ADVERTISEMENT

ಎಚ್. ವಿಶ್ವನಾಥ್‌ ಪತ್ನಿಗೆ ಬದಲಿ ನಿವೇಶನ: ಮುಡಾ ಅಧ್ಯಕ್ಷ ಕೆ. ಮರಿಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 11:45 IST
Last Updated 8 ಜುಲೈ 2024, 11:45 IST
<div class="paragraphs"><p>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ</p></div>

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ

   

ಮೈಸೂರು: ‘ ಮುಡಾ ಬಗ್ಗೆ ದಾಖಲೆರಹಿತವಾಗಿ ಮಾತನಾಡುತ್ತಿರುವ ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಪತ್ನಿ ಶಾಂತಮ್ಮ ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ಬದಲಿ ನಿವೇಶನ ಪಡೆದುಕೊಂಡಿದ್ದು, ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಿಲ್ಲ’ ಎಂದು ಮುಡಾ ಅಧ್ಯಕ್ಷ ಕೆ. ಮರಿಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ ಶಾಂತಮ್ಮ ಅವರು ಮುಡಾಕ್ಕೆ ಅರ್ಜಿ ಸಲ್ಲಿಸಿ ದೇವನೂರು ಮೂರನೇ ಹಂತದಲ್ಲಿ 40X60 ಚ.ಅಡಿ ಅಳತೆಯ ‘2525’ ಸಂಖ್ಯೆಯ ನಿವೇಶನ ಪಡೆದುಕೊಂಡಿದ್ದರು. ನಂತರದಲ್ಲಿ ಅದನ್ನು ರಿಂಗ್‌ ರಸ್ತೆಗೆ ಸಮೀಪ ಇರುವ 307 ಸಂಖ್ಯೆಯ ನಿವೇಶನಕ್ಕೆ ಬದಲಿಸಿಕೊಂಡಿದ್ದಾರೆ. ಅಂತಹವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಕಾನೂನಾತ್ಮಕವಾಗಿಯೇ ನಿವೇಶನ ಹಂಚಿಕೆ ಆಗಿದೆ. ಇದೇ ರೀತಿಯ ಪ್ರಕರಣವೊಂದರಲ್ಲಿ ನ್ಯಾಯಾಲಯವು ನೀಡಿದ ಆದೇಶವನ್ನು ಉಲ್ಲೇಖಿಸಿ ಮುಡಾ ಈ ನಿರ್ಣಯ ಕೈಗೊಂಡಿತ್ತು’ ಎಂದು ಮರಿಗೌಡ ಹಾಗೂ ಶಾಸಕರಾದ ಕೆ. ಹರೀಶ್‌ ಗೌಡ, ರಮೇಶ್ ಬಂಡಿಸಿದ್ದೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಡಿ. ತಿಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

‘50:50 ಅನುಪಾತದಲ್ಲಿ ಎಷ್ಟು ನಿವೇಶನಗಳನ್ನು ಹಂಚಲಾಗಿದೆ ಎಂಬ ಮಾಹಿತಿಯನ್ನು ಮುಂದಿನ ಮುಡಾ ಸಭೆಗೆ ಇಡಲಾಗುವುದು. ಯಾರೇ ಅಕ್ರಮ ಎಸಗಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದರು.

‘ಎಸ್‌.ಟಿ. ಸೋಮಶೇಖರ್ ಆರೋಪಿಸಿರುವಂತೆ ಯಾವ ಶಾಸಕರೂ ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬೀರಿಲ್ಲ. ಈ ವರ್ಷ ಜನವರಿಯಲ್ಲೇ ಮುಡಾ ಅಕ್ರಮಗಳ ಕುರಿತು ಎಲ್ಲ ಶಾಸಕರು ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಮುಡಾದ ಈಗಿನ ಸಮಿತಿಯನ್ನು ರದ್ದುಪಡಿಸಿ ಕೇವಲ 3–4 ಸದಸ್ಯರ ಸಮಿತಿ ರಚಿಸಲು ಮುಂದಾದರೆ ನಾವು ಸ್ವಾಗತಿಸುತ್ತೇವೆ’ ಎಂದು ಸುದ್ದಿಗೋಷ್ಠಿಯಲ್ಲಿದ್ದ ಶಾಸಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.