ADVERTISEMENT

ಮುಡಾ: ಪ್ರತಿ ತಿಂಗಳೂ ಸಭೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 13:22 IST
Last Updated 5 ಜುಲೈ 2024, 13:22 IST

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ವಿವಿಧ ಅಭಿವೃದ್ಧಿ ಯೋಜನೆಗಳು, ಸಾರ್ವಜನಿಕ ಸೌಲಭ್ಯಗಳು ಮತ್ತು ಖಾಸಗಿ ವಸತಿ ಯೋಜನೆಗಳ ಅನುಮೋದನೆಗೆ ಪ್ರತಿ ತಿಂಗಳೂ ಸಾಮಾನ್ಯ ಸಭೆಗಳನ್ನು ನಡೆಸುವಂತೆ ಕ್ರೆಡಾಯ್ ಮೈಸೂರು ಪದಾಧಿಕಾರಿಗಳು ಅಧ್ಯಕ್ಷ ಕೆ.ಮರೀಗೌಡ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

‘ಈ ಹಿಂದಿನಿಂದಲೂ ನಿಗದಿಯಂತೆ ಸಭೆ ನಡೆಸಿಕೊಂಡು ಬರಲಾಗಿದೆ. ಇತ್ತೀಚಿಗೆ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸುವ ಬಗ್ಗೆ ಸರ್ಕಾರವು ತೆಗೆದುಕೊಂಡಿರುವ ತೀರ್ಮಾನವು ಸ್ವಾಗತಾರ್ಹವಾಗಿದೆ. ಆದರೆ, ಈ ಪ್ರಕರಣಗಳ ತನಿಖೆಯಾಗಿ ಇತ್ಯರ್ಥಗೊಳ್ಳುವವರೆಗೆ ಪ್ರಾಧಿಕಾರದ ಸಾಮಾನ್ಯ ಸಭೆಗಳನ್ನು ನಡೆಸದಂತೆ ನಿರ್ದೇಶನ ನೀಡಬಾರದು’ ಎಂದು ಕೋರಿದರು.

‘ಅಭಿವೃದ್ಧಿ ಯೋಜನೆಗಳ ಅನುಮೋದನೆ ಮತ್ತು ವಿವಿಧ ಖಾಸಗಿ ಬಡಾವಣೆ ಮತ್ತು ವಸತಿ ಸಮುಚ್ಚಯಗಳ ಅನುಮೋದನೆ, ಅಭಿವೃದ್ಧಿ ಹಂತದಲ್ಲಿರುವ ಯೋಜನೆಗಳಲ್ಲಿರುವ ನಿವೇಶನ ಮತ್ತು ಮನೆಗಳ ಬಿಡುಗಡೆ ಮತ್ತು ಇನ್ನಿತರ ಸಾಮಾನ್ಯ ಆಡಳಿತಾತ್ಮಕ ವಿಚಾರಗಳ ಬಗ್ಗೆ ಸಭೆ ನಡೆಸಬೇಕು. ಇಲ್ಲದಿದ್ದಲ್ಲಿ ಈಗಾಗಲೇ ಸಾರ್ವತ್ರಿಕ ಚುನಾವಣೆ, ಅಧ್ಯಕ್ಷರ ನೇಮಕಾತಿ ಮೊದಲಾದ ಕಾರಣಗಳಿಂದಾಗಿ ಸಭೆ ವಿಳಂಬವಾಗಿದ್ದು, ತೊಂದರೆಗೆ ಒಳಗಾಗಿರುವ ಖಾಸಗಿ ವಸತಿ ಬಡಾವಣೆ ಅಭಿವೃದ್ಧಿದಾರರು ಮತ್ತು ಅಪಾರ್ಟ್‌ಮೆಂಟ್‌ ಅಭಿವೃದ್ಧಿದಾರರಿಗೆ ಅಪಾರ ನಷ್ಟ ಉಂಟಾಗುತ್ತದೆ. ಜತೆಗೆ, ಖರೀದಿದಾರರು ಆತಂಕಗೊಂಡು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ’ ಎಂದು ಅಧ್ಯಕ್ಷ ಶ್ರೀಹರಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.