ADVERTISEMENT

ಮೈಸೂರು | ಮುಡಾ ಸಭೆ: 50:50 ನಿವೇಶನ ಹಿಂಪಡೆಯಲು ಒಲವು

ವಿಚಾರಣಾ ಆಯೋಗದ ವರದಿ ಆಧರಿಸಿ ಕ್ರಮಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 23:45 IST
Last Updated 7 ನವೆಂಬರ್ 2024, 23:45 IST
<div class="paragraphs"><p>ಮುಡಾ ಪ್ರಭಾರ ಅಧ್ಯಕ್ಷ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ ವಿವೇಕಾನಂದ, ಶಾಸಕರಾದ ದರ್ಶನ್‌ ಧ್ರುವನಾರಾಯಣ, ಕೆ. ಹರೀಶ್‌ ಗೌಡ, ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ, ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಜಿ.ಟಿ. ದೇವೇಗೌಡ, ಮುಡಾ ಆಯುಕ್ತ ಕೆ. ರಘುನಂದನ್ ಹಾಗೂ ಅಧಿಕಾರಿಗಳು ಪಾಲ್ಗೊಂಡರು</p></div>

ಮುಡಾ ಪ್ರಭಾರ ಅಧ್ಯಕ್ಷ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ ವಿವೇಕಾನಂದ, ಶಾಸಕರಾದ ದರ್ಶನ್‌ ಧ್ರುವನಾರಾಯಣ, ಕೆ. ಹರೀಶ್‌ ಗೌಡ, ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ, ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಜಿ.ಟಿ. ದೇವೇಗೌಡ, ಮುಡಾ ಆಯುಕ್ತ ಕೆ. ರಘುನಂದನ್ ಹಾಗೂ ಅಧಿಕಾರಿಗಳು ಪಾಲ್ಗೊಂಡರು

   

– ಪ್ರಜಾವಾಣಿ ಚಿತ್ರ

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾದ ಎಲ್ಲ ನಿವೇಶನಗಳನ್ನು ಹಿಂಪಡೆಯುವ ಕುರಿತು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಒಲವು ವ್ಯಕ್ತವಾಗಿದ್ದು, ವಿಚಾರಣಾ ಆಯೋಗದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ADVERTISEMENT

ಹತ್ತು ತಿಂಗಳ ಬಳಿಕ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್‌ ಗೌಡ, ಎ.ಎಚ್‌. ವಿಶ್ವನಾಥ್ ಸೇರಿದಂತೆ ಹೆಚ್ಚಿನವರು, ‘50:50 ಅನುಪಾತದಲ್ಲಿ ಹಂಚಿಕೆ ಆಗಿರುವ ಎಲ್ಲ ನಿವೇಶನಗಳನ್ನೂ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು. ‘ಅಕ್ರಮವಾಗಿ ಹಂಚಿಕೆಯಾದ ನಿವೇಶನಗಳನ್ನು ವಾಪಸ್ ಪಡೆಯುವುದು ಸೂಕ್ತ. ಆದರೆ, ಕಾನೂನುಬದ್ಧವಾಗಿ ಪಡೆದವರಿಗೆ ಅನ್ಯಾಯ ಆಗದಂತೆ ನಿರ್ಧಾರ ಕೈಗೊಳ್ಳಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.

‘ನ್ಯಾ. ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ಈ ವಿಚಾರವಾಗಿ ವಿಚಾರಣೆ ನಡೆಸುತ್ತಿದೆ. ಆಯೋಗದ  ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳೋಣ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಡಾ ಪ್ರಭಾರ ಅಧ್ಯಕ್ಷ ಜಿ.ಲಕ್ಷ್ಮೀಕಾಂತ ರೆಡ್ಡಿ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಸಭೆ: ‘172 ವಿಷಯಗಳನ್ನು ಮಂಡಿಸಲಾಗಿತ್ತು. ಇದರಲ್ಲಿ 60 ವಿಷಯಗಳನ್ನು ಹೊರತುಪಡಿಸಿ ಉಳಿದವುಗಳನ್ನು ಅನುಮೋದಿಸಲಾಯಿತು. 50:50 ಅನುಪಾತದಲ್ಲಿ ಹಂಚಿಕೆಯಾದ ನಿವೇಶನಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಸದಸ್ಯರು ಒತ್ತಾಯಿಸಿದೆವು. ತನಿಖಾ ಆಯೋಗದ ವರದಿ ಆಧರಿಸಿ ತೀರ್ಮಾನಿಸೋಣ ಎಂದು ಅಧ್ಯಕ್ಷರು ಹೇಳಿದ್ದು, ಅದನ್ನು ಒಪ್ಪಿದ್ದೇವೆ. ಇದೇ 22 ಅಥವಾ 24ರಂದು ಮತ್ತೊಂದು ಸಭೆ ನಡೆಯಲಿದೆ’ ಎಂದು ಶಾಸಕ ಕೆ. ಹರೀಶ್ ಗೌಡ ಸಭೆಯ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದರು.

