ಮೈಸೂರು: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಕೆಲವು ಆಪ್ತರ ವರ್ತನೆ ಹಾಗೂ ಸಲಹೆಗಳೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆಯೇ?
–ಇಂಥದ್ದೊಂದು ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ನಡೆದಿದೆ. ‘ಆಪ್ತ ವಲಯದಲ್ಲಿ ಗುರುತಿಸಿಕೊಂಡ ಕೆಲವರ ಮಾತುಗಳನ್ನು ಅತಿಯಾಗಿ ನಂಬಿದ ಸಿದ್ದರಾಮಯ್ಯ, ತಮ್ಮನ್ನು ಸಮರ್ಥಿಸಿಕೊಳ್ಳುವಲ್ಲಿ ಎಡವಿದ ರೀತಿಯೇ ವಿವಾದ ಬೆಳೆಯಲು ಕಾರಣ’ ಎನ್ನಲಾಗುತ್ತಿದೆ.
‘ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಿನಲ್ಲಿದ್ದ 3.16 ಎಕರೆ ಜಮೀನನ್ನು ಕೊಟ್ಟು, ಪ್ರತಿಯಾಗಿ ಕಾನೂನಾತ್ಮಕವಾಗಿ 14 ನಿವೇಶನ ಪಡೆದಿದ್ದಾರೆ. ಹೀಗಾಗಿ ಹೆದರುವ ಅಗತ್ಯವಿರಲಿಲ್ಲ. ಆರೋಪ ಕೇಳಿಬರುತ್ತಲೇ ನಿವೇಶನಗಳನ್ನು ಹಿಂತಿರುಗಿಸಿ, ‘ತನಿಖೆ ಬಳಿಕವಷ್ಟೇ ವಾಪಸ್ ಪಡೆಯುತ್ತೇನೆ’ ಎಂಬ ಧೈರ್ಯ ತೋರಬೇಕಿತ್ತು. ಸ್ವತಂತ್ರ ತನಿಖೆಗೆ ಆದೇಶಿಸಬೇಕಿತ್ತು. ಆದರೆ, ಮುಖ್ಯಮಂತ್ರಿ ಸುತ್ತ ಇರುವ ಕೆಲವು ‘ಪಂಡಿತರು’ ಅವರನ್ನು ಓಲೈಸುವ ಭರದಲ್ಲಿ, ಪ್ರಕರಣದಲ್ಲಿ ಆಗಿರುವ ಲೋಪಗಳನ್ನೇ ಮುಚ್ಚಿಟ್ಟರು. ಅದೆಲ್ಲ ಗಮನಕ್ಕೆ ಬರುವಷ್ಟರಲ್ಲಿ ಪ್ರಕರಣ ದೊಡ್ಡದಾಯಿತು. ವಿರೋಧ ಪಕ್ಷಗಳಿಗೊಂದು ಪ್ರಬಲ ಅಸ್ತ್ರ ಸಿಕ್ಕಿತು’ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.
ಇಡೀ ಪ್ರಕರಣ ಬಯಲಿಗೆ ಬರಲು ಸಿದ್ದರಾಮಯ್ಯ ಆಪ್ತ ಬಳಗವೇ ಕಾರಣ. ಕಾಂಗ್ರೆಸ್‌ನ ಎರಡು ಗುಂಪುಗಳ ಒಳಜಗಳದಿಂದ ಅಕ್ರಮಗಳ ಗುಟ್ಟು ರಟ್ಟಾಯಿತು. ಆ ಭರದಲ್ಲೇ ಸಿದ್ದರಾಮಯ್ಯ ಕುಟುಂಬಕ್ಕೆ ನಿವೇಶನ ಹಂಚಿಕೆಯ ದಾಖಲೆಗಳೂ ಬಯಲಾದವು.
‘ಮುಡಾದಲ್ಲಿ ಶೇ 50:50 ಅನುಪಾತದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಮುಡಾ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ಆಪ್ತ ಕೆ.ಮರೀಗೌಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸ್ವತಃ ಅಧ್ಯಕ್ಷರೇ ಹೀಗೆ ಆರೋಪಿಸಿದ್ದು ಪ್ರತಿಪಕ್ಷಗಳಿಗೆ ಅಸ್ತ್ರವಾಯಿತು. ಅದರಿಂದಾಗಿ ಇಡೀ ಸರ್ಕಾರ ಮುಜುಗರಕ್ಕೆ ಸಿಲುಕಿತು.
ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇದೇ ಮರೀಗೌಡ ಅಂದಿನ ಜಿಲ್ಲಾಧಿಕಾರಿ ಸಿ. ಶಿಖಾ ಅವರನ್ನು ನಿಂದಿಸಿ, ನಂತರ ಒಂದಷ್ಟು ದಿನ ತಲೆಮರೆಸಿಕೊಂಡಿದ್ದರು. ಅದರಿಂದಾಗಿ ಸಿದ್ದರಾಮಯ್ಯ ಮುಜುಗರ ಪಟ್ಟುಕೊಳ್ಳುವಂತಾಗಿತ್ತು. ‘ಎರಡೂ ಅವಧಿಯಲ್ಲಿ ಮರಿಗೌಡರಿಂದಲೇ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದರು’ ಎಂದು ಕಾಂಗ್ರೆಸ್ ಮುಖಂಡರೇ ಅಸಮಾಧಾನ ಹೊರಹಾಕುತ್ತಾರೆ.
ಜುಲೈ 1ರಂದು ಮುಡಾಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಭೆ ನಡೆಸಿ, ಆಯುಕ್ತರೂ ಸೇರಿದಂತೆ ಮೂವರು ಅಧಿಕಾರಿಗಳ ವರ್ಗಾವಣೆಗೆ ಸೂಚಿಸಿದ್ದರು. ಆದರೆ, ‘ಇಷ್ಟೆಲ್ಲ ದಾಖಲೆಗಳಿದ್ದರೂ ಅಧಿಕಾರಿಗಳನ್ನು ಅಮಾನತು ಮಾಡದೇ, ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿದರು’ ಎಂಬ ಆರೋಪವೂ ಇದೆ.
‘ಜುಲೈನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮುಡಾ ಹಗರಣಗಳ ಚರ್ಚೆಗೆ ಸರ್ಕಾರ ಅವಕಾಶ ನೀಡಿದ್ದರೆ ಪ್ರಕರಣ ಅಲ್ಲಿಯೇ ಮುಗಿಯುತ್ತಿತ್ತು. ಆದರೆ ಅಧಿವೇಶನ ಆರಂಭದ ಹಿಂದಿನ ರಾತ್ರಿ ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಯವರಿದ್ದ ಏಕಸದಸ್ಯ ಆಯೋಗಕ್ಕೆ ಒಪ್ಪಿಸಿ ಸರ್ಕಾರ ಆದೇಶಿಸಿತ್ತು. ತನಿಖೆಯ ನೆಪವೊಡ್ಡಿ ಚರ್ಚೆಗೆ ಅವಕಾಶ ನಿರಾಕರಿಸಲಾಯಿತು. ಅದರಿಂದ ಕೆರಳಿದ ಪ್ರತಿಪಕ್ಷಗಳು ಪಾದಯಾತ್ರೆಯ ನಿರ್ಣಯ ಕೈಗೊಂಡವು. ಆಗ ಕಾನೂನು ತಜ್ಞರು ಸೂಕ್ತ ಸಲಹೆ ನೀಡಬೇಕಿತ್ತು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಪ್ರತಿಪಾದಿಸುತ್ತಾರೆ.
ಅಲ್ಲದೆ, ಬದಲಿ ನಿವೇಶನ ಹಂಚಿಕೆ ಸಮರ್ಥಿಸಿಕೊಳ್ಳುವ ಭರದಲ್ಲಿ ಸಿದ್ದರಾಮಯ್ಯ, ‘ನಮ್ಮ ಜಮೀನಿಗೆ ₹62 ಕೋಟಿ ಪರಿಹಾರ ಕೊಡಿ’ ಎಂದಿದ್ದರು. ನಂತರ, ‘ನಿವೇಶನಗಳನ್ನು ವಾಪಸ್ ಕೊಡಲು ಸಿದ್ಧ’ ಎಂದೂ ಹೇಳಿದ್ದು ಅವರಿಗೆ ಮುಳುವಾಯಿತು ಎಂಬ ಚರ್ಚೆ ನಡೆಯುತ್ತಿದೆ.
* ಮುಡಾ ಬಡಾವಣೆ ನಿರ್ಮಿಸಿದ ನಂತರ ಕೃಷಿ ಜಮೀನು ಎಂದು ನೋಂದಣಿ ಮಾಡಿದ್ದಾರೆ
* ಡಿನೋಟಿಫೈ ಹಿಂದೆ ಸಿದ್ದರಾಮಯ್ಯ ಪ್ರಭಾವ ಇದೆ
* ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಜಮೀನಿನ ದಾಖಲೆಗಳನ್ನು ತಿದ್ದಲಾಗಿದೆ
* ವಿಜಯನಗರ ಬಡಾವಣೆಯಲ್ಲಿ ದುಬಾರಿ ಮೌಲ್ಯದ ಬದಲಿ ನಿವೇಶನ ಪಡೆದಿದ್ದಾರೆ
* ಡಿನೋಟಿಫೈ ಆದ ಜಮೀನನ್ನು ಮುಡಾ ವಶಕ್ಕೆ ಪಡೆದಿದ್ದು, ಪ್ರಾಧಿಕಾರವೇ ಒಪ್ಪಿಕೊಂಡಿದೆ
* ಕಾನೂನಾತ್ಮಕವಾಗಿಯೇ ಬದಲಿ ನಿವೇಶನ ಹಂಚಿಕೆ ಆಗಿದೆ
* ನಿರ್ದಿಷ್ಟ ಸ್ಥಳದಲ್ಲೇ ಬದಲಿ ನಿವೇಶನ ಕೊಡಿ ಎಂದು ಕೇಳಿಲ್ಲ
* ನಿವೇಶನ ಹಂಚಿಕೆ ಮಾಡಿದ್ದೇ ಬಿಜೆಪಿ ಸರ್ಕಾರ
* ಡಿನೋಟಿಫೈ, ಜಮೀನು ನೋಂದಣಿ ಸಂಬಂಧ ಯಾರ ಮೇಲೂ ಪ್ರಭಾವ ಬೀರಿಲ್ಲ
ಸಿದ್ದರಾಮಯ್ಯ ಹಿತಶತ್ರುಗಳ ಮಾತು ಕೇಳಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾನೂನು ಸಲಹೆಗಾರರು ಸೂಕ್ತ ಸಲಹೆ ನೀಡಿಲ್ಲ. ಆರಂಭದಲ್ಲೇ 14 ನಿವೇಶನಗಳನ್ನು ಹಿಂತಿರುಗಿಸಿ ಮುಡಾ ಆಯುಕ್ತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿತ್ತುಟಿ.ಎಸ್. ಶ್ರೀವತ್ಸ ಬಿಜೆಪಿ ಶಾಸಕ
ನಿವೇಶನಗಳನ್ನು ಹಿಂತಿರುಗಿಸುವಂತೆ ಆರಂಭದಲ್ಲೇ ಸಲಹೆ ನೀಡಿದ್ದೆ. ಬುದ್ಧಿ ಹೇಳುವವರಿಗಿಂತ ಅವರ ಸುತ್ತ ಕುಳಿತಿರುವ ಕೆಟ್ಟ ಸಲಹೆಗಾರರ ಕೈ ಮೇಲಾಗಿದೆ. ಕಾನೂನು ಓದಿದವರು ಕಾನೂನಿಗೆ ಬಗ್ಗಬೇಕು. ರಂಪ ಮಾಡಿಕೊಳ್ಳಬಾರದುಎಚ್. ವಿಶ್ವನಾಥ್ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.