕಲಿ ಚಲನ್ ಬಳಸಿ ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಉಳಿಸಿ ವೇದಿಕೆಯು ಒತ್ತಾಯಿಸಿದೆ.
ಖಾತೆ ವರ್ಗಾವಣೆಗೆಂದು ಮುಡಾಕ್ಕೆ ಬರುತ್ತಿದ್ದ ಅರ್ಜಿದಾರರಿಂದ ಹಣ ಪಡೆಯುತ್ತಿದ್ದ ಮುಡಾದ ಕೆಲವು ಸಿಬ್ಬಂದಿ ತಾವೇ ಬ್ಯಾಂಕಿಗೆ ಹಣ ಕಟ್ಟುವುದಾಗಿ ನಂಬಿಸುತ್ತಿದ್ದರು. ಬಳಿಕ ನಕಲಿ ಬ್ಯಾಂಕ್ ಚಲನ್‌ಗಳನ್ನು ಸೃಷ್ಟಿಸಿ, ಬ್ಯಾಂಕಿನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ನಕಲಿ ಚಲನ್‌ಗಳಿಗೆ ಬ್ಯಾಂಕ್ ಸೀಲ್ ಹಾಕಿ ಮುಡಾಕ್ಕೆ ಸಲ್ಲಿಸುತ್ತಿದ್ದರು. ಆದರೆ, ಹಣ ಮಾತ್ರ ಜಮೆ ಆಗಿರಲಿಲ್ಲ.
ಹೀಗೆ ಒಟ್ಟು 92 ನಕಲಿ ಚಲನ್‌ಗಳು ಪತ್ತೆಯಾಗಿದ್ದು, ₹1.95 ಕೋಟಿ ಮೊತ್ತದ ಅಕ್ರಮ ಕಂಡುಬಂದ ಕಾರಣದಿಂದ 2023ರ ನ.8ರಂದು ಮುಡಾದ ಆಗಿನ ತಹಶೀಲ್ದಾರ್ ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಗ್ರಾಹಕರ ವಿರುದ್ಧವೇ ದೂರು ದಾಖಲಾಗಿದ್ದು, ನಂತರದಲ್ಲಿ ಮುಡಾ ಹಾಗೂ ಬ್ಯಾಂಕ್ ಆಫ್ ಬರೋಡಾದ ಹೊರಗುತ್ತಿಗೆ ಸಿಬ್ಬಂದಿ ಈ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಮುಡಾದ ‘ಡಿ’ ಗ್ರೂಪ್ ನೌಕರ ಟಿ.ಎಸ್.ನಂದನ್, ಹೊರಗುತ್ತಿಗೆ ನೌಕರ ಬಿ.ತರುಣ್ ಕುಮಾರ್ ಹಾಗೂ ಬ್ಯಾಂಕ್ ಆಫ್ ಬರೋಡದ ಹೊರಗುತ್ತಿಗೆ ನೌಕರ ಸುನಿಲ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ನಂತರದಲ್ಲಿ ಈ ಪ್ರಕರಣವು ಸಿಸಿಬಿಗೆ ವರ್ಗಾವಣೆ ಆಗಿತ್ತು.
‘ದೂರು ದಾಖಲಾಗಿ ವರ್ಷ ಕಳೆದರೂ ತನಿಖೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನಕಲಿ ಚಲನ್ ವಿಚಾರದಲ್ಲಿ ₹5 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವ ಶಂಕೆ ಇದೆ. ಹೀಗಾಗಿ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕು. ಇಲ್ಲವೇ ಜಾರಿ ನಿರ್ದೇಶನಾಲಯವು ಈ ಪ್ರಕರಣದ ತನಿಖೆ ನಡೆಸಬೇಕು’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಉಳಿಸಿ ವೇದಿಕೆಯ ಗಂಗರಾಜು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.