‘ನಗರದ ಆಂದೋಲನ ವೃತ್ತದ ಬಳಿ 17 ಎಕರೆಯಲ್ಲಿ ನಕ್ಷೆ ಅನುಮೋದನೆಯೇ ಇಲ್ಲದೇ ಅಕ್ರಮ ಬಡಾವಣೆ ರಚಿಸಿ ನಿವೇಶನ ಹಂಚಲಾಗಿದೆ. ಅದು ಅನಧಿಕೃತವಾಗಿದ್ದು, ವಾಪಸ್ ಪಡೆಯುವ ಕುರಿತೂ ಸಭೆಯಲ್ಲಿ ಚರ್ಚಿಸಿದ್ದೇವೆ. 50:50 ಅನುಪಾತದಲ್ಲಿ ಅಕ್ರಮ ಎಸಗಿರುವ ಆಯುಕ್ತರು ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅಧ್ಯಕ್ಷರನ್ನು ಕೋರಿದ್ದೆವು. ಅಧ್ಯಕ್ಷರು ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ’ ಎಂದು ಹೇಳಿದರು.

ಸಹಿಯೇ ಮಾಡದ ದಿನೇಶ್‌: ‘ಇದೇ ವರ್ಷ ಜನವರಿಯಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಅಲ್ಲಿ ಕೈಗೊಳ್ಳಲಾದ ನಿರ್ಣಯಗಳಿಗೆ ಅಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಸಹಿಯೇ ಮಾಡಿರಲಿಲ್ಲ. ಹೀಗಾಗಿ ಗುರುವಾರದ ಸಭೆಯಲ್ಲಿ ಮತ್ತೊಮ್ಮೆ ಅದೇ ವಿಷಯಗಳನ್ನು ಚರ್ಚಿಸಿ ನಿರ್ಣಯಿಸಲಾಯಿತು’ ಎಂದು ಮುಡಾ ಮೂಲಗಳು ತಿಳಿಸಿವೆ.

ಬೆಳಿಗ್ಗೆ 11ಕ್ಕೆ ಆರಂಭವಾದ ಸಭೆ ಮಧ್ಯಾಹ್ನ 3ಕ್ಕೆ ಮುಕ್ತಾಯಗೊಂಡಿತು. ಡಾ.ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್‌ನ ಐವರು ಶಾಸಕರು–ವಿಧಾನಪರಿಷತ್ ಸದಸ್ಯರು ಗೈರು ಹಾಜರಾದರು.

ಪ್ರತಿಭಟನೆ: ‘ಕಾಟಾಚಾರಕ್ಕೆ ಸಭೆ ನಡೆಸಲಾಗುತ್ತಿದೆ’ ಎಂದು ದೂರಿ ಮುಡಾದ ನಿವೃತ್ತ ಯೋಜನಾ ಸಹಾಯಕ ನಿರ್ದೇಶಕ ಪಿ.ಎಸ್. ನಟರಾಜು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮುಡಾ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಮುಡಾ ವಿವಾದದ ಬಳಿಕ ಮೊದಲ ಸಭೆ ನಾಲ್ಕು ಗಂಟೆ ಕಾಲ ವಿವಿಧ ವಿಷಯಗಳ ಚರ್ಚೆ ನಿವೇಶನ ವಾಪಸ್‌ಗೆ ಪಕ್ಷಾತೀತವಾಗಿ ಬೆಂಬಲ
ಅಕ್ರಮ ನಿವೇಶನಗಳ ರದ್ದತಿಗೆ ಬಹುತೇಕ ಸದಸ್ಯರು ಒತ್ತಾಯಿಸಿದೆವು. ದೇಸಾಯಿ ಆಯೋಗವು ತನಿಖೆ ನಡೆಸುತ್ತಿದ್ದು ವರದಿ ಆಧರಿಸಿ ಕ್ರಮ ಕೈಗೊಳ್ಳೋಣ ಎಂದು ಅಧ್ಯಕ್ಷರು ಹೇಳಿದ್ದಾರೆ
ಟಿ.ಎಸ್. ಶ್ರೀವತ್ಸ ಶಾಸಕ
50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆ ಆಗಿರುವ ನಿವೇಶನಗಳನ್ನು ರದ್ದು ಮಾಡಬೇಕು. ಕಾನೂನಾತ್ಮಕವಾಗಿ ಪಡೆದವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು
ಜಿ.ಟಿ. ದೇವೇಗೌಡ ಶಾಸಕ
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವ್ಯವಸ್ಥಿತವಾಗಿ ಸಭೆ ನಡೆದಿದ್ದು 50:50 ನಿವೇಶನಗಳ ವಾಪಸ್‌ಗೆ ಸಲಹೆ ನೀಡಿದ್ದೇವೆ. ಹಿಂದಿನ ಆಯುಕ್ತರಾದ ನಟೇಶ್‌–ದಿನೇಶ್‌ ಅಕ್ರಮಗಳ ಕುರಿತು ತನಿಖೆಗೆ ಒತ್ತಾಯಿಸಿದೆವು
ಎಚ್‌. ವಿಶ್ವನಾಥ್‌ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.