ADVERTISEMENT

Muda Scam: ಮುಡಾ ದಾಖಲೆಗೆ ಇ.ಡಿ ಬೇಟೆ

ಮೈಸೂರು ತಾಲ್ಲೂಕು ಕಚೇರಿ, ದೇವರಾಜು ನಿವಾಸದಲ್ಲಿ ಕಡತ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 22:36 IST
Last Updated 18 ಅಕ್ಟೋಬರ್ 2024, 22:36 IST
   

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದ್ದ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು (ಇ.ಡಿ), ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿ ಮತ್ತು ಮೈಸೂರು ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಶೋಧ ಕಾರ್ಯ ಆರಂಭಿಸಿದೆ.

ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ಕೆಂಗೇರಿ ನಿವಾಸದಲ್ಲೂ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.

12 ಅಧಿಕಾರಿಗಳಿದ್ದ ಇ.ಡಿ ತಂಡವು, ಶುಕ್ರವಾರ ಬೆಳಿಗ್ಗೆ ಮುಡಾ ಕಚೇರಿಗೆ ಬಂದಿದೆ. ಸಾರ್ವಜನಿಕರನ್ನು ಹೊರಗೆ ಕಳುಹಿಸಿ, ಮುಡಾ ಕಚೇರಿ ಆವರಣದ ಗೇಟಿಗೆ ಬೀಗ ಹಾಕಿ ಶೋಧಕಾರ್ಯ ಆರಂಭಿಸಿದ್ದಾರೆ.

ADVERTISEMENT

ಕಚೇರಿಯಲ್ಲಿ ಇಲ್ಲದ ಸಿಬ್ಬಂದಿಗೆ ಕರೆ ಮಾಡಿ, ಕರೆಸಿಕೊಂಡಿದ್ದಾರೆ. 

‘ಸ್ಥಳದಲ್ಲೇ ನೋಟಿಸ್‌ ನೀಡಿ, ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ಎಂದು ಇ.ಡಿ ಅಧಿಕಾರಿಗಳು ಸೂಚಿಸಿದ್ದಾರೆ. ಶುಕ್ರವಾರ ಮತ್ತು ಶನಿವಾರ ಶೋಧನೆ ನಡೆಯಲಿದೆ ಎಂದು ಹೇಳಿದ್ದಾರೆ. ಯಾವ ಮಾಹಿತಿಯನ್ನೂ ಹೊರಗೆ ಹೇಳದಂತೆ ಸೂಚಿಸಿದ್ದಾರೆ’ ಎಂದು ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಸುಮಾರು 60 ಪ್ರಶ್ನೆಗಳಿರುವ ಕಾಗದಗಳನ್ನು ಎಲ್ಲ ಸಿಬ್ಬಂದಿಗೆ ನೀಡಿ, ಅವುಗಳಿಗೆ ಉತ್ತರಿಸಲು ಸೂಚಿಸಿದ್ದಾರೆ. ಸಿಬ್ಬಂದಿ ನೀಡುವ ಉತ್ತರಗಳು ಪರಸ್ಪರ ಮತ್ತು ದಾಖಲೆಗಳೊಂದಿಗೂ ತಾಳೆಯಾಗುತ್ತವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮುಡಾ ಕಾರ್ಯವೈಖರಿ, ನಿವೇಶನ ಹಂಚಿಕೆ ಪ್ರಕ್ರಿಯೆ ಕುರಿತ ಪ್ರಶ್ನೆಗಳೂ ಇವೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ದೇವರಾಜು ಅವರ ನಿವಾಸದಲ್ಲಿ ಲಭ್ಯವಿದ್ದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಅವರಿಂದ ವಿವರಣೆ ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಸಿದ್ದರಾಮಯ್ಯ ಹಾಗೂ ಪಾರ್ವತಿ ಅವರನ್ನು ಮಾತ್ರ ಗುರಿಯಾಗಿಸಿ ಇ.ಡಿಗೆ ದೂರು ನೀಡಿಲ್ಲ. ಮುಡಾದ ₹5 ಸಾವಿರ ಕೋಟಿ ಭ್ರಷ್ಟಾಚಾರ ಹಗರಣ ಬಯಲಿಗೆಳೆಯಲು ದೂರು ಕೊಟ್ಟಿರುವೆ. ಪ್ರಕರಣದಲ್ಲಿ ಕಾಂಗ್ರೆಸ್‌, ಬಿಜೆಪಿ ಯಾವುದೇ ‍ಪಕ್ಷದವರಿರಲಿ, ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಕೈಬಿಡುವುದಿಲ್ಲ’ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.

ರಾಜೀನಾಮೆಗೆ ಆಗ್ರಹ: ‘ಮುಡಾ ಕಡತಗಳು ಸಚಿವ ಬೈರತಿ ಸುರೇಶ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯಲ್ಲಿವೆ. ಕಾಣೆಯಾದ ಕಡತಗಳ ಪತ್ತೆಯಾಗಲಿ. ಸಿ.ಎಂ ರಾಜೀನಾಮೆ ನೀಡಲಿ’ ಎಂದು ಬಿಜೆಪಿ ಶಾಸಕ ಟಿ.ಎಸ್‌.ಶ್ರೀವತ್ಸ ಆಗ್ರಹಿಸಿದರು.

‘ಮುಖ್ಯಮಂತ್ರಿ ಕುಟುಂಬ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಇ.ಡಿ ಗಂಭೀರವಾಗಿ ಪರಿಗಣಿಸಿದೆ. ಸಿ.ಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ’ ಎಂದು ಬಿಜೆಪಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಇ.ಡಿ ಶೋಧಕಾರ್ಯ ಆರಂಭಿಸಿರುವುದು, ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟಕ್ಕೆ ಸಿಕ್ಕಿರುವ ಮೊದಲ ಜಯ. ತನಿಖೆ ಮುಂದುರಿದಂತೆ ಸತ್ಯ ಹೊರಗೆ ಬರಲಿದೆ
ಸ್ನೇಹಮಯಿ ಕೃಷ್ಣ, ದೂರುದಾರ
ಎಲ್ಲ ದಾಖಲೆಗಳೂ ಸಾರ್ವಜನಿಕವಾಗಿ ಲಭ್ಯವಿದ್ದು, ಇ.ಡಿ ಶೋಧ ನಡೆಸುವ ಅಗತ್ಯವೇ ಇರಲಿಲ್ಲ. ಯಾವ ದಾಖಲೆ ತಿದ್ದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಮುಡಾದಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ ನಾಯಕರೇ ಹೇಳಿದ್ದರು. ಶೋಧದ ಬಗ್ಗೆ ಅಸಮಾಧಾನ ಇದ್ದರೆ ನ್ಯಾಯಾಲಯಕ್ಕೆ ಹೋಗಲಿ
ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಮುಡಾಗೆ ಸಂಬಂಧಿಸಿದಂತೆ ಇ.ಡಿ ತನಿಖೆ ತೀವ್ರಗೊಳಿಸಿರುವುದರಿಂದ ಹಗರಣ ಬಯಲಾಗಲಿದೆ. ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಲಿದೆ ಎಂಬ ನಿರೀಕ್ಷೆ ಮೂಡಿದೆ
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

‘8 ಲಕ್ಷ ಪುಟಗಳನ್ನು ನೀಡಬೇಕಾಗುತ್ತದೆ’

‘ಮುಡಾದಲ್ಲಿ ನಿವೇಶನ ಹಂಚಿಕೆ ಸಂಬಂಧ ಎಲ್ಲ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಕೇಳಿದರೆ, ಸುಮಾರು 8 ಲಕ್ಷ ಪುಟಗಳಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ನ್ಯಾಯಮೂರ್ತಿ ದೇಸಾಯಿ ಆಯೋಗವು 8 ಲಕ್ಷ ಪುಟಗಳಷ್ಟು ದಾಖಲೆಗಳನ್ನು ಕಲೆ ಹಾಕಿದೆ. ಅದನ್ನು ಪ್ರತಿ ಮಾಡಿಕೊಳ್ಳಲು ವಾರವೇ ಬೇಕಾಗುತ್ತದೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದನ್ನು ಇ.ಡಿ ದಾಳಿ ಎಂದು ಹೇಳಲಾಗದು. ಮಾಹಿತಿ ಪಡೆಯಲು ಮತ್ತು ದಾಖಲೆಗಳನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಬಂದಿದ್ದಾರೆ. ಅದನ್ನು ಒದಗಿಸುವ ಕೆಲಸ ಮುಡಾ ಮತ್ತು ಇಲಾಖೆಯ ಅಧಿಕಾರಿಗಳು ಮಾಡುತ್ತಾರೆ’ ಎಂದಿದ್ದಾರೆ.

ಏನೆಲ್ಲಾ ಪರಿಶೀಲನೆ?

  • ಕೆಸರೆ ಗ್ರಾಮದ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವ ಸಂಬಂಧ ಬಂದ ಅರ್ಜಿಗಳು, ಅರ್ಜಿಗಳ ವಿಲೇವಾರಿ ಕಡತಗಳು

  • ಕೆಸರೆ ಗ್ರಾಮದ ಜಮೀನು ಕಂದಾಯ ಇಲಾಖೆಯಿಂದ ಮುಡಾಗೆ ವರ್ಗಾವಣೆಯಾದ ಮತ್ತು ಭೂಸ್ವಾಧೀನದ ನಂತರ ನಡೆದ ಪ್ರಕ್ರಿಯೆಗಳ ಕಡತಗಳು

  • 50:50ರ ಅನುಪಾತದಲ್ಲಿ ನಿವೇಶನಗಳನ್ನು ಪಡೆದುಕೊಂಡ ಎಲ್ಲರ ವಿವರ, ನಿವೇಶನ ಹಂಚಿಕೆಗೆ ಅನುಸರಿಸಲಾದ ಇತರ ಮಾನದಂಡಗಳು

  • ಪರಿಹಾರ ಕೋರಿ ಪಾರ್ವತಿ ಅವರು ಸಲ್ಲಿಸಿದ್ದ ಅರ್ಜಿಗಳು, ಸಭೆಯ ನಿರ್ಣಯಗಳು, ನಿವೇಶನ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳು

  • 2015ರ ನಂತರ ಹಂಚಿಕೆಯಾದ ನಿವೇಶನಗಳು, ಫಲಾನುಭವಿ ಗಳು, ಹಂಚಿಕೆ ಮಾನದಂಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.