ADVERTISEMENT

ಮುಡಾ ಸದಸ್ಯರಿಂದಲೇ ‘ಅಕ್ರಮ’

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ- ಮುಡಾಗೇ ವಂಚನೆ !

ಆರ್.ಜಿತೇಂದ್ರ
Published 8 ಜುಲೈ 2024, 0:47 IST
Last Updated 8 ಜುಲೈ 2024, 0:47 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ- ಪ್ರಜಾವಾಣಿ ಚಿತ್ರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ- ಪ್ರಜಾವಾಣಿ ಚಿತ್ರ   

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಮುನ್ನಡೆಸಲು ಇರುವ ಸಮಿತಿಯ ಸದಸ್ಯರೇ ‘ಅಕ್ರಮ’ ನಡೆಸಿ ವಂಚಿಸಿದ ಬಗ್ಗೆ ದೂರುಗಳು ದಾಖಲಾಗಿವೆ.

ವಿಧಾನಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಮುಡಾ ಸಮಿತಿ ಸದಸ್ಯರೂ ಹೌದು. ಮೈಸೂರು ತಾಲ್ಲೂಕಿನ ಕಸಬಾ ಹೋಬಳಿಯ ಶ್ರೀರಾಂಪುರದಲ್ಲಿ ಭವ್ಯ ಭಾರತ ಹೌಸಿಂಗ್‌ ಕೋ ಆಪರೇಟಿವ್‌ ಸೊಸೈಟಿಯು 2001ರಲ್ಲಿ ವಸತಿ ಬಡಾವಣೆ ನಿರ್ಮಿಸಿದ್ದು, ಮಂಜೇಗೌಡ ಈ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ಈ ಬಡಾವಣೆಯಲ್ಲಿ ಉದ್ಯಾನಕ್ಕೆ ನಿಗದಿಪಡಿಸಿದ ಸ್ಥಳವನ್ನು ಸುಳ್ಳು ದಾಖಲೆ ಸೃಷ್ಟಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ಆರೋಪ ಸೊಸೈಟಿಯ ಮೇಲಿದೆ. ಈ ಕುರಿತು ಆರ್‌ಟಿಐ ಕಾರ್ಯಕರ್ತ ಎನ್‌. ಗಂಗರಾಜು 2024ರ ಫೆ.28ರಂದು ಮುಡಾ ಆಯುಕ್ತರಿಗೆ ದೂರು ಸಲ್ಲಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದರು. ಆ ಪ್ರತಿ ‘ಪ್ರಜಾವಾಣಿ’ ಲಭ್ಯವಾಗಿದೆ.

ಏನಿದೆ ದೂರಿನಲ್ಲಿ?:

‘ಶ್ರೀರಾಂಪುರ ಗ್ರಾಮದ ಸರ್ವೆ ಸಂಖ್ಯೆ 18/2, 19/2, 52/1, 2ರಲ್ಲಿ ಭವ್ಯ ಭಾರತ ಸೊಸೈಟಿಯು ವಸತಿ ಬಡಾವಣೆ ರಚಿಸಿದೆ. ಈ ಬಡಾವಣೆಯ ನಕ್ಷೆಗೆ ಪ್ರಾಧಿಕಾರವು 2001ರ ಆ. 8ರಂದು ನಕ್ಷೆ ಅನುಮೋದನೆ ನೀಡಿದೆ. ಆ ನಕ್ಷೆಯಲ್ಲಿ ಒಟ್ಟು ಬಡಾವಣೆಯ ಶೇ 50ರಷ್ಟು ಭೂಮಿಯನ್ನು ಸಿ.ಎ. ನಿವೇಶನ, ಉದ್ಯಾನ ಹಾಗೂ ರಸ್ತೆಗಾಗಿ ನಿಗದಿಪಡಿಸಲಾಗಿದೆ. ಉದ್ಯಾನದ ಜಾಗವನ್ನು ಸೊಸೈಟಿಯು ಮುಡಾಕ್ಕೆ ನೋಂದಣಿ ಮಾಡಿಕೊಟ್ಟಿದೆ. ಆದರೆ, ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇದೇ ಉದ್ಯಾನದ ಜಾಗವನ್ನು ‘58ಎಯಿಂದ ಎಚ್‌’ವರೆಗೆ ಎಂಟು ನಿವೇಶನಗಳನ್ನಾಗಿ ಮಾಡಿ ನೋಂದಣಿ ಪತ್ರದ ಮೂಲಕ ಅನ್ಯರಿಗೆ ನೋಂದಣಿ ಮಾಡಿಕೊಡಲಾಗಿದೆ. ಹೀಗೆ ಅಕ್ರಮವಾಗಿ ನೋಂದಣಿ ಆಗಿರುವ ಎಲ್ಲ ನಿವೇಶನಗಳ ದಾಖಲೆಗಳನ್ನು ರದ್ದುಪಡಿಸಬೇಕು. ಜಾಗವನ್ನು ಮುಡಾ ವಶಕ್ಕೆ ಪಡೆಯಬೇಕು. ಆ ಬಡಾವಣೆಯಲ್ಲಿನ ಎಲ್ಲ ನಿವೇಶನಗಳ ಹಕ್ಕು ಬದಲಾವಣೆ ಆಗದಂತೆ ನೋಡಿಕೊಳ್ಳಬೇಕು’ ಎಂಬುದು ದೂರಿನಲ್ಲಿದೆ.

ADVERTISEMENT

‘ಉದ್ಯಾನದ ಜಾಗದಲ್ಲಿ ತಲಾ 40X60 ಚ.ಅಡಿ ಅಳತೆಯ 8 ನಿವೇಶನಗಳನ್ನು ನಕಲಿ ದಾಖಲೆ ಮೂಲಕ ನೋಂದಣಿ ಮಾಡಿಕೊಟ್ಟಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಕೋಟ್ಯಂತರ ರೂಪಾಯಿಗಳಷ್ಟಿದೆ. ಜನಪ್ರತಿನಿಧಿಯಾಗಿ ಮುಡಾಕ್ಕೆ ವಂಚಿಸಿದ್ದಾರೆ. ಮಂಜೇಗೌಡರ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಪ್ರಕರಣವು ಸದ್ಯದಲ್ಲೇ ವಿಚಾರಣೆಗೆ ಬರಲಿದೆ’ ಎಂದು ದೂರುದಾರ ಎನ್‌. ಗಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನಷ್ಟು ಹೆಸರು?:

ಮುಡಾ ‘ಫಲಾನುಭವಿ’ ಪಟ್ಟಿಯಲ್ಲಿ ಮೂರು ಪಕ್ಷಗಳ ಕೆಲವು ಜನಪ್ರತಿನಿಧಿಗಳು ಹಾಗೂ ಮುಖಂಡರ ಹೆಸರು ಹರಿದಾಡುತ್ತಿದೆ. ಪ್ರಭಾವಿಗಳು ತಮ್ಮ ಆಪ್ತರಿಗೆ ಶೇ 50:50, ಸೆಟ್ಲ್‌ಮೆಂಟ್ ಡೀಡ್‌ ಮೊದಲಾದ ರೂಪದಲ್ಲಿ ನಿವೇಶನ ಕೊಡಿಸಲು ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯೆಗೆ ಮಂಜೇಗೌಡ ಅವರು ಕರೆ ಸ್ವೀಕರಿಸಲಿಲ್ಲ, ಸಂದೇಶಕ್ಕೂ ಪ್ರತಿಕ್ರಿಯಿಸಲಿಲ್ಲ.

ಮುಡಾ ಸಮಿತಿ ರದ್ದು ಚಿಂತನೆ: ಮಹದೇವಪ್ಪ

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಹಾಲಿ ಇರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರದ್ದುಪಡಿಸಲು ಚಿಂತನೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರಕವಾಗಿ ಸ್ಪಂದಿಸಿದ್ದಾರೆ’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

‘ಮುಡಾದ ಈಗಿನ ಸಮಿತಿಯಲ್ಲಿ 13ಕ್ಕೂ ಹೆಚ್ಚು ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳೂ ಇದ್ದಾರೆ. ಹೆಚ್ಚು ಜನರ ಬದಲಿಗೆ ಈ ಹಿಂದೆ ಇದ್ದಂತೆ 3–4 ಜನರ ಸಮಿತಿಯಷ್ಟೇ ಇರಲಿ ಎಂದು ಸಲಹೆ ನೀಡಿದ್ದೇನೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮುಡಾದಲ್ಲಿ ಶೇ 50-50 ಅನುಪಾತದಲ್ಲಿ ಬದಲಿ ನಿವೇಶನ ಪಡೆದವರ ಪಟ್ಟಿ ಬಿಡುಗಡೆ ಮಾಡಲಾಗುವುದು. ಯಾವ ಪಕ್ಷದವರೇ ಇರಲಿ, ಅಧಿಕಾರಿ ಇರಲಿ, ಪ್ರಭಾವಿ ಇರಲಿ. ಅವರ ಪಟ್ಟಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಜಾಹೀರಾತು ಮೂಲಕ ಬಹಿರಂಗಪಡಿಸಲಾಗುವುದು’ ಎಂದರು.

‘ಕೆಸರೆ ಗ್ರಾಮದ ಸರ್ವೆ ನಂ.464ರ 3 ಎಕರೆ 16 ಗುಂಟೆ ಜಮೀನನ್ನು 1985ರಲ್ಲಿ ಜವರ ಎಂಬುವರು ಜಿಲ್ಲಾಧಿಕಾರಿಯಿಂದ ಹರಾಜಿನಲ್ಲಿ ₹100ಕ್ಕೆ ಖರೀದಿಸಿದ್ದಾರೆ. ನಂತರದಲ್ಲಿ ಈ ಜಮೀನು ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಅವರಿಗೆ ಹಾಗೂ ಅವರಿಂದ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ವರ್ಗಾವಣೆ ಆಗಿದೆ. ಹೀಗಾಗಿ ಇದು ದಲಿತ ಸಮುದಾಯಕ್ಕೆ ಸರ್ಕಾರ ನೀಡಿದ ‘ಗ್ರ್ಯಾಂಟ್ ಲ್ಯಾಂಡ್’ ಅಲ್ಲ. ಪಿಟಿಸಿಎಲ್‌ ಕಾಯ್ದೆ ಅಡಿ ಬರುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಪಾರ್ವತಿ ಅವರಿಗೆ ವಿಜಯನಗರದಲ್ಲಿ ನಿವೇಶನ ನೀಡಿರುವುದನ್ನು ಸಮರ್ಥಿಸಿಕೊಂಡರು.

ಪತ್ರಕರ್ತರ ಮೇಲೆ ಸಿಟ್ಟು: ‘ಮುಡಾ ಅಕ್ರಮವನ್ನು ಸಿಬಿಐಗೆ ವಹಿಸಬೇಕು’ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಟ್ಟಾದ ಮಹದೇವಪ್ಪ, ‘ಇಲಿ ಹೋಯಿತು ಎಂದರೂ ಸಿಬಿಐಗೆ ಹಾಕಿ, ಕೋತಿ ಹೋಯಿತು ಎಂದರೂ ಸಿಬಿಐಗೆ ಹಾಕಿ ಅಂತ ಹೇಳುವುದೇಕೆ? ನಮ್ಮ ನೆಲದ ಪೊಲೀಸರ ಮೇಲೆ ನಂಬಿಕೆ ಇಲ್ಲವೇ’ ಎಂದು ಮರು ಪ್ರಶ್ನಿಸಿದರು.

‘ಬಿಜೆಪಿಯವರಿಗೆ ಏಕಾಏಕಿ ಸಿಬಿಐ ಮೇಲೆ ಪ್ರೀತಿ ಬಂದಿದೆ. ಅವರು ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದರು?’ ಎಂದು ಕೇಳಿದರು.

ಶಾಸಕರ ಫೈಲ್‌ಗಳೇ ಹೆಚ್ಚು– ಎಸ್‌ಟಿಎಸ್‌

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆಯುತ್ತಿದ್ದ ಪ್ರತಿ ಸಭೆಯಲ್ಲೂ ಆಗಿನ ಸ್ಥಳೀಯ ಶಾಸಕರ ಫೈಲ್‌ಗಳೇ ಇರುತ್ತಿದ್ದವು ಹಾಗೂ ಚರ್ಚೆಯಾಗದೆ ಪಾಸ್ ಆಗುತ್ತಿದ್ದವು’ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಹಾಲಿ ಶಾಸಕ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಮುಡಾ ಸಭೆಯ ಬಹುತೇಕ ವಿಷಯಗಳು ಶಾಸಕರಿಗೆ ಸೇರಿದವೇ ಆಗಿರುತ್ತಿದ್ದವು. ಈ ಮಟ್ಟಕ್ಕೆ ಇಲ್ಲಿನ ಶಾಸಕರು ಲಾಬಿ ಮಾಡುತ್ತಾರೆ. ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ವಿಧಾನಪರಿಷತ್ ಸದಸ್ಯರು ವಾಸ ಸ್ಥಳವನ್ನು ಮೈಸೂರು ಎಂದು ತೋರಿಸುತ್ತಾರೆ’ ಎಂದು ದೂರಿದರು.

‘ನನ್ನ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಮುಡಾದಲ್ಲಿ ಒಂದೇ ಒಂದು ನಿವೇಶನ ಪಡೆದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡು ತ್ತೇನೆ. ನಾನು ನಿವೇಶನ ತೆಗದುಕೊಂಡಿಲ್ಲ. ಒತ್ತಡ ಹೇರಿ ಯಾರಿಗೂ ಕೊಡಿ ಸಿಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ನನ್ನ ಹೆಸರು ತರಬೇಡಿ’ ಎಂದರು.

‘ನಾನು ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ, ಮುಡಾದಲ್ಲಿನ ಅಕ್ರಮ ಗಮನಕ್ಕೆ ಬಂದಿತ್ತು. ಆಗಿನ ಆಯುಕ್ತರು ಸಭೆ ಮಾಡದೆ ನಿವೇಶನಗಳನ್ನು ಕೊಟ್ಟಿದ್ದಾರೆ. ಶೇ 50:50 ಅನುಪಾತದಡಿ ಕೊಡುವಾಗ ಸಭೆಗೆ ತಂದು ಚರ್ಚಿಸಬೇಕಿತ್ತು. ಇದ್ಯಾವ ನಿಯಮಗಳನ್ನೂ ಅನುಸರಿಸಿಲ್ಲ. ಆದ್ದರಿಂದ ಆಯುಕ್ತರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಹೇಳಿದ್ದೆ. ಆದರೆ, ಜಾತಿ ಪ್ರಭಾವದಿಂದ ಉಳಿದುಬಿಟ್ಟರು. ಆಗಲೇ ಸರಿಯಾದ ಕ್ರಮ ಆಗಿದ್ದರೆ ಈಗ ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿವೇನೋ’ ಎಂದರು. ‘ಈಗಲಾದರೂ ಸಮರ್ಪಕ ತನಿಖೆ ನಡೆದು ವ್ಯವಸ್ಥೆ ಬದಲಾಗಲಿ’ ಎಂದು ಆಶಿಸಿದರು.

ಸಿ.ಎನ್. ಮಂಜೇಗೌಡ ಅಧ್ಯಕ್ಷರಾಗಿರುವ ಸೊಸೈಟಿಯು ಉದ್ಯಾನ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನಾಗಿ ಮಾರಿದೆ. ಈ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದೇನೆ
ಎನ್. ಗಂಗರಾಜು, ದೂರುದಾರ

ಅನುಕೂಲಕ್ಕೆ ತಕ್ಕಂತೆ ‘ಸರ್ಕಾರಿ ಸ್ಕೀಂ’ ಬಳಕೆ: ಬೊಮ್ಮಾಯಿ ಆರೋಪ

ಗದಗ: ‘ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವುದೇ ತಪ್ಪುಗಳು ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಪ್ಪು ಮಾಡಿಲ್ಲ ಎಂದಾದರೆ ಈ ಪ್ರಕರಣವನ್ನು ಸಿಬಿಐ ಅಥವಾ ಒಬ್ಬರು ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಆಗ ಸತ್ಯ ಹೊರಬರಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದಲ್ಲಿ ಸಾಕಷ್ಟು ಸ್ಕೀಂಗಳು (ಯೋಜನೆ) ಇರುತ್ತವೆ. ಜಮೀನು ಪಡೆದುಕೊಳ್ಳಲು ಬೇರೆ ಬೇರೆ ಸರ್ಕಾರದಲ್ಲಿ ಬೇರೆ ಬೇರೆ ಸ್ಕೀಂಗಳು ಇರುತ್ತವೆ. ಅದನ್ನು ನ್ಯಾಯಸಮ್ಮತವಾಗಿ ಪಡೆದುಕೊಳ್ಳಲು ನಮ್ಮ ತಕರಾರಿಲ್ಲ. ಆದರೆ, ಈ ಪ್ರಕರಣದಲ್ಲಿ ಈ ಯೋಜನೆ ದುರುಪಯೋಗ ಮಾಡಿಕೊಂಡಿರುವ ಅಂಶ ಇದೆ. ಅದನ್ನು ತಮಗೆ ಹೇಗೆ ಬೇಕೋ ಆ ರೀತಿ ಬದಲಾವಣೆ ಮಾಡಿಕೊಳ್ಳಲಾಗಿ
ದೆಯೋ ಇಲ್ಲವೋ ಎಂಬುದು ತನಿಖೆಯಿಂದ ಹೊರಬರಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.