ADVERTISEMENT

ಮುಡಾ ಹಗರಣ: ಸರ್ಕಾರದ ನಿರ್ದೇಶನದ ಬಳಿಕವೂ ಬದಲಿ ನಿವೇಶನ ಹಂಚಿಕೆ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ: ಹಲವು ಲೋಪ, ನಷ್ಟ ಉಲ್ಲೇಖಿಸಿದ್ದ ಡಿಸಿ

ಎಂ.ಮಹೇಶ
Published 5 ಜುಲೈ 2024, 22:53 IST
Last Updated 5 ಜುಲೈ 2024, 22:53 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ   

ಮೈಸೂರು: ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಅವರು ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಡಳಿತಾಧಿಕಾರಿಯಾಗಿದ್ದಾಗ ಹಲವು ಲೋಪಗಳನ್ನು ಗುರುತಿಸಿದ್ದರು.

‘ಬದಲಿ ನಿವೇಶನ ಮಂಜೂರಾತಿ ಹಾಗೂ ತುಂಡು ಜಾಗ ಹಂಚಿಕೆ ಮತ್ತು ಭೂಪರಿಹಾರವಾಗಿ ಜಾಗ ನೀಡುವುದನ್ನು ತಕ್ಷಣದಿಂದಲೇ ನಿಲ್ಲಿಸುವಂತೆ 2023ರ ಮಾರ್ಚ್‌ 14ರಂದು ಸರ್ಕಾರದಿಂದ ಪತ್ರ ಬಂದಿದೆ. ಈ ಆದೇಶದ ನಂತರವೂ, ಹಂಚಿಕೆ ಮಾಡಿ ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದು ವರದಿ ನೀಡಿದ್ದರು.

‘ಈ ಹಿಂದೆ ಪ್ರಾಧಿಕಾರವು ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಪ್ರಸ್ತುತ ಶೇ 50:50ರ ಅನುಪಾತದಲ್ಲಿ ಪರಿಹಾರ ಒದಗಿಸುತ್ತಿದ್ದು, ಭೂ ಮಾಲೀಕರಿಗೆ ಭೂ ಪರಿಹಾರ ಪಾವತಿಸಿಲ್ಲವೆಂಬುದು ಮತ್ತು ಅವರು ಈ ರೀತಿಯ ಪರಿಹಾರಕ್ಕೆ ಅರ್ಹರು ಎಂಬುದನ್ನು ಆಯುಕ್ತರು ನಿರ್ಧರಿಸಿ ಕ್ರಮವಹಿಸಿರುವುದನ್ನು ಗಮನಿಸಲಾಗಿದೆ’ ಎಂದು ವರದಿ ನೀಡಿದ್ದರು.

ADVERTISEMENT

ನಿಯಮ ಬದ್ಧವಾಗಿಲ್ಲ: ‘ಪ್ರಾಧಿಕಾರವು ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರದ ಅನುಮೋದನೆ ಪಡೆದು ಜಾರಿಗೆ ತರಲು ಮಾತ್ರವೇ ಕಾಯ್ದೆಯಲ್ಲಿ ಆಯುಕ್ತರಿಗೆ ಅವಕಾಶವಿದೆ. ಪರಿಹಾರಕ್ಕೆ ಆಯುಕ್ತರು ನಿರ್ಧರಿಸಿರುವ ಪ್ರಕರಣಗಳಲ್ಲಿ ಪ್ರಾಧಿಕಾರದ ಅನುಮೋದನೆ ಪಡೆಯದೇ ಕ್ರಮ ವಹಿಸಿರುವುದು ಕಂಡುಬಂದಿದ್ದು, ಇದು ನಿಯಮ ಬದ್ಧವಾಗಿರುವುದಿಲ್ಲ’.

‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು (ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲಾಗಿ ನಿವೇಶನಗಳ ಹಂಚಿಕೆ–2009) ನಿಯಮಗಳು 2015ರ ಫೆ.11ರಿಂದ ಜಾರಿಗೆ ಬಂದಿದ್ದು, ಹೊಸದಾಗಿ ಕೈಗೊಳ್ಳುವ ವಸತಿ ಯೋಜನೆಗಳಿಗೆ ಪೂರ್ವಾನ್ವಯ ಆಗಿ ಅಳವಡಿಸಿಕೊಳ್ಳಲು ಅವಕಾಶವಿರುವ ಬಗ್ಗೆ ಪರಿಶೀಲಿಸಬೇಕಿರುತ್ತದೆ’ ಎಂದು ಅಭಿಪ್ರಾಯ ವ್ಯಕ್ತ‍ಪಡಿಸಿದ್ದರು.

‘ಈ ಹಿಂದೆ ಭೂಸ್ವಾಧೀನ ವಾಗಿರುವ ಪ್ರಕರಣಗಳಲ್ಲಿ ಈಗ ಪರಿಹಾರ ನೀಡುತ್ತಿರುವ ಬಗ್ಗೆ ಮತ್ತು ಬದಲಿ ನಿವೇಶನ, ತುಂಡು ಜಾಗ ಮಂಜೂರಾತಿ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಸ್ವೀಕೃತವಾಗಿವೆ. ಇಂತಹ ಪ್ರಕರಣಗಳಲ್ಲಿ ಪ್ರಾಧಿಕಾರದ ಅನುಮೋದನೆ ಪಡೆಯದೇ ಆಯುಕ್ತರು ಕ್ರಮ ವಹಿಸಿದ್ದು, ಇದರಿಂದ ‘ಕಾರ್ಯ ವಿಧಾನದಲ್ಲಿ ಲೋಪ’ ಹಾಗೂ ‘ಆರ್ಥಿಕ ನಷ್ಟ’ವೂ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು.

ಶಿಸ್ತುಕ್ರಮಕ್ಕೆ ಕೋರಿದ್ದರು
‘ಪ್ರಾಧಿಕಾರದಲ್ಲಿ ಕಾನೂನು ಬಾಹಿರವಾಗಿ ಆಸ್ತಿಗಳನ್ನು ಹಂಚಿಕೆ ಮಾಡುತ್ತಿರುವ ಬಗ್ಗೆ ಆಯುಕ್ತರನ್ನು (ಆಗ ಜಿ.ಟಿ.ದಿನೇಶ್‌ಕುಮಾರ್‌ ಇದ್ದರು) ವಿಚಾರಣೆ ನಡೆಸಬೇಕು. ಅವರ ವಿರುದ್ಧ ಕೇಳಿಬಂದಿರುವ ಪ್ರತಿ ಆರೋಪವನ್ನೂ ಪರಾಮರ್ಶಿಸಲು ಮತ್ತು ಉಂಟಾಗಿರುವ ನಷ್ಟದ ಸಂಬಂಧ ಕ್ರಮ ಕೈಗೊಳ್ಳಲು ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಬೇಕು. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು 2023ರ ನ.27ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಅದಕ್ಕೂ ಮುನ್ನ ಆಯುಕ್ತರಿಗೆ ಎರಡು ಬಾರಿ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿದ್ದರು.
‘ಮುಡಾದಲ್ಲಿ ನಡೆದಿರುವುದು ಹಗರಣ ಎಂದು ಸಾಬೀತಾಗಿಲ್ಲ. ತನಿಖೆಗೆ ನಾಲ್ಕು ವಾರಗಳ ಗಡುವು ನೀಡಲಾಗಿದೆ. ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರಬರಲಿದೆ.
–ಬಿ.ಎಸ್.ಸುರೇಶ್‌, ಸಚಿವ, ನಗರಾಭಿವೃದ್ಧಿ ಮತ್ತು ನಗರ ಯೋಜನೆ
ಮುಡಾದಲ್ಲಿ ಕೆಲಸ ಮಾಡಿದ್ದವರಿಂದಲೇ ದೂರು!

‘ಮುಡಾದಲ್ಲಿ ಹಲವು ಪ್ರಕರಣಗಳಲ್ಲಿ ಭೂಮಾಲೀಕರಿಗೆ ಪರಿಹಾರ ನೀಡಿಲ್ಲವೆಂದು, ಬದಲಿಯಾಗಿ ಅಭಿವೃದ್ಧಿ ಹೊಂದಿದ ಜಾಗದಲ್ಲಿ ಬೆಲೆ ಬಾಳುವ ಆಸ್ತಿಗಳನ್ನು 50:50 ಅನುಪಾತದಲ್ಲಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ, ಪ್ರಾಧಿಕಾರಕ್ಕೆ ಹಾಗೂ ಸರ್ಕಾರಕ್ಕೆ ₹1ಸಾವಿರ ಕೋಟಿಗೂ ಹೆಚ್ಚು ಆರ್ಥಿಕ ನಷ್ಟ ಉಂಟು ಮಾಡಿ, ಅಕ್ರಮ ಲಾಭ, ಬೇನಾಮಿ ಆಸ್ತಿಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಮುಡಾದಲ್ಲೇ ನಗರ ಯೋಜನಾ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದ ಪಿ.ಎಸ್. ನಟರಾಜ್‌ ದೂರು ಸಲ್ಲಿಸಿದ್ದರು.

‘ಇದರಲ್ಲಿ ಹಿಂದಿನ ಕೆಲವು ಅಧ್ಯಕ್ಷರು, ಆಯುಕ್ತರು, ವಿಶೇಷ ಭೂಸ್ವಾಧೀನಾಧಿಕಾರಿ, ವಿಶೇಷ ತಹಶೀಲ್ದಾರ್‌ಗಳು ಹಾಗೂ ನೌಕರರು ಭಾಗಿಯಾಗಿದ್ದಾರೆ’ ಎಂದು ದೂರು ಅರ್ಜಿ ಸಲ್ಲಿಸಿದ್ದರು. ಇದನ್ನು ಆಧರಿಸಿ, ಪರಿಶೀಲಿಸಿದ ಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಗೆ 13 ಪತ್ರಗಳು ಬಂದಿವೆ ಎಂದು ಉಲ್ಲೇಖಿಸಿದ್ದರು.

ರಿಯಲ್ ಎಸ್ಟೇಟ್ ಉದ್ಯಮಿಯೊಡನೆ ಶಾಮೀಲಾಗಿ ಪ್ರಾಧಿಕಾರದ ಕೋಟ್ಯಂತರ ರೂಪಾಯಿ ಮೌಲ್ಯದ ನಿವೇಶನವನ್ನು ಹಂಚಿಕೆ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಕೆ.ಕೃಷ್ಣ ದೂರು ಸಲ್ಲಿಸಿದ್ದರು.

ಡಿ.ಸಿ ವರದಿಯ ಮುಖ್ಯಾಂಶಗಳು
  • ಆಯುಕ್ತರು ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ.

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಂಡ ನಿಯಮಗಳನ್ನು ಮುಡಾಕ್ಕೆ ಅನ್ವಯ ಮಾಡಿಕೊಳ್ಳಲು ಆಯುಕ್ತರಿಗೆ ಇರುವ ಅಧಿಕಾರದ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ.

  • ನ್ಯಾಯಾಲಯಗಳು ಭವಿಷ್ಯದಲ್ಲಿ ಆದೇಶ ಹೊರಡಿಸಬಹುದೆಂದು ಅಂದಾಜಿಸಿ ಪ್ರಾಧಿಕಾರಕ್ಕೆ ಮುಂದೆ ನಷ್ಟ ಉಂಟಾಗದಂತೆ ಕ್ರಮ ವಹಿಸುವುದಾಗಿ ಆಯುಕ್ತರು ತಿಳಿಸಿದ್ದಾರೆ. ನ್ಯಾಯಾಲಯದ ಆದೇಶ ಒಪ್ಪಲು ಬಾರದಿದ್ದ ಸಂದರ್ಭದಲ್ಲಿ ಅದನ್ನು ಪ್ರಶ್ನಿಸಲು ಅವಕಾಶಗಳಿದ್ದರೂ, ಅದರ ಬಗ್ಗೆ ಪರಾಮರ್ಶಿಸದೆ ಕ್ರಮ ವಹಿಸಲಾಗಿದೆ.

ಹಗರಣ ಬೆನ್ನಲ್ಲೇ ಡಿ.ಸಿ ವರ್ಗಾವಣೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಹೊರಬರುತ್ತಿದ್ದಂತೆಯೇ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಅವರು 2022ರ ಅ.27ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು ದಿಢೀರ್‌ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಮುಡಾ’ಕ್ಕೆ ಅಧ್ಯಕ್ಷರನ್ನು ನೇಮಿಸುವವರೆಗೆ ರಾಜೇಂದ್ರ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆಗ, ಪ್ರಾಧಿಕಾರದಲ್ಲಿ ನಡೆದಿದ್ದ ಲೋಪಗಳ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಗಮನ ಸೆಳೆದಿದ್ದರು.

ಹಿಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್‌ ಅವರಿಗೆ ಎರಡು ಬಾರಿ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿದ್ದರು. ಅಲ್ಲದೇ, ಶಿಸ್ತುಕ್ರಮ ಜರುಗಿಸುವಂತೆಯೂ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಭೂ ಪರಿಹಾರವಾಗಿ ನೀಡಲಾಗಿದ್ದ ಬದಲಿ ನಿವೇಶನಗಳ ಹಂಚಿಕೆ ವಿಷಯದ‍ಲ್ಲಿ ಆಗಿರುವ ಲೋಪಗಳನ್ನು ಸ್ಪಷ್ಟವಾಗಿ ಗುರುತಿಸಿದ್ದರು.

ಶೇ 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸರ್ಕಾರದಿಂದ ರಚಿಸಲಾಗಿರುವ ಸಮಿತಿಯು ತನಿಖೆ ನಡೆಸುತ್ತಿದ್ದು, ಈ ನಡುವೆ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